ಜನಿವಾರ ತೆಗೆಸಿದವರ ವಿರುದ್ಧ ಕ್ರಮಕ್ಕೆ ಒತ್ತಾಯ

| Published : Apr 23 2025, 12:30 AM IST

ಸಾರಾಂಶ

ಸ್ವಾತಂತಂತ್ರ್ಯ ಬಂದಾಗಿನಿಂದಲೂ ನಮಗೆ ಸಿಗಬೇಕಾದ ಸವಲತ್ತುಗಳಿಗೂ ಸಹ ಬ್ರಾಹ್ಮಣರು ಬೀದಿಗಿಳಿದು ಪ್ರತಿಭಟನೆ ನಡೆಸಿರುವ ಇತಿಹಾಸವಿಲ್ಲ. ಆದರೆ ಇಂದು ನಮ್ಮ ಮಕ್ಕಳ ವಿದ್ಯಾಭ್ಯಾಸಕ್ಕೆ ತೊಂದರೆಯಾಗಿರುವುದನ್ನು ನೋಡುತ್ತಾ ಬ್ರಾಹ್ಮಣರು ಕೈಕಟ್ಟಿ ಕುಳಿತುಕೊಳ್ಳಲು ಸಾಧ್ಯವಿಲ್ಲ. ಅಧಿಕಾರಿಗಳ ವರ್ತನೆ ಖಂಡನೀಯ

ಕನ್ನಡಪ್ರಭ ವಾರ್ತೆ ಕೆಜಿಎಫ್‌ಸಿಇಟಿ ಪರೀಕ್ಷೆ ಬರೆಯಲು ಹೋದ ಬ್ರಾಹ್ಮಣ ವಿದ್ಯಾರ್ಥಿಗಳು ಧರಿಸಿದ್ದ ಪವಿತ್ರವಾದ ಜನಿವಾರವನ್ನು ಕಾಲೇಜಿನ ಸಿಬ್ಬಂದಿ, ಅಧಿಕಾರಿಗಳು ಬಲವಂತವಾಗಿ ಕತ್ತರಿಸಿರುವುದು ಖಂಡನೀಯ. ಸರ್ಕಾರ ಕೂಡಲೇ ಸಂಬಂಧಪಟ್ಟವರು ಯಾರೇ ಆಗಿರಲಿ ಅವರನ್ನು ಶಿಕ್ಷೆಗೊಳಪಡಿಸಬೇಕು ಎಂದು ಬ್ರಾಹ್ಮಣ ಸಂಘದ ಪ್ರಧಾನ ಕಾರ್ಯದರ್ಶಿ ನಾರಾಯಣಮೂರ್ತಿ ಆಗ್ರಹಿಸಿದರು. ನಗರದ ತಾಲೂಕು ಆಡಳಿತ ಸೌಧದ ಎದುರು ಕೆಜಿಎಫ್ ತಾಲೂಕು ಬ್ರಾಹ್ಮಣ ಸಂಘದ ವತಿಯಿಂದ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದರು.

ಮನೋಸ್ಥೈರ್ಯ ಕುಗ್ಗಿಸುವ ಯತ್ನ

ವರ್ಷಪೂರ್ತಿ ಹಗಲು ರಾತ್ರಿ ಎನ್ನದೇ ಕಷ್ಟಪಟ್ಟು ಕಠಿಣ ಅಭ್ಯಾಸ ಮಾಡಿಕೊಂಡು ಪರೀಕ್ಷೆಗೆ ಹಾಜರಾದರೆ ಜನಿವಾರ ಹಾಕಿದ್ದಾರೆ ಎಂಬ ಕಾರಣದಿಂದ ಅವರ ಮನೋಸ್ಥೈರ್ಯವನ್ನು ಕುಗ್ಗಿಸುವಂತಹ ಕೆಲಸಕ್ಕೆ ಸಿಬ್ಬಂದಿ ಮತ್ತು ಅಧಿಕಾರಿಗಳು ಮುಂದಾಗಿರುವುದು ಖಂಡನೀಯ ಎಂದರು. ಮುಜರಾಯಿ ದೇವಾಲಯಗಳ ಅರ್ಚಕ ಮತ್ತು ಆಗಮಿಕರ ಸಂಘದ ರಾಜ್ಯ ಸಂಘಟನಾ ಸಂಚಾಲಕ ಡಾ.ಗುರು ದೀಕ್ಷಿತ್ ಮಾತನಾಡಿ, ಸ್ವಾತಂತ್ರö್ಯ ಬಂದಾಗಿನಿಂದಲೂ ನಮಗೆ ಸಿಗಬೇಕಾದ ಸವಲತ್ತುಗಳಿಗೂ ಸಹ ಬ್ರಾಹ್ಮಣರು ಬೀದಿಗಿಳಿದು ಪ್ರತಿಭಟನೆ ನಡೆಸಿರುವ ಇತಿಹಾಸವಿಲ್ಲ. ಆದರೆ ಇಂದು ನಮ್ಮ ಮಕ್ಕಳ ವಿದ್ಯಾಭ್ಯಾಸಕ್ಕೆ ತೊಂದರೆಯಾಗಿರುವುದನ್ನು ನೋಡುತ್ತಾ ಕೈಕಟ್ಟಿ ಕುಳಿತುಕೊಳ್ಳಲು ಸಾಧ್ಯವಿಲ್ಲ. ಸಮಾಜದ ಒಳಿತೀಗಾಗಿ ದುಡಿಮೆ

ಗಣೇಶ ದೇವಾಲಯದ ಮುಖ್ಯ ಅರ್ಚಕ ಗಣೇಶ್, ಮಾತನಾಡಿ ಅನಾದಿ ಕಾಲದಿಂದ ಬ್ರಾಹ್ಮಣ ಸಮಾಜವು ಸೇವೆ ಮಾಡಿಕೊಂಡು ಸಮಾಜದ ಒಳಿತಿಗಾಗಿ ದುಡಿಯುತ್ತಿದ್ದೇವೆ. ಜನಿವಾರವನ್ನು ಧರಿಸುವ ಸಂದರ್ಭದಲ್ಲಿ ಕೆಲವು ವಿಧಿ ವಿಧಾನಗಳನ್ನು ಪೂರೈಸಿ ಧರಿಸಲಾಗುತ್ತದೆ. ಜನಿವಾರವನ್ನು ಮುಟ್ಟುವುದೆ ತಪ್ಪು ಅಂತಹ ವೇಳೆ ಜನಿವಾರವನ್ನು ಕತ್ತರಿಸುವುದು ಘೋರ ಪಾಪವಾಗಿದ್ದು, ಈ ವಿಚಾರವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿ ತಪ್ಪು ಮಾಡಿದವರ ವಿರುದ್ಧ ಕ್ರಮವಹಿಸಬೇಕು ಎಂದು ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ಬ್ರಾಹ್ಮಣ ಸಮಾಜದ ಮುಖಂಡರಾದ ರಾಮಕೃಷ್ಣ, ಸನಾತನ ಧರ್ಮ ಸಭಾದ ಅಧ್ಯಕ್ಷ ಮಂಜುನಾಥ್, ನಟರಾಜ್ ಅಯ್ಯರ್, ಮೂರ್ತಿ, ಕಾಮತ್, ದೇಶಪಾಂಡೆ, ಯಜುರ್ವೇದ ಸೇವಾ ಟ್ರಸ್ಟ್ ಕಾರ್ಯದರ್ಶಿ ಸಿ.ಎ.ಮುರಳಿಧರಾವ್, ಕೆಜಿಎಫ್ ಮುಜರಾಯಿ ಅರ್ಚಕರ ಮತ್ತು ಆಗಮಿಕರ ಸಂಘದ ಅಧ್ಯಕ್ಷ ಮಂಜುನಾಥ್ ದೀಕ್ಷಿತ್, ಜಗದೀಶ್ ಐಯ್ಯರ್, ನರೇಂದ್ರ ದೀಕ್ಷಿತ್, ಚಂದ್ರಶೇಖರ್ ದೀಕ್ಷಿತ್, ರಮೇಶ್, ವೆಂಕಟಚಲಪತಿ, ಶ್ರಿರಾಮ್, ವಿಶ್ವನಾಥ್, ವೆಂಕಟರಮಣ, ಪ್ರಸಾದ್, ಸುರೇಶ್, ಕೃಷ್ಣಮೂರ್ತಿ, ವಿಜಯ್, ನಾಗೇಂದ್ರ, ವಿಜಯ್‌ಕುಮಾರ್, ರಾಮಮೂರ್ತಿ ಹಾಗೂ ಇತರರು ಹಾಜರಿದ್ದರು.