ಕಬ್ಬಿಗೆ ಪ್ರತಿ ಟನ್ಗೆ ಕನಿಷ್ಠ 5,500 ರೂ. ಬೆಂಬಲ ಬೆಲೆ ನೀಡುವಂತೆ ಆಗ್ರಹಿಸಿ ರಾಜ್ಯಾದ್ಯಂತ ನಡೆಯುತ್ತಿರುವ ಕಬ್ಬು ಬೆಳೆಗಾರರ ಹೋರಾಟಕ್ಕೆ ಹುಬ್ಬಳ್ಳಿಯ ರೈತರು ಬೆಂಬಲ ಸೂಚಿಸಿದರು.
- ನಿಷೇಧಾಜ್ಞೆ ನಡುವೆಯೂ ನಗರದಲ್ಲೇ ಪ್ರತಿಭಟನೆ
- ದುರ್ಗದಬೈಲ್ನಿಂದ ಇಂಡಿಪಂಪ್ ವರೆಗೆ ಮೆರವಣಿಗೆ, ಮಾನವ ಸರಪಳಿ ನಿರ್ಮಿಸಿ ಆಕ್ರೋಶ
ಕನ್ನಡಪ್ರಭ ವಾರ್ತೆ ಹುಬ್ಬಳ್ಳಿಕಬ್ಬಿಗೆ ಪ್ರತಿ ಟನ್ಗೆ ಕನಿಷ್ಠ ₹5,500 ಬೆಂಬಲ ಬೆಲೆ ನೀಡುವಂತೆ ಆಗ್ರಹಿಸಿ ರಾಜ್ಯಾದ್ಯಂತ ನಡೆಯುತ್ತಿರುವ ಕಬ್ಬು ಬೆಳೆಗಾರರ ಹೋರಾಟಕ್ಕೆ ಹುಬ್ಬಳ್ಳಿಯ ರೈತರು ಬೆಂಬಲ ಸೂಚಿಸಿದರು.
ಹಳೇ ಹುಬ್ಬಳ್ಳಿ ಬಸವೇಶ್ವರ ರೈತ ಸಂಘ ಸೇರಿದಂತೆ ಸುತ್ತಮುತ್ತಲಿನ 10ಕ್ಕೂ ಹೆಚ್ಚು ಹಳ್ಳಿಗಳಿಂದ ಆಗಮಿಸಿದ ರೈತರು ಹಳೇ ಹುಬ್ಬಳ್ಳಿ ಭಾಗದಲ್ಲಿ ಅಂಗಡಿ- ಮುಂಗಟ್ಟುಗಳನ್ನು ಬಂದ್ ಮಾಡುವಂತೆ ವ್ಯಾಪಾರಸ್ಥರಲ್ಲಿ ಕೈಮುಗಿದು ಮನವಿ ಮಾಡಿದರು.ರಾಷ್ಟ್ರೀಯ ಹೆದ್ದಾರಿಗಳಲ್ಲಿ ಪ್ರತಿಭಟನೆಗೆ ನಿಷೇಧಾಜ್ಞೆ ಜಾರಿಯಲ್ಲಿರುವ ಹಿನ್ನೆಲೆಯಲ್ಲಿ ರೈತರು ನಗರ ಪ್ರದೇಶದಲ್ಲೇ ಹೋರಾಟ ನಡೆಸಿದರು. ಬೆಳಗ್ಗೆ ಸುಮಾರು 11 ಗಂಟೆಗೆ ದುರ್ಗದಬೈಲ್ ವೃತ್ತದಲ್ಲಿ ಜಮಾಯಿಸಿದದರು. ಬಳಿಕ ಚನ್ನಪೇಟೆ, ಗೌಳಿಗಲ್ಲಿ, ದಿನಸಿ ಮಾರುಕಟ್ಟೆ ಮಾರ್ಗವಾಗಿ ಪ್ರತಿಭಟನಾ ಮೆರವಣಿಗೆ ನಡೆಸಿದರು.
ರೈತ ಹೋರಾಟಕ್ಕೆ ಬೆಂಬಲ ನೀಡುವಂತೆ ಮನವಿ ಮಾಡುತ್ತಿದ್ದಂತೆ ಹಲವು ವ್ಯಾಪಾರಸ್ಥರು ಸ್ವಯಂಪ್ರೇರಿತವಾಗಿ ಅಂಗಡಿ- ಮಳಿಗೆಗಳನ್ನು ಬಂದ್ ಮಾಡಿದರು. ಹಣ್ಣು ಮತ್ತು ತರಕಾರಿ ವ್ಯಾಪಾರಸ್ಥರಲ್ಲೂ ಸಹಕಾರ ಕೋರಿದ ವೇಳೆ ಕೆಲಕಾಲ ಮಾತಿನ ಚಕಮಕಿ ನಡೆಯಿತು. ಹಳೇ ಹುಬ್ಬಳ್ಳಿ ಠಾಣೆ ಪೊಲೀಸರ ಮಧ್ಯಪ್ರವೇಶದಿಂದ ಪರಿಸ್ಥಿತಿ ತಿಳಿಯಾಯಿತು.ಬಳಿಕ ದುರ್ಗದಬೈಲ್ನಲ್ಲಿ ಮಾನವ ಸರಪಳಿ ನಿರ್ಮಿಸಿ ರಸ್ತೆ ಸಂಚಾರಕ್ಕೆ ಕೆಲಕಾಲ ತಡೆ ಒಡ್ಡಿದ ರೈತರು, ಇಂಡಿಪಂಪ್ ವೃತ್ತಕ್ಕೆ ತೆರಳಿ ಧರಣಿ ನಡೆಸಿದರು. ನೆತ್ತಿ ಸುಡುವ ಬಿಸಿಲಿನಲ್ಲೂ ಮಾನವ ಸರಪಳಿ ನಿರ್ಮಿಸಿ ರಾಜ್ಯ ಹಾಗೂ ಕೇಂದ್ರ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು.
ಈ ವೇಳೆ ಮಾತನಾಡಿದ ರೈತ ಮುಖಂಡ ವೀರಯ್ಯಸ್ವಾಮಿ ಸಾಲಿಮಠ, ಗ್ಯಾರಂಟಿ ಯೋಜನೆಗಳಿಗೆ ಹಣ ಹೊಂದಿಸುವ ಸರ್ಕಾರಕ್ಕೆ ರೈತರಿಗೆ ಪ್ರೋತ್ಸಾಹಧನ ನೀಡಲು ಸಾಧ್ಯವಾಗುತ್ತಿಲ್ಲ. ಎರಡು ತಿಂಗಳ ಕಾಲ ಗ್ಯಾರಂಟಿ ಯೋಜನೆಗಳನ್ನು ಸ್ಥಗಿತಗೊಳಿಸಿ, ಕಬ್ಬಿಗೆ ಪ್ರತಿ ಟನ್ಗೆ ₹1,000 ಪ್ರೋತ್ಸಾಹಧನ ನೀಡಬೇಕು. ರಾಜ್ಯ ಸರ್ಕಾರ ತಕ್ಷಣವೇ ತನ್ನ ಪಾಲಿನ ಬೆಂಬಲ ಬೆಲೆ ಘೋಷಿಸಬೇಕು ಎಂದು ಆಗ್ರಹಿಸಿದರು.ಇಂಡಿಪಂಪ್ ವೃತ್ತದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿತ್ತು. ವಾಹನಗಳಿಗೆ ಪರ್ಯಾಯ ಮಾರ್ಗ ಕಲ್ಪಿಸಲಾಗಿತ್ತಾದರೂ, ಕೆಲ ಆಯಕಟ್ಟಿನ ಪ್ರದೇಶಗಳಲ್ಲಿ ವಾಹನ ದಟ್ಟಣೆ ಉಂಟಾಗಿ ಸವಾರರು ಪರದಾಡಿದರು.
ಈ ವೇಳೆ ಶಿವಾನಂದಪ್ಪ ಹೊಸೂರ, ಬಸವರಾಜ ಹೊಸೂರ, ಮಂಜುನಾಥ ಕುಲಕರ್ಣಿ, ಜಗದೀಶ ಗಿರೆಮ್ಮನವರ, ನಾಗರಾಜ ಬಾಳಿಕಾಯಿ, ಚನ್ನಪ್ಪ ಅಂಗಡಿ, ಮಹೇಶ ಕುರಿಯವರ ಹನುಮಂತ ಗಾಳಿ, ಗುರಣ್ಣ ರಾಯನಾಳ, ಮಂಜುನಾಥ, ಮಂಜು ಕಾಟಕರ್, ಮಾಲತೇಶ ಕಂಬಳಿ ಸೇರಿದಂತೆ ನೂಲ್ವಿ, ಬೆಳಗಲಿ, ಪಾಲಿಕೊಪ್ಪ, ಛಬ್ಬಿ, ಮಾವನೂರ, ಕಟ್ನೂರ, ಗಿರಿಯಾಲ, ಗೋಪನಕೊಪ್ಪ, ಕುರಡಿಕೇರಿ, ಬೆಳಗಲಿ, ಕರಡಿಕೊಪ್ಪ ಸೇರಿದಂತೆ ಹಲವು ಗ್ರಾಮಗಳಿಂದ ರೈತರು ಪಾಲ್ಗೊಂಡಿದ್ದರು.ಪೊಲೀಸರೊಂದಿಗೆ ರೈತರ ವಾಗ್ವಾದ:ಇಂಡಿಪಂಪ್ ವೃತ್ತದಲ್ಲಿ ರಸ್ತೆ ತಡೆದು ಪ್ರತಿಭಟನೆ ನಡೆಸುತ್ತಿದ್ದ ವೇಳೆ ರಸ್ತೆಗೆ ಅಡ್ಡಲಾಗಿ ಇರಿಸಿದ್ದ ಬೃಹತ್ ಪೈಪ್ ತೆರವುಗೊಳಿಸಲು ಪೊಲೀಸರು ಮುಂದಾದರು. ಈ ಸಂದರ್ಭದಲ್ಲಿ ಪ್ರತಿಭಟನಾಕಾರರು ಹಾಗೂ ಪೊಲೀಸರ ನಡುವೆ ತೀವ್ರ ವಾಗ್ವಾದ ನಡೆಯಿತು. ಡಿಸಿಪಿ ರವೀಶ್ ಸಿ.ಆರ್. ಹಾಗೂ ಎಸಿಪಿ ಯು.ಬಿ. ಚಿಕ್ಕಮಠ ಮಧ್ಯಪ್ರವೇಶಿಸಿ ಪರಿಸ್ಥಿತಿ ನಿಯಂತ್ರಿಸಲು ಯತ್ನಿಸಿದರು. ಈ ವೇಳೆ ತಳ್ಳಾಟ-ನೂಕಾಟ ನಡೆದು ಕೆಲಕಾಲ ಗೊಂದಲದ ವಾತಾವರಣ ನಿರ್ಮಾಣವಾಯಿತು. ಬಳಿಕ ರೈತ ಮುಖಂಡರು ಪ್ರತಿಭಟನೆಯ ನೇತೃತ್ವ ವಹಿಸಿರುವುದು ಶಶಿಕಾಂತ ಗುರೂಜಿ ಅವರಿಗೆ ಕರೆ ಮಾಡಿದ ಡಿಸಿಪಿ ರವೀಶ್ ಅವರಿಗೆ ನೀಡಿದರು. ಆಗ ಪೊಲೀಸ್ ಅಧಿಕಾರಿಗಳ ಮಾತುಕತೆ ನಡೆದ ನಂತರ, ಹಗಲು-ರಾತ್ರಿ ನಡೆಸಲು ಉದ್ದೇಶಿಸಿದ್ದ ಪ್ರತಿಭಟನೆಯನ್ನು ಶನಿವಾರ ಸಂಜೆ 6 ಗಂಟೆಯ ವರೆಗೆ ಮುಂದುವರಿಸುವ ನಿರ್ಧಾರ ಕೈಗೊಳ್ಳಲಾಯಿತು.