ಕೃಷಿ ಮಂತ್ರಿಗಳು ಬಿತ್ತನೆ ಬೀಜ ಕೊಟ್ಟು ರಸಗೊಬ್ಬರ ನೀಡದೇ ರೈತರನ್ನು ಮೂಟೆ ಗೊಬ್ಬರಕ್ಕಾಗಿ ಅಂಗಡಿಗಳ ಮುಂದೆ ಸಾಲಗಿ ನಿಲ್ಲಬೇಕಾದ ಭಾಗ್ಯವನ್ನು ಕರುಣಿಸಿದ್ದಾರೆ.

ಮಾಲೂರು: ಮುಂಗಾರು ಕೃಷಿ ಚಟುವಟಿಕೆಗೆ ಅವಶ್ಯಕತೆ ಇರುವ ಯೂರಿಯಾ ಗೊಬ್ಬರ, ಬಿತ್ತನೆ ಬೀಜ ಸಮಪರ್ಕವಾಗಿ ವಿತರಣೆ ಮಾಡಿ ಕೃತಕ ಅಭಾವ ಸೃಷ್ಟಿಸಿ ದುಬಾರಿ ಬೆಲೆಗೆ ಮಾರಾಟ ಮಾಡುವ ಖಾಸಗಿ ಅಂಗಡಿಗಳ ಮಾಲೀಕರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದು ರೈತ ಸಂಘ ಒತ್ತಾಯಿಸಿದೆ.ಈ ಸಂಬಂಧ ನಗರದ ಪ್ರವಾಸಿ ಮಂದಿರದಲ್ಲಿ ಸಭೆ ನಡೆಸಿದ ನಂತರ ಮಾತನಾಡಿದ ರೈತ ಸಂಘದ ರಾಜ್ಯ ಉಪಾಧ್ಯಕ್ಷ ಕೆ. ನಾರಾಯಣಗೌಡ, ದೇವರ ದಯೆಯಿಂದ ಸಕಾಲದಲ್ಲಿ ಉತ್ತಮವಾದ ಮಳೆಯಾಗುತ್ತಿದೆ. ರೈತರಿಗೆ ಕೃಷಿ ಮಂತ್ರಿಗಳು ಬಿತ್ತನೆ ಬೀಜ ಕೊಟ್ಟು ರಸಗೊಬ್ಬರ ನೀಡದೇ ರೈತರನ್ನು ಮೂಟೆ ಗೊಬ್ಬರಕ್ಕಾಗಿ ಅಂಗಡಿಗಳ ಮುಂದೆ ಸಾಲಗಿ ನಿಲ್ಲಬೇಕಾದ ಭಾಗ್ಯವನ್ನು ಕರುಣಿಸಿದ್ದಾರೆ ಎಂದರು.

ಇಲ್ಲಿನ ಅಧಿಕಾರಿಗಳು ಬಂದ ಯೂರಿಯಾಗಳನ್ನು ಇಲ್ಲಿನ ಎಡಿಆರ್‌ಎಲ್ ಕಾರ್ಖಾನೆಗೆ ಕೃಷಿ ಅಧಿಕಾರಿಗಳು ಮಾರಾಟ ಮಾಡಲು ಕುಮ್ಮಕ್ಕು ನೀಡುವ ಮೂಲಕ ಲಕ್ಷ ಲಕ್ಷ ಲಂಚ ಪಡೆದು ರೈತರನ್ನು ವಂಚಿಸಿದ್ದಾರೆ ಎಂದು ಆರೋಪಿಸಿದರು.

ತಾಲೂಕು ಅಧ್ಯಕ್ಷ ಪೆಮ್ಮದೊಡ್ಡಿ ಯಲ್ಲಣ್ಣ ಮಾತನಾಡಿ, ರೈತರ ವರ್ಷದ ಗಂಜಿ ಬೆಳೆಯಾದ ರಾಗಿ ಬೆಳೆ ಬೆಳೆಯಲು ಕೃಷಿ ಇಲಾಖೆ ರೈತರಿಗೆ ಅವಶ್ಯಕತೆ ಇರುವ ರಸಗೊಬ್ಬರಗಳನ್ನು ವಿತರಣೆ ಮಾಡಲು ವಿಫಲವಾಗಿದ್ದಾರೆಯೇ ಇಲ್ಲವೇ ಖಾಸಗಿ ಅಂಗಡಿಗಳ ಜೂತೆಗೆ ಶಾಮೀಲಾಗಿ ರೈತರ ಬದುಕಿನ ಜತೆ ಚೆಲ್ಲಾಟ ವಾಡುತ್ತಿದ್ದರೆಯೇ ಎಂದು ಪ್ರಶ್ನಿಸಿದರು.

ಜಿಲ್ಲಾಧ್ಯಕ್ಷ ಈಕಂಬಳ್ಳಿ ಮಂಜುನಾಥ್‌, ಹರೀಶ್‌, ಉಪ್ಪರಹಳ್ಳಿ ಅಂಜಿ, ಮಂಗಸಂದ್ರ ತಿಮ್ಮಣ್ಣ, ತಾಲೂಕು ಅಧ್ಯಕ್ಷ ಹೊಸಹಳ್ಳಿ ವೆಂಕಟೇಶ್‌, ಗಿರೀಶ್‌, ಗೀತಾ, ರತ್ಮಮ್ಮ, ಚೌಡಮ್ಮ, ವೆಂಕಟಮ್ಮ, ಶೈಲಜಾ ಇನ್ನಿತರರು ಇದ್ದರು.