ಮೋಟೆಬೆನ್ನೂರ ಗ್ರಾಮಸ್ಥರು ನ್ಯಾಯವಾದಿ ಬಸವರಾಜ ಬಳ್ಳಾರಿ ಇವರ ನೇತೃತ್ವದಲ್ಲಿ ಮೋಟೆಬೆನ್ನೂರ ಗ್ರಾಮದಲ್ಲಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿ ಒತ್ತಾಯಿಸಿದರು.

ಬ್ಯಾಡಗಿ: ಮೋಟೆಬೆನ್ನೂರ ಹಾಗೂ ಬ್ಯಾಡಗಿ ಮಧ್ಯ ರೈಲ್ವೆ ಹಳಿಗಳಿಗೆ ಅಡ್ಡಲಾಗಿ ನಿರ್ಮಿಸಿರುವ ಮೇಲ್ಸೇತುವೆ ಹಾಗೂ ಕೆಳ ಸೇತುವೆ ಕಳಪೆ ಕಾಮಗಾರಿಯ ಸಮಗ್ರ ತನಿಖೆ ನಡೆಸುವುದೂ ಸೇರಿದಂತೆ ಎರಡೂ ಸೇತುವೆಗಳಲ್ಲಿ ವಿದ್ಯುತ್ ಪೂರೈಕೆ ಸ್ಥಗಿತಗೊಂಡಿದ್ದು, ಅವುಗಳನ್ನು ಸರಿಪಡಿಸುವಂತೆ ಆಗ್ರಹಿಸಿ ಮೋಟೆಬೆನ್ನೂರ ಗ್ರಾಮಸ್ಥರು ನ್ಯಾಯವಾದಿ ಬಸವರಾಜ ಬಳ್ಳಾರಿ ನೇತೃತ್ವದಲ್ಲಿ ಮೋಟೆಬೆನ್ನೂರ ಗ್ರಾಮದಲ್ಲಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿ ಒತ್ತಾಯಿಸಿದರು. ಈ ವೇಳೆ ಮಾತನಾಡಿದ ಬಸವರಾಜ ಬಳ್ಳಾರಿ, ಬ್ಯಾಡಗಿ ಮತ್ತು ಮೋಟೆಬೆನ್ನೂರ ಮಧ್ಯದಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಕೋಟಿಗಟ್ಟಲೇ ಹಣ ವ್ಯಯಿಸಿ ನಿತ್ಯವೂ 4 ಸಾವಿರಕ್ಕೂ ಅಧಿಕ ವಾಹನಗಳು ಸಂಚರಿಸಲು ಅನುಕೂಲ ಕಲ್ಪಿಸಿವೆ. ಆದರೆ ಸದರಿ ಸೇತುವೆಗಳ ಕಾಮಗಾರಿಯು ಕಳಪೆಯಾಗಿದ್ದು ಅವುಗಳ ಸಮಗ್ರ ತನಿಖೆ ನಡೆಸಿ ದುರಸ್ತಿಗೊಳಿಸುವಂತೆ ಆಗ್ರಹಿಸಿದರು.

ಸೇತುವೆ ಸುರಕ್ಷಿತವಾಗುತ್ತಿಲ್ಲ: ಸೇತುವೆಗಳ ಮೇಲಿಂದ ರೈಲುಗಳ ಮೇಲೆ ಜಿಗಿದು ಆತ್ಮಹತ್ಯೆ ಮಾಡಿಕೊಳ್ಳಲಾಗುತ್ತಿದೆ. ಹೀಗಾಗಿ ಸದರಿ ಗೋಡೆಗಳ ಎರಡೂ ಬದಿಯಲ್ಲಿ ಫೆನ್ಸಿಂಗ್ ನಿರ್ಮಿಸುವ ಮೂಲಕ ಸೇತುವೆ ಮೇಲಿಂದ ಜಿಗಿಯದಂತೆ ನೋಡಿಕೊಳ್ಳಬೇಕು. ಇದರಿಂದ ಮಾತ್ರ ಸದರಿ ಸ್ಥಳದಲ್ಲಿ ಆತ್ಮಹತ್ಯೆಯಂತಹ ಪ್ರಕರಣಗಳನ್ನು ತಡೆಗಟ್ಟಲು ಸಾಧ್ಯವಾಗಲಿದೆ ಎಂದರು.ವಿದ್ಯುತ್ ಸ್ಥಗಿತ: ಎರಡೂ ಸೇತುವೆಗಳಲ್ಲಿ ವಿದ್ಯುತ್ ಕಂಬಗಳನ್ನು ಹಾಕಲಾಗಿದೆಯೇ ಹೊರತು ಅವುಗಳು ಕಾರ್ಯನಿರ್ವಹಿಸುತ್ತಿಲ್ಲ. ಹೀಗಾಗಿ ಕತ್ತಲೆಯಲ್ಲಿ ಸಾರ್ವಜನಿಕರು, ರೈತರು ಸಂಚರಿಸುವುದು ಕಷ್ಟಸಾಧ್ಯ. ಕೂಡಲೇ ಎರಡೂ ಸೇತುವೆಗಳಲ್ಲಿ ರಾತ್ರಿ ವೇಳೆ ನಿರಂತರವಾಗಿ ಬೆಳಕಿನ ಸೌಲಭ್ಯಕ್ಕಾಗಿ ಸಂಬಂಧಿಸಿದವರಿಗೆ ಒತ್ತಡ ತರುವ ಮೂಲಕ ಸಾರ್ವಜನಿಕರಿಗೆ ಅನುಕೂಲ ಕಲ್ಪಿಸುವಂತೆ ಆಗ್ರಹಿಸಿದರು.

ಈ ಸಂದರ್ಭದಲ್ಲಿ ರೈತ ಮುಖಂಡರಾದ ಮಲ್ಲಿಕಾರ್ಜುನ ಬಳ್ಳಾರಿ, ಮಂಜುನಾಥ ಬೆನಕನಕೊಂಡ, ಮಲ್ಲಿಕಾರ್ಜುನ ಬೆಳವಿಗಿ, ಸೇರಿದಂತೆ ಗ್ರಾಮಸ್ಥರು ಉಪಸ್ಥಿತರಿದ್ದರು.