ಬೂದನೂರು ಗ್ರಾಪಂ ಆಡಳಿತ ಮಂಡಳಿ ವಿರುದ್ಧ ಕ್ರಮಕ್ಕೆ ಆಗ್ರಹ

| Published : Mar 14 2025, 12:34 AM IST

ಬೂದನೂರು ಗ್ರಾಪಂ ಆಡಳಿತ ಮಂಡಳಿ ವಿರುದ್ಧ ಕ್ರಮಕ್ಕೆ ಆಗ್ರಹ
Share this Article
  • FB
  • TW
  • Linkdin
  • Email

ಸಾರಾಂಶ

ಬೂದನೂರು ಗ್ರಾಪಂ ಸಾಮಾನ್ಯ ಸಭೆಯಲ್ಲಿ ಕ್ರಿಯಾಯೋಜನೆ ತಯಾರಿಸದೆ, ಅನುಮೋದನೆ ಪಡೆಯದೆ ಕಾಮಗಾರಿ ಆರಂಭಿಸಲಾಗಿದೆ. ಕಾಮಗಾರಿ ಪೂರ್ಣಗೊಂಡ ಬಳಿಕ ಸಭೆಯಲ್ಲಿ ಹಣ ಬಳಕೆ ಮಾಡಲು ಮಂಡಿಸಿರುವುದು ಕಂಡುಬಂದಿದೆ. ಗ್ರಾಪಂ ವರ್ಗ-೨ರಲ್ಲಿ ಹಣ ಬಳಕೆ ಮಾಡಿ ವಿವಿಧ ಕಾರ್ಯಕ್ರಮಗಳಿಗೆ ಸಾವಿರಾರು ರು. ವೆಚ್ಚ ಮಾಡಿ ನಂತರ ಸಭೆಯಲ್ಲಿ ಜಮಾ ಖರ್ಚು ಅನುಮೋದಿಸಿಕೊಂಡಿರುವುದು ಕಂಡುಬಂದಿದೆ.

ಕನ್ನಡಪ್ರಭ ವಾರ್ತೆ ಮಂಡ್ಯ

ಬೂದನೂರು ಗ್ರಾಪಂ ಆಡಳಿತ ಮಂಡಳಿ ನಡೆಸಿರುವ ಭ್ರಷ್ಟಾಚಾರ ಕುರಿತು ಜಿಪಂ ಸಿಇಒ ರಚಿಸಿದ್ದ ಸಮಿತಿ ನೀಡಿರುವ ವರದಿಯಲ್ಲಿ ಆರು ಪ್ರಮುಖ ಅಂಶಗಳನ್ನು ಕಡೆಗಣಿಸಿದೆ ಎಂದು ಸ್ವಂತಮನೆ ನಮ್ಮ ಹಕ್ಕು ಹೋರಾಟ ಸಮಿತಿಯ ಸಂಚಾಲಕ ಬಿ.ಕೆ.ಸತೀಶ್ ಆರೋಪಿಸಿದರು.

ಗ್ರಾಮ ಪಂಚಾಯ್ತಿ ಸಾಮಾನ್ಯ ಸಭೆಯಲ್ಲಿ ಕ್ರಿಯಾಯೋಜನೆ ತಯಾರಿಸದೆ, ಅನುಮೋದನೆಯನ್ನು ಪಡೆಯದೆ ಕಾಮಗಾರಿಗಳನ್ನು ಆರಂಭಿಸಲಾಗಿದೆ. ಕಾಮಗಾರಿ ಪೂರ್ಣಗೊಂಡ ಬಳಿಕ ಸಾಮಾನ್ಯ ಸಭೆಯಲ್ಲಿ ಹಣ ಬಳಕೆ ಮಾಡಲು ಮಂಡಿಸಿರುವುದು ಕಂಡುಬಂದಿದೆ. ಗ್ರಾಪಂ ವರ್ಗ-೨ರಲ್ಲಿ ಹಣವನ್ನು ಬಳಕೆ ಮಾಡಿ ವಿವಿಧ ಕಾರ್ಯಕ್ರಮಗಳಿಗೆ ಸಾವಿರಾರು ರು. ವೆಚ್ಚ ಮಾಡಿ ನಂತರ ಸಾಮಾನ್ಯ ಸಭೆಯಲ್ಲಿ ಜಮಾ ಖರ್ಚು ಅನುಮೋದಿಸಿಕೊಂಡಿರುವುದು ಕಂಡುಬಂದಿದೆ. ಇದು ನಿಯಮಾವಳಿಯ ಸ್ಪಷ್ಟ ಉಲ್ಲಂಘನೆಯಾಗಿರುವುದಾಗಿ ವರದಿಯಲ್ಲಿ ತಿಳಿಸಿರುವುದಾಗಿ ಸುದ್ದಿಗೋಷ್ಠಿಯಲ್ಲಿ ದೂರಿದರು.

ವಾರ್ಷಿಕವಾಗಿ ಗ್ರಾಪಂ ನಿಧಿಯಲ್ಲಿ ತೆಗೆದುಕೊಳ್ಳ ಬಹುದಾದ ಕಾಮಗಾರಿಗಳ ಪಟ್ಟಿ ಮಾಡಿರುವುದಿಲ್ಲ. ಕೆಟಿಪಿಪಿ ನಿಯಮಗಳನ್ನೂ ಪಪಾಲಿಸದೆ ಉತ್ತಮ ಗುಣಮಟ್‌ಟದ ಸಾಮಗ್ರಿಗಳನ್ನು ದಾಸ್ತಾನಿಗೆ ಪಡೆದಿರುವುದನ್ನು ದಾಖಲಿಸಿಲ್ಲ ಎಂದು ವರದಿಯಲ್ಲಿ ದಾಖಲಿಸಲಾಗಿದೆ ಎಂದು ದಾಖಲೆಗಳ ಸಹಿತ ದೂಷಿಸಿದರು.

ಗ್ರಾಪಂ ವ್ಯಾಪ್ತಿಯಲ್ಲಿ ಘನ ಮತ್ತು ದ್ರವ ತ್ಯಾಜ್ಯ ವಿಲೇವಾರಿಗೆ ಅಗತ್ಯ ಕ್ರಮ ಕೈಗೊಂಡಿಲ್ಲ. ಉದ್ದಿಮೆ ಮತ್ತು ವಾಣಿಜ್ಯ ಚಟುವಟಿಕೆಗಳಿಗೆ ಕರ ನಿರ್ಧರಣೆ ಮಾಡಿ ಲೈಸೆನ್ಸ್ ವಿತರಿಸಿ ಸಂಪನ್ಮೂಲ ಕ್ರೋಢೀಕರಣಕ್ಕೆ ಕ್ರಮ ವಹಿಸಿಲ್ಲವೆಂದು ಆರೋಪಿಸಿದರು.

ಪಂಚಾಯಿತಿ ಪಿಡಿಒ ಮತ್ತು ಗ್ರಾಪಂನ ಕೆಲ ಸದಸ್ಯರು, ಬ್ಯಾಂಕ್ ನೌಕರರ ಗೃಹ ನಿರ್ಮಾಣ ಮಂಡಳಿ ಪದಾಧಿಕಾರಿಗಳು ಮತ್ತು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ-೨೭೫ರ ಭೂ ಸ್ವಾಧೀನ ಅಧಿಕಾರಿಗಳು ಶಾಮೀಲಾಗಿ ರಸ್ತೆಗೆ ಅಕ್ರಮ ಇ-ಸ್ವತ್ತು ಸೃಷ್ಟಿಸಿ ೪೧ ಲಕ್ಷ ರು. ಪರಿಹಾರ ಪಡೆದು ವಂಚಿಸಿದ್ದಾರೆ. ನಂತರ ಇ-ಸ್ವತ್ತು ಸಂಖ್ಯೆಯನ್ನು ಆನ್‌ಲೈನ್‌ನಲ್ಲಿ ಅಳಿಸಲಾಗಿದೆ. ಗ್ರಾಪಂನಲ್ಲಿರಬೇಕಾದ ಭೌತಿಕ ದಾಖಲೆಯನ್ನೂ ಬಚ್ಚಿಟ್ಟಿದ್ದು ತನಿಖಾಧಿಕಾರಿಗಳು ಇದನ್ನು ಉಲ್ಲೇಖಿಸದಿರುವುದು ಲೋಪವಾಗಿದೆ. ಇದರ ಬಗ್ಗೆ ಕೂಲಂಕುಷ ತನಿಖೆಯಾಗಬೇಕು ಎಂದು ಆಗ್ರಹಿಸಿದರು.

ಗೋಷ್ಠಿಯಲ್ಲಿ ಹೋರಾಟ ಸಮಿತಿಯ ಯಲ್ಲಮ್ಮ, ಸವಿತಾ, ಪುಟ್ಟಸ್ವಾಮಿ, ಕರವೇ ಜಿಲ್ಲಾಧ್ಯಕ್ಷ ಎಚ್.ಡಿ.ಜಯರಾಂ ಇದ್ದರು.