ಕಚೇರಿಯಲ್ಲೇ ವಾಸ್ತವ್ಯ ಮಾಡಿದ್ದ ಬಿಇಒ ವಿರುದ್ಧ ಕ್ರಮಕ್ಕೆ ಆಗ್ರಹ

| Published : May 17 2025, 01:48 AM IST

ಸಾರಾಂಶ

ಶಹರ ಬಿಇಒ ಚನ್ನಪ್ಪಗೌಡ ಅವರು ರಾತ್ರಿ ಸರ್ಕಾರಿ ಕಚೇರಿಯಲ್ಲಿ ವಾಸ್ತವ್ಯವಿರಲು ಅವಕಾಶವಿಲ್ಲದಿದ್ದರೂ ಎರಡೂವರೆ ವರ್ಷಗಳ ಕಾಲ ವಾಸವಾಗಿದ್ದರು. ಅವರು ವಾಸವಿದ್ದರು ಎನ್ನುವುದಕ್ಕೆ ಸಿಸಿಟಿವಿ ದೃಶ್ಯಾ‍ವಳಿ ಸೇರಿದಂತೆ ದಾಖಲೆಗಳು ಲಭ್ಯ ಇವೆ. ಕೆಎಸ್‌ಸಿಆರ್‌ ನಿಯಮ 51(ಎ) ಉಲ್ಲಂಘಿಸಿ ಕಾನೂನು ಬಾಹಿರವಾಗಿ ಎಚ್‌ಆರ್‌ಎ ಆಕರಣೆ ಮಾಡಿ ಸರ್ಕಾರಕ್ಕೆ ₹6ರಂದ ₹7 ಲಕ್ಷ ವಂಚಿಸಿದ್ದಾರೆ.

ಹುಬ್ಬಳ್ಳಿ: ಅಕ್ರಮವಾಗಿ ಸರ್ಕಾರಿ ಕಚೇರಿಯಲ್ಲಿ ವಾಸ್ತವ್ಯ ಮಾಡಿದ್ದ ಶಹರ ಬಿಇಒ ಚನ್ನಪ್ಪಗೌಡ ಅವರನ್ನು ಅಮಾನತ್ತಿನಲ್ಲಿಟ್ಟು, ತನಿಖೆ ನಡೆಸಿ ಕಾನೂನು ಪ್ರಕಾರ ಕ್ರಮಕೈಗೊಳ್ಳಬೇಕು, ವಾರದೊಳಗೆ ಕ್ರಮವಾಗದಿದ್ದರೆ ಧರಣಿ ಮಾಡಲಾಗುವುದು ಎಂದು ಕರ್ನಾಟಕ ರಾಜ್ಯ ಶಿಕ್ಷಣ ಸಂಸ್ಥೆಗಳ ನೌಕರರ ಸಂಘದ ರಾಜ್ಯಾಧ್ಯಕ್ಷ ಶ್ರೀಶೈಲ ಗಡದಿನ್ನಿ ಆಗ್ರಹಿಸಿದ್ದಾರೆ.

ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶಹರ ಬಿಇಒ ಚನ್ನಪ್ಪಗೌಡ ಅವರು ರಾತ್ರಿ ಸರ್ಕಾರಿ ಕಚೇರಿಯಲ್ಲಿ ವಾಸ್ತವ್ಯವಿರಲು ಅವಕಾಶವಿಲ್ಲದಿದ್ದರೂ ಎರಡೂವರೆ ವರ್ಷಗಳ ಕಾಲ ವಾಸವಾಗಿದ್ದರು. ಅವರು ವಾಸವಿದ್ದರು ಎನ್ನುವುದಕ್ಕೆ ಸಿಸಿಟಿವಿ ದೃಶ್ಯಾ‍ವಳಿ ಸೇರಿದಂತೆ ದಾಖಲೆಗಳು ಲಭ್ಯ ಇವೆ. ಕೆಎಸ್‌ಸಿಆರ್‌ ನಿಯಮ 51(ಎ) ಉಲ್ಲಂಘಿಸಿ ಕಾನೂನು ಬಾಹಿರವಾಗಿ ಎಚ್‌ಆರ್‌ಎ ಆಕರಣೆ ಮಾಡಿ ಸರ್ಕಾರಕ್ಕೆ ₹6ರಂದ ₹7 ಲಕ್ಷ ವಂಚಿಸಿದ್ದಾರೆ ಎಂದು ಆರೋಪಿಸಿದರು.

ಡಿಡಿಪಿಐ ನೀಡಿದ ನೋಟಿಸ್‌ಗೆ ಶಿಕ್ಷಕಿ ಶೈಲಜಾ ಹಿರೇಮಠ ಅವರ ವಿದ್ಯಾನಗರದ ಮನೆಯಲ್ಲಿ ವಾಸವಿರುವುದಾಗಿ ಹೇ‍ಳಿ ಅವರನ್ನೂ ಕಾನೂನಿನ ಇಕ್ಕಟ್ಟಿನಲ್ಲಿ ಸಿಲುಕಿಲಿದ್ದಾರೆ ಎಂದು ದೂರಿದರು.

ಅಲ್ಲದೆ, 1999ರ ನೇಮಕಾತಿ ಮತ್ತು ನಿಯಂತ್ರಣ ಪ್ರಾಧಿಕಾರ ಕಾಯ್ದೆ ಕಲಂ 14, 15, 16 ರನ್ವಯ ಬಿಇಒ ಅವರಿಗೆ ಅನುದಾನಿತ ಶಾಲಾ ಶಿಕ್ಷಕರ ವೇತನ ತಡೆಹಿಡಿಯುವ ಅಧಿಕಾರವಿಲ್ಲ. ಆದರೂ ಹಲವು ಶಿಕ್ಷಕರ ವೇತನ ತಡೆಹಿಡಿದು, ಆರ್ಥಿಕ ಮತ್ತು ಮಾನಸಿಕ ಹಿಂಸೆ ನೀಡಿದ್ದಾರೆ. ಚನ್ನಪ್ಪಗೌಡ ಅವರಿಂದಲೇ ಶಿಕ್ಷಕ ಅಶೋಕ ಹಾದಿಮನಿ ನೌಕರಿ ಕಳೆದುಕೊಂಡು ಸಂಕಷ್ಟದಲ್ಲಿ ಸಿಲುಕಿದ್ದಾರೆ ಎಂದು ತಿಳಿಸಿದರು.

ಇಲಾಖಾ ಕಾರ್ಯಗಳಲ್ಲಿ ನಿವೃತ್ತಿ ಅಂಚಿನಲ್ಲಿರುವ ಹಿರಿಯ ಶಿಕ್ಷಕ, ಶಿಕ್ಷಕಿಯರನ್ನು ಪರೀಕ್ಷಾ ಕೊಠಡಿ ಮೇಲ್ವಿಚಾರಕರನ್ನಾಗಿಸಿ, ಅತ್ಯಂತ ಕಿರಿಯ ಶಿಕ್ಷಕರನ್ನು ಮೇಲಿನ ಹುದ್ದೆಗಳಾದ ಕಸ್ಟೋಡಿಯನ್‌ಗಳಾಗಿ ಹಾಗೂ ಸಿಟ್ಟಿಂಗ್ ಸ್ಕ್ವಾಡ್‌ಗಳಾಗಿ ನಿಯೋಜಿಸಿ ಕಿರಿಯರ ಕೈಕೆಳಗೆ ಹಿರಿಯರು ಕಾರ್ಯನಿರ್ವಹಿಸಲು ನಿಯೋಜಿಸಿ ಸೇವಾ ಜೇಷ್ಠತೆ ನಿಯಮ ಉಲ್ಲಂಘಿಸಿದ್ದಾರೆ ಎಂದರು.

ಬಿಡನಾಳದ ಕೆಪಿಎಸ್‌ ಶಾಲೆಯ ಉಪಪ್ರಾಚಾರ್ಯೆ ಗೌರಮ್ಮ ಎಂ.ಆರ್. ಮೇಲೆ ಗಂಭೀರ ಆರೋಪಗಳಿಲ್ಲದಿದ್ದರೂ ಶಾಲಾ ಆವರಣ, ಶೌಚಾಲಯ ಸ್ವಚ್ಛತೆ ಕಾಪಾಡಿಲ್ಲ ಎಂದು ಮೇಲಧಿಕಾರಿಗಳಿಗೆ ವರದಿ ನೀಡಿ ಅಮಾನತ್ತು ಮಾಡಿಸಿದ್ದಾರೆ. ಸದಾಶಿವನಗರ ಕ್ಲಸ್ಟರ್‌ನ ಸಿಆರ್‌ಪಿ ರಿಹಾನ ಬೇಗಂ ಮುಲ್ಲಾ ಹಾಗೂ ಹಳೇ ಹುಬ್ಬಳ್ಳಿ ಕಸ್ಟರಿನ ಮೈತ್ರಾದೇವಿ ಬಳೂಟಗೆ ಅಮಾನತ್ತು ಮಾಡಿದ್ದಾರೆ. ಅಲ್ಲದೆ, ಶಿಕ್ಷಕನ್ನು ಕಚೇರಿಗೆ ಕರೆಯಿಸಿಕೊಂಡು ಸತಾಯಿಸುತ್ತಾರೆ ಎಂದು ಆರೋಪಿಸಿದರು.

ಬಿಇಒ ಚನ್ನಪ್ಪಗೌಡ ಮುಂದಿನ ತಿಂಗಳು ನಿವೃತ್ತಿಯಾಗುತ್ತಿರುವುದರಿಂದ ಶಿಕ್ಷಕರು, ಸಂಘಟನೆಗಳ ಮೇಲೆ ಒತ್ತಡ ಹಾಕಿ ತಮ್ಮ ಬಗ್ಗೆ ಒಳ್ಳೆಯ ಅಭಿಪ್ರಾಯ ಸಂಗ್ರಹಿಸಿ ಅಮಾನತ್ತಿನಿಂದ ಪಾರಾಗುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ಆರೋಪಿಸಿದ ಅವರು, ವಾಟ್ಸಆ್ಯಪ್‌ ಸಂದೇಶಗಳ ಕುರಿತಂತೆ ದಾಖಲೆ ನೀಡಿದರು.

ಹಾಸನದಲ್ಲಿ ಬಿಆರ್‌ಸಿ ಆಗಿದ್ದಾಗ ಇವರ ದುರ್ನಡತೆಯಿಂದ ಅಮಾನತ್ತು ಶಿಕ್ಷೆ ಅನುಭವಿಸಿದ್ದರು. ಎಲ್ಲ ದಾಖಲೆಗಳ ಆಧಾರದ ಮೇಲೆ ತಕ್ಷಣವೇ ಅವರನ್ನು ಅಮಾನತ್ತಿನಲ್ಲಿರಿಸಿ ಸೂಕ್ತ ತನಿಖೆ ಮಾಡಿ ಕಟ್ಟುನಿಟ್ಟಿನ ಕ್ರಮ ಜರುಗಿಸಬೇಕು. ಈಗಾಗಲೇ ಹಲವು ಬಾರಿ ಡಿಡಿಪಿಐ, ಶಿಕ್ಷಣ ಇಲಾಖೆ ಆಯುಕ್ತರು, ಡಿಸಿ, ಜಿಲ್ಲಾ ಉಸ್ತುವಾರಿ ಸಚಿವರು, ಸರ್ಕಾರಕ್ಕೆ ಹಲವು ಬಾರಿ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ. ಒಂದು ವಾರದೊಳಗೆ ಸೂಕ್ತ ಕ್ರಮಕೈಗೊಳ್ಳದಿದ್ದರೆ ತಮ್ಮ ಸಂಘದಿಂದ ಧರಣಿ ನಡೆವುದಾಗಿ ಎಚ್ಚರಿಸಿದರು.

ಸುದ್ದಿಗೋಷ್ಠಿಯಲ್ಲಿ ಸಂಘದ ರಾಜ್ಯ ಸಂಘಟನಾ ಕಾರ್ಯದರ್ಶಿ ಎಸ್‌.ಎನ್‌. ಸಂಜೀವ್‌, ಮಹಾಪ್ರಧಾನ ಕಾರ್ಯದರ್ಶಿ ರವೀಂದ್ರ ಪಾಟೀಲ, ಎಸ್‌.ಎನ್‌. ನೆಗಳೂರಮಠ ಮತ್ತಿತರರಿದ್ದರು.