ಕಂಪ್ಲಿ: ಅಲೆಮಾರಿ ಸಮುದಾಯಗಳ ನೈಜ ಸ್ಥಿತಿಗತಿಯನ್ನು ಅರಿತು ಸರ್ಕಾರಕ್ಕೆ ಸಮಗ್ರ ವರದಿ ಸಲ್ಲಿಸುವ ಉದ್ದೇಶದಿಂದ ಕೆಪಿಸಿಸಿ ಸಾಮಾಜಿಕ ನ್ಯಾಯ ಸಮಿತಿ ರಾಜ್ಯ ಉಪಾಧ್ಯಕ್ಷ ವೈ.ಶಿವಕುಮಾರ್ ಶನಿವಾರ ಪಟ್ಟಣದ ಅಲೆಮಾರಿ ಸಿಂಧೋಳ್ಳು ಸಮುದಾಯ ಕಾಲನಿಗೆ ಭೇಟಿ ನೀಡಿ ಸಮುದಾಯದ ಸದಸ್ಯರೊಂದಿಗೆ ಸಮಾಲೋಚನೆ ನಡೆಸಿದರು.
ಕಾಲನಿಯಲ್ಲಿನ ಜನರ ಜೀವನ ಪರಿಸ್ಥಿತಿ, ಮೂಲಭೂತ ಸೌಲಭ್ಯಗಳ ಕೊರತೆ, ವಸತಿ ಸಮಸ್ಯೆ, ಮಕ್ಕಳ ಶಿಕ್ಷಣ, ಉದ್ಯೋಗ ಹಾಗೂ ಆರೋಗ್ಯದಂತಹ ವಿವಿಧ ವಿಚಾರಗಳ ಕುರಿತು ಅವರು ಅಲೆಮಾರಿ ಕುಟುಂಬಗಳಿಂದ ಮಾಹಿತಿ ಪಡೆದುಕೊಂಡರು. ಈ ವೇಳೆ ಸಮುದಾಯದ ಹಿರಿಯರು ಮತ್ತು ಮಹಿಳೆಯರು ತಮ್ಮ ಸಂಕಷ್ಟಗಳನ್ನು ವಿವರಿಸಿ ಸರ್ಕಾರದಿಂದ ಶಾಶ್ವತ ಪರಿಹಾರ ಕಲ್ಪಿಸಬೇಕೆಂದು ಮನವಿ ಮಾಡಿದರು.ಈ ಸಂದರ್ಭದಲ್ಲಿ ರಾಜ್ಯ ಅಲೆಮಾರಿ, ಅರೆ ಅಲೆಮಾರಿ ಹಾಗೂ ವಿಮುಕ್ತ ಬುಡಕಟ್ಟುಗಳ ಒಕ್ಕೂಟದ ರಾಜ್ಯ ಸಂಘಟನಾ ಕಾರ್ಯದರ್ಶಿ ಎಚ್.ಪಿ. ಶಿಕಾರಿ ರಾಮು ಮಾತನಾಡಿ, ಅಲೆಮಾರಿ ಸಮುದಾಯಗಳಿಗೆ ತಾತ್ಕಾಲಿಕ ಸೌಲಭ್ಯಗಳನ್ನು ನೀಡುವುದರಿಂದ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಸಿಗುವುದಿಲ್ಲ. ಅಲೆಮಾರಿತನದಿಂದ ಕುಟುಂಬಗಳು ಶಿಕ್ಷಣ, ಆರೋಗ್ಯ ಮತ್ತು ಉದ್ಯೋಗದ ಹಿನ್ನಡೆಯನ್ನು ಅನುಭವಿಸುತ್ತಿದ್ದು, ಸರ್ಕಾರವು ಅವರಿಗೆ ಶಾಶ್ವತ ನೆಲೆ ಕಲ್ಪಿಸುವ ನಿಟ್ಟಿನಲ್ಲಿ ವಿಶೇಷ ಯೋಜನೆ ರೂಪಿಸಬೇಕು ಎಂದು ಒತ್ತಾಯಿಸಿದರು.
ರಾಜ್ಯ ಅಲೆಮಾರಿ ಮತ್ತು ಅರೆ ಅಲೆಮಾರಿ ಅಭಿವೃದ್ಧಿ ನಿಗಮಕ್ಕೆ ಕನಿಷ್ಠ ₹500 ಕೋಟಿ ಅನುದಾನ ಬಿಡುಗಡೆ ಮಾಡಿ ಸಮುದಾಯದ ಸಮಗ್ರ ಅಭಿವೃದ್ಧಿಗೆ ಕ್ರಮ ಕೈಗೊಳ್ಳಬೇಕು ಎಂದು ಮನವಿ ಸಲ್ಲಿಸಿದರು.ಕೆಪಿಸಿಸಿ ಸಾಮಾಜಿಕ ನ್ಯಾಯ ಸಮಿತಿ ರಾಜ್ಯ ಉಪಾಧ್ಯಕ್ಷ ವೈ.ಶಿವಕುಮಾರ್ ಮಾತನಾಡಿ, ಜಿಲ್ಲೆಯಲ್ಲಿ ಸುಮಾರು 2,500 ಅಲೆಮಾರಿ ಕುಟುಂಬಗಳಿದ್ದು, ರಾಜ್ಯಾದ್ಯಂತ ಸುಮಾರು 75 ಸಾವಿರಕ್ಕೂ ಅಧಿಕ ಕುಟುಂಬಗಳು ಸಂಕಷ್ಟಕರ ಪರಿಸ್ಥಿತಿಯಲ್ಲಿ ಜೀವನ ಸಾಗಿಸುತ್ತಿವೆ ಎಂದರು.
ಮಳೆಗಾಲದಲ್ಲಿ ಅಲೆಮಾರಿ ಕುಟುಂಬಗಳು ತೀವ್ರ ತೊಂದರೆ ಅನುಭವಿಸುತ್ತಿರುವ ಹಿನ್ನೆಲೆಯಲ್ಲಿ ಮಳೆಯಿಂದ ರಕ್ಷಣೆಗಾಗಿ ಜಿಲ್ಲೆಯ 1,100 ಅಲೆಮಾರಿ ಕುಟುಂಬಗಳನ್ನು ಒಳಗೊಂಡಂತೆ ರಾಜ್ಯದ ವಿವಿಧ ಭಾಗಗಳ ಅಲೆಮಾರಿಗಳಿಗೆ 20 ಸಾವಿರ ತಾಡಪಾಲ್ ವಿತರಿಸಲಾಗಿದೆ ಎಂದರು.
ಮುಂದಿನ ದಿನಗಳಲ್ಲಿ ಸಮುದಾಯದ ಶಿಕ್ಷಣ, ಆರೋಗ್ಯ ಹಾಗೂ ಉದ್ಯೋಗಾಭಿವೃದ್ಧಿಗೆ ವಿಶೇಷ ಕಾರ್ಯಕ್ರಮಗಳನ್ನು ರೂಪಿಸಲಾಗುವುದು ಎಂದರು.
ಇತ್ತೀಚೆಗೆ ನಿಧನರಾದ ಅಲೆಮಾರಿ ಸಿಂಧೋಳ್ಳು ಸಮಾಜದ ರಾಜ್ಯ ಉಪಾಧ್ಯಕ್ಷ ಚಿನ್ನಯಲ್ಲಪ್ಪ ನಿವಾಸಕ್ಕೂ ಭೇಟಿ ನೀಡಿದ ವೈ.ಶಿವಕುಮಾರ್ ಕುಟುಂಬ ಸದಸ್ಯರಿಗೆ ಸಾಂತ್ವನ ಹೇಳಿದರು. ಕುಟುಂಬಕ್ಕೆ ವೈಯಕ್ತಿಕ ಪರಿಹಾರ ಧನ ವಿತರಿಸಿ, ಮಕ್ಕಳ ಶೈಕ್ಷಣಿಕ ಸ್ಥಿತಿಗತಿ ವಿಚಾರಿಸಿ ಅಗತ್ಯ ಸಹಾಯ ಮಾಡುವ ಭರವಸೆ ನೀಡಿದರು.ಸಿಂಧೋಳ್ಳು ಸಮಾಜದ ರಾಜ್ಯ ಗೌರವಾಧ್ಯಕ್ಷ ರಾವುಲ್ ನಾಗಪ್ಪ, ತಾಲೂಕು ಸುಡುಗಾಡು ಸಿದ್ಧರ ಸಮಾಜದ ಅಧ್ಯಕ್ಷ ಸಣ್ಣ ಹುಲುಗಪ್ಪ, ಮೇದಾ ಸಮಾಜದ ತಾಲೂಕು ಅಧ್ಯಕ್ಷ ಎಂ.ಗಾಳಿಕುಮಾರ್, ಹಕ್ಕಿಪಿಕ್ಕಿ ಅಭಿವೃದ್ಧಿ ಸಂಘದ ಜಿಲ್ಲಾ ಉಪಾಧ್ಯಕ್ಷ ಜೆ.ಬಾಬು ಸೇರಿದಂತೆ ಯಲ್ಲಮ್ಮ, ದುರುಗಮ್ಮ, ನಾಗಮ್ಮ, ಮಾರೆಪ್ಪ ಹಾಗೂ ಸಮುದಾಯದ ಹಲವರು ಉಪಸ್ಥಿತರಿದ್ದರು.