ಸುಳ್ಳು ದಾಖಲೆ ಸೃಷ್ಟಿಸಿ ಜಾತಿ ಪ್ರಮಾಣಪತ್ರ ಪಡೆದವರ ವಿರುದ್ಧ ಕ್ರಮಕ್ಕೆ ಆಗ್ರಹ

| Published : Sep 29 2025, 03:02 AM IST

ಸುಳ್ಳು ದಾಖಲೆ ಸೃಷ್ಟಿಸಿ ಜಾತಿ ಪ್ರಮಾಣಪತ್ರ ಪಡೆದವರ ವಿರುದ್ಧ ಕ್ರಮಕ್ಕೆ ಆಗ್ರಹ
Share this Article
  • FB
  • TW
  • Linkdin
  • Email

ಸಾರಾಂಶ

ಸುಳ್ಳು ದಾಖಲೆ ಸೃಷ್ಟಿಸಿ ಜಾತಿ ಪ್ರಮಾಣಪತ್ರ ಪಡೆದವರ ವಿರುದ್ಧ ಕ್ರಮಕ್ಕೆ ಆಗ್ರಹ

ಮುಂಡಗೋಡ ತಾಲೂಕು ವಾಲ್ಮೀಕಿ ನಾಯಕ ಸಂಘದಿಂದ ಜಿಲ್ಲಾಧಿಕಾರಿಗೆ ಮನವಿ

ಕನ್ನಡಪ್ರಭ ವಾರ್ತೆ ಮುಂಡಗೋಡ

ತಾಲೂಕಿನಾದ್ಯಂತ ಸುಳ್ಳು ದಾಖಲೆ ಸೃಷ್ಟಿಸಿ ಪರಿಶಿಷ್ಟ ಪಂಗಡದ ಜಾತಿ ಪ್ರಮಾಣಪತ್ರ ಪಡೆದವರ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ತಾಲೂಕು ವಾಲ್ಮೀಕಿ ನಾಯಕ ಸಂಘದವರು ಮುಂಡಗೋಡ ತಹಸೀಲ್ದಾರ್‌ ಮೂಲಕ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.

ತಾಲೂಕಿನ ನಂದಿಕಟ್ಟಾ ಗ್ರಾಮದ ದುರ್ಗಮುರಗಿ ಮತ್ತು ಮಂಡರ್ ಸಮುದಾಯಕ್ಕೆ ಸೇರಿದ ಕೆಲವು ಜನ ತಮ್ಮ ಶಾಲಾ ದಾಖಲಾತಿಯಲ್ಲಿ ಜಾತಿಯನ್ನು ದುರ್ಗಮುರಗಿ ಎಂದು ನಮೂದಿಸಿರುವುದನ್ನು ಮೂಲ ದಾಖಲೆ ಪುಸ್ತಕದಲ್ಲಿ ತಿದ್ದಿಸಿ, ಆ ದಾಖಲೆಯಲ್ಲಿ ಹಿಂದೂ ವಾಲ್ಮೀಕಿ, ತಳವಾರ ಎಂದು ನಮೂದಿಸಿ ಅದರ ಆಧಾರದ ಮೇಲೆ ಪರಿಶಿಷ್ಟ ಪಂಗಡದ ಜಾತಿ ಪ್ರಮಾಣಪತ್ರ ಪಡೆದು ಮೂಲ ನಮ್ಮ ಸಮುದಾಯಕ್ಕೆ ಅನ್ಯಾಯ ಮಾಡುತ್ತಿದ್ದಾರೆ. ಈ ಬಗ್ಗೆ ಸುಮಾರು ೫ ವರ್ಷಗಳಿಂದ ನಮ್ಮ ಸಮುದಾಯ ಹೋರಾಟ ಮಾಡುತ್ತಿದ್ದು, ಹಲವು ಮನವಿ ನೀಡಿದರೂ ಪ್ರಯೋಜನವಾಗಿಲ್ಲ. ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ ಶಾಲಾ ದಾಖಲೆಯನ್ನು ತಿದ್ದಿದವರ, ನಕಲಿ ಜಾತಿ ಪ್ರಮಾಣಪತ್ರ ನೀಡಿದವರ ಮತ್ತು ಈ ಪ್ರಮಾಣಪತ್ರ ದುರುಪಯೋಗಪಡಿಸಿಕೊಂಡು ನಮ್ಮ ಸಮುದಾಯಕ್ಕೆ ಸಿಗಬೇಕಾದ ಸೌಲಭ್ಯಗಳನ್ನು ಕಾನೂನುಬಾಹಿರವಾಗಿ ಪಡೆಯವರ ಮೇಲೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.

ರಾಜ್ಯದಲ್ಲಿ ಪರಿಶಿಷ್ಟ ಪಂಗಡದ ನಾಯಕ, ತಳವಾರ ಹೆಸರಿನಲ್ಲಿ ಪ್ರವರ್ಗ-೧ರಲ್ಲಿರುವ ಬೇರೆ ಸಮುದಾಯದವರು ಅಕ್ರಮವಾಗಿ ಪರಿಶಿಷ್ಟ ಪಂಗಡದ ಜಾತಿ ಪ್ರಮಾಣಪತ್ರ ಮತ್ತು ಸಿಂಧುತ್ವ ಪ್ರಮಾಣಪತ್ರಗಳನ್ನು ತೆಗೆದುಕೊಂಡು ವಂಚಿಸುತ್ತಿರುವ ಹಾಗೂ ಅನ್ಯ ಸಮುದಾಯದವರನ್ನು ಎಸ್.ಟಿ. ಪಟ್ಟಿಗೆ ಸೇರಿಸುತ್ತಿರುವುದರ ಬಗ್ಗೆಯೂ ಮನವಿಯಲ್ಲಿ ಉಲ್ಲೇಖಿಸಲಾಗಿದೆ.

ತಾಲೂಕು ವಾಲ್ಮೀಕಿ ನಾಯಕ ಸಮಾಜದ ಪ್ರಮುಖರಾದ ಲಕ್ಷ್ಮಣ ದೇವರಗುಡ್ಡ, ಸುರೇಶ ಕಲ್ಲೊಳ್ಳಿ, ಶಂಕರ ಕೋಡಣ್ಣವರ, ಕಲ್ಲಪ್ಪ ಕರಡಿಕೊಪ್ಪ, ಗಂಗಾಧರ ತಳವಾರ, ಶಂಕ್ರಣ್ಣ ವಾಲ್ಮೀಕಿ, ಹಾಲಪ್ಪ ಕೋಡಣ್ಣವರ, ಉಮೇಶ ರಾಮಾಪುರ ಮುಂತಾದವರಿದ್ದರು.