ಸಾರಾಂಶ
ಕನ್ನಡಪ್ರಭ ವಾರ್ತೆ ಹೂವಿನಹಡಗಲಿ
ಇಲ್ಲಿನ ಶ್ರೀ ಪಾಶ್ವನಾಥ ಚಾರಿಟೇಬಲ್ ಟ್ರಸ್ಟ್ ಹಾಗೂ ಭಾರತೀಯ ಜೈನ್ ಮಿಲನ್ ಮತ್ತು, ಜ್ವಾಲಾಮಾಲಿನಿ ಮಹಿಳಾ ಜೈನ ಸಮಾಜ ವತಿಯಿಂದ ಧರ್ಮಸ್ಥಳ, ಜೈನ ಸಮಾಜದ ಬಗ್ಗೆ ಅವಹೇಳನಕಾರಿಯಾಗಿ ಯೂಟ್ಯೂಬ್‌ನಲ್ಲಿ ಇಲ್ಲಸಲ್ಲದ ಆಪಾದನೆ ಮಾಡುತ್ತಿರುವರ ವಿರುದ್ಧ ಕ್ರಮ ಕೈಗೊಳ್ಳಲು ತಹಸೀಲ್ದಾರ್ ಜಿ.ಸಂತೋಷಕುಮಾರಗೆ ಮನವಿ ಸಲ್ಲಿಸಲಾಯಿತು.ಇದೇ ಸಂದರ್ಭದಲ್ಲಿ ಜೈನ ಸಮಾಜದ ಅಧ್ಯಕ್ಷ ಎಚ್.ಎಸ್.ಪ್ರಶಾಂತ್, ಉಪಾಧ್ಯಕ್ಷ ವಿಜಯಕುಮಾರ್, ಭಾರತೀಯ ಜೈನ್ ಮಿಲನ ಅಧ್ಯಕ್ಷ ಸಂತೋಷ್ ಜೈನ್, ಜ್ವಾಲಾ ಮಾಲಿನಿ ಮಹಿಳಾ ಜೈನ ಸಂಘದ ಅಧ್ಯಕ್ಷೆ ಎಂ.ಡಿ. ಪದ್ಮಾವತಿ, ಸಮಾಜದ ಕಾರ್ಯದರ್ಶಿ ಪದ್ಮರಾಜ ಜೈನ್, ಖಜಾಂಚಿ ಬಾಗೇಶ್ ಜೈನ್, ಎಂ.ತವನಪ್ಪ, ಅಜಿತ್ ಎಚ್.ಡಿ., ಅಮಿತ್ ಎಚ್.ಜೆ, ರಾಯಪ್ಪ ಎಚ್.ಡಿ., ಡಿ.ನಾಗರಾಜ್, ಬಾಹುಬಲಿ ಪಾಟೀಲ್, ಪಾರ್ಶ್ವನಾಥ ರೇವಡಿ, ಪದ್ಮರಾಜ್, ಜೆ.ಎಸ್. ನಾಗರಾಜ್, ಮಹಿಳಾ ಸಂಘದ ಉಪಾಧ್ಯಕ್ಷೆ ಜಯಶ್ರೀ ಮಂಜುನಾಥ್, ಕಾರ್ಯದರ್ಶಿ ರಾಯಪ್ಪ, ಖಜಾಂಚಿ ಮೇಘ, ವೈಶಾಲಿ, ಲತಾ, ಸವಿತಾ, ಹೇಮಾ, ಶೃತಿ, ವಿಂದ್ಯಾ, ಪದ್ಮಾ, ಸುಚೇತನ, ಅನುಷಾ, ಜ್ವಾಲಾ, ರೇಣುಕಾ ಇನ್ನೂ ಅನೇಕ ಜೈನ ಸಮಾಜದ ಶ್ರಾವಕ-ಶ್ರಾವಕಿಯರು ಭಾಗವಹಿಸಿದ್ದರು.
ಧರ್ಮಸ್ಥಳದ ಘನತೆಗೆ ಕುಂದುಂಟು ಮಾಡುವ ಪ್ರಯತ್ನ ಸಲ್ಲದು: ಕಿಚಿಡಿ ಕೊಟ್ರೇಶ್ಕೆಲವರಿಂದ ಪವಿತ್ರ ಕ್ಷೇತ್ರ ಧರ್ಮಸ್ಥಳದ ಪಾವಿತ್ರ್ಯತೆ, ಘನತೆಗೆ ಕುಂದು ಉಂಟು ಮಾಡುವ ವಿಫಲ ಪ್ರಯತ್ನಗಳು ನಡೆಯುತ್ತಿರುವುದು ಖಂಡನೀಯ ಎಂದು ವಿಜಯನಗರ ಜಿಲ್ಲಾ ಬಿಜೆಪಿ ಯುವ ಮೋರ್ಚಾದ ಅಧ್ಯಕ್ಷ ಕಿಚಿಡಿ ಕೊಟ್ರೇಶ್ ಹೇಳಿದ್ದಾರೆ.ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಧರ್ಮಸ್ಥಳದಲ್ಲಿ ನಡೆಯುತ್ತಿರುವ ಎಸ್ಐಟಿ ತನಿಖೆ ಕುರಿತು ರಾಜ್ಯ ಸರ್ಕಾರ ಕೂಡಲೇ ಪಾರದರ್ಶಕ ಮತ್ತು ಸ್ಪಷ್ಟ ನಿಲುವು ತೆಗೆದುಕೊಳ್ಳಬೇಕು. ಆದರೆ, ತನಿಖೆ ದಿಕ್ಕು ತಪ್ಪುತ್ತಿದೆ ಎಂಬ ಅನುಮಾನ ವ್ಯಕ್ತವಾಗುತ್ತಿದೆ. ಮೊದಲು 13 ಸ್ಥಳಗಳ ಬಗ್ಗೆ ಹೇಳಿದ್ದ ಅನಾಮಿಕ ವ್ಯಕ್ತಿ ಈಗ 18 ಸ್ಥಳಗಳ ಬಗ್ಗೆ ಹೇಳುತ್ತಿದ್ದಾನೆ. ಕಾಂಗ್ರೆಸ್ ಸರ್ಕಾರ ತನ್ನ ಆಡಳಿತ ವೈಫಲ್ಯಗಳನ್ನು ಮುಚ್ಚಿಹಾಕಲು ಎಸ್‌ಐಟಿ ಬಳಸಿಕೊಳ್ಳುತ್ತಿದೆ ಎಂಬ ಸಂದೇಹ ವ್ಯಕ್ತವಾಗುತ್ತಿದೆ ಎಂದು ದೂರಿದ್ದಾರೆ.ಅನಾಮಿಕ ವ್ಯಕ್ತಿಯ ಹಿನ್ನೆಲೆ ಬಹಿರಂಗಪಡಿಸಬೇಕು. ಯಾವುದೇ ಮಾಹಿತಿಯಿಲ್ಲದ ವ್ಯಕ್ತಿ ರಾಜ್ಯದ ಜನರಲ್ಲಿ ಗೊಂದಲ ಮೂಡಿಸುತ್ತಿರುವುದು ಸರಿಯಲ್ಲ. ಆರೋಪ ಮಾಡುತ್ತಿರುವ ಅನಾಮಿಕ ವ್ಯಕ್ತಿ ಯಾರು? ಕಳೆದ 15 ವರ್ಷಗಳಿಂದ ಆತ ಎಲ್ಲಿದ್ದ ಮತ್ತು ಏನು ಮಾಡುತ್ತಿದ್ದ? ಅವನ ಹಿಂದಿರುವವರು ಯಾರು? ಈ ಎಲ್ಲಾ ಮಾಹಿತಿಯನ್ನು ರಾಜ್ಯ ಸರ್ಕಾರ ಹಾಗೂ ಎಸ್‌ಐಟಿ ಬಹಿರಂಗಪಡಿಸಬೇಕು ಎಂದು ಒತ್ತಾಯಿಸಿದ್ದಾರೆ.
ಧರ್ಮಸ್ಥಳ ಕೇವಲ ಧಾರ್ಮಿಕ ಕೇಂದ್ರವಲ್ಲ ಧರ್ಮಸ್ಥಳವು ಕೋಟ್ಯಂತರ ಭಕ್ತರಿಗೆ ಶ್ರದ್ಧಾ ಕೇಂದ್ರವಾಗಿದೆ. ಇದು ಕೇವಲ ಒಂದು ದೇವಸ್ಥಾನವಲ್ಲ, ಒಂದೆ ಜಾತಿಗೆ ಸಂಬಂಧಿಸಿದ್ದಲ್ಲ. ಧಾರ್ಮಿಕ ಚಟುವಟಿಕೆಗಳ ಜೊತೆಗೆ, ಸಾವಿರಾರು ದೇವಾಲಯಗಳ ಜೀರ್ಣೋದ್ಧಾರ, ಕೆರೆಗಳ ಪುನಶ್ಚೇತನ, ವ್ಯಸನಮುಕ್ತಿ ಅಭಿಯಾನ ಹಾಗೂ ಸ್ವಸಹಾಯ ಸಂಘಗಳ ಮೂಲಕ ಸಮಾಜಕ್ಕೆ ದೊಡ್ಡ ಕೊಡುಗೆ ನೀಡಿರುವುದನ್ನು ಯಾರು ಮರೆಯಬಾರದು ಎಂದು ತಿಳಿಸಿದ್ದಾರೆ.ಸನಾತನ ಸಂಸ್ಕೃತಿ ಉಳಿವಿಗಾಗಿ ನಾವೆಲ್ಲರೂ ಒಗ್ಗಟ್ಟಾಗಿ ಈ ಷಡ್ಯಂತ್ರಗಳನ್ನು ಖಂಡಿಸಬೇಕು. ಸರ್ಕಾರ ಸರಿಯಾದ ನಿರ್ಧಾರ ತಗೆದುಕೊಳ್ಳದಿದ್ದರೆ ಬೀದಿಗಿಳಿದು ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.