ಸಾರಾಂಶ
ಸರ್ಕಾರ ವೃದ್ಧರು, ವಿಕಲಚೇತನರು ಹಾಗೂ ವಿಧವಾವೇತನ ಸೇರಿದಂತೆ ಇತರೆ ಅರ್ಹ ಫಲಾನುಭವಿಗಳಿಗೆ ಪ್ರತಿ ತಿಂಗಳು ಮಾಶಾಸನ ನೀಡುತ್ತಿದೆ. ಆದರೆ, ಬ್ಯಾಂಕಿನ ಏಜೆಂಟರುಗಳು ಅನಕ್ಷರಸ್ಥರನ್ನು ಗುರಿಯಾಗಿಸಿಕೊಂಡು ತಾಲೂಕಿನಾದ್ಯಂತ ವಂಚಸುತ್ತಿದ್ದಾರೆ ಎಂದು ದೂರಿದರು.
ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ
ಅನಕ್ಷರಸ್ಥ ವ್ಯಕ್ತಿ ಖಾತೆಯಿಂದ ಹಣ ಪಡೆದು ವಂಚಿಸಿದ್ದ ಬ್ಯಾಂಕ್ ಆಫ್ ಬರೋಡ ಬಿಸಿನೆಸ್ ಕರೆಸ್‌ಪಾಂಡೆಂಟ್ (ಬಿಸಿ) ಯೋಗಾನಂದನನ್ನು ಅಮಾನತು ಗೊಳಿಸುವಂತೆ ಮಂಡ್ಯ ರಕ್ಷಣಾ ವೇದಿಕೆ ಕಾರ್ಯಕರ್ತರು ಬ್ಯಾಂಕ್ ವ್ಯವಸ್ಥಾಪಕರಿಗೆ ಮನವಿ ಮಾಡಿದರು.ತಾಲೂಕಿನ ಚಂದಗಾಲು ಗ್ರಾಮದ 76 ವರ್ಷದ ವೃದ್ಧ ಅನಕ್ಷರಸ್ಥ ರಂಗಣ್ಣರಿಗೆ ಮೇಳಾಪುರ ಗ್ರಾಮದ ಬ್ಯಾಂಕ್ ಆಫ್ ಬರೋಡ ಬಿಸಿನೆಸ್ ಕರೆಸ್‌ಪಾಂಡೆಂಟ್ ಯೋಗಾನಂದ ಎಂಬ ವ್ಯಕ್ತಿ 2400 ರು. ಹಣ ಡ್ರಾ ಮಾಡಿ, ಕೇವಲ 1200 ರು. ಹಣ ನೀಡಿ ವಂಚಿಸಿರುವ ಬಗ್ಗೆ ಕನ್ನಡಪ್ರಭ ಪತ್ರಿಕೆ ವರದಿ ಮಾಡಿತ್ತು.
ವೇದಿಕೆ ಅಧ್ಯಕ್ಷ ಶಂಕರ್‌ಬಾಬು ನೇತೃತ್ವದಲ್ಲಿ ಪದಾಧಿಕಾರಿಗಳು ಬಾಬುರಾಯನಕೊಪ್ಪಲಿನ ಬ್ಯಾಂಕ್ ಆಫ್ ಬರೋಡ ಶಾಖೆಗೆ ತೆರಳಿ ಶಾಖಾ ವ್ಯವಸ್ಥಾಪಕ ವೆಂಕಟೇಶ್‌ಬಾಬು ಅವರನ್ನು ಭೇಟಿ ಮಾಡಿದರು.ಸರ್ಕಾರ ವೃದ್ಧರು, ವಿಕಲಚೇತನರು ಹಾಗೂ ವಿಧವಾವೇತನ ಸೇರಿದಂತೆ ಇತರೆ ಅರ್ಹ ಫಲಾನುಭವಿಗಳಿಗೆ ಪ್ರತಿ ತಿಂಗಳು ಮಾಶಾಸನ ನೀಡುತ್ತಿದೆ. ಆದರೆ, ಬ್ಯಾಂಕಿನ ಏಜೆಂಟರುಗಳು ಅನಕ್ಷರಸ್ಥರನ್ನು ಗುರಿಯಾಗಿಸಿಕೊಂಡು ತಾಲೂಕಿನಾದ್ಯಂತ ವಂಚಸುತ್ತಿದ್ದಾರೆ ಎಂದು ದೂರಿದರು.
ಚಂದಗಾಲು ಗ್ರಾಮದ ರಂಗಣ್ಣರಿಗೆ ಏಜೆಂಟ್ ಯೋಗಾನಂದ ವಂಚಿಸಿರುವುದು ಸಾಕ್ಷ್ಯ ಸಮೇತ ಸಾಬೀತಾಗಿದೆ. ಕೂಡಲೇ ಆತನ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದರು.ಈ ವೇಳೆ ವ್ಯವಸ್ಥಾಪಕ ವೆಂಕಟೇಶ್‌ಬಾಬು ಸರಿಯಾದ ಪ್ರತಿಕ್ರಿಯೆ ನೀಡದ ಹಿನ್ನೆಲೆಯಲ್ಲಿ ವಂಚಿಸಿರುವ ವ್ಯಕ್ತಿಯೇ ತಪ್ಪಾಗಿರುವುದಾಗಿ ಒಪ್ಪಿಕೊಂಡಿದ್ದರೂ ಈ ರೀತಿ ವ್ಯವಸ್ಥಾಪಕರು ಉಡಾಫೆ ಉತ್ತರ ನೀಡುವುದು ಸರಿಯಲ್ಲ ಎಂದು ವೇದಿಕೆ ಮುಖಂಡರು ಕಿಡಿಕಾರಿದರು.
ಬ್ಯಾಂಕ್ ಉಳ್ಳವರ ಪರವಾಗಿದೇ ವಿನಃ ಬಡವರ ಪರವಾಗಿಲ್ಲ. ಮೇಲಾಧಿಕಾರಿಗಳು ಇತ್ತ ಗಮನ ಹರಿಸಿ ಏಜಂಟರುಗಳಿಂದ ವಂಚನೆ ಪ್ರಕರಣಗಳು ಮತ್ತೆ ನಡೆಯದಂತೆ ಕ್ರಮ ವಹಿಸಬೇಕು. ಇಲ್ಲದಿದ್ದರೆ ಬ್ಯಾಂಕ್‌ಗೆ ಮುತ್ತಿಗೆ ಹಾಕಿ ತೀವ್ರ ಹೋರಾಟ ನಡೆಸುವುದಾಗಿ ಎಚ್ಚರಿಸಿದರು.