ಸೂಗೂರು ವಿತರಣಾ ನಾಲೆಯಿಂದ ಕೆಲವರು ಸೈಫಾನ್ ಪೈಪ್‌ ಮೂಲಕ ಅಕ್ರಮವಾಗಿ ನೀರು ತೆಗೆದುಕೊಂಡು ಹೋಗಿ ಸಂಗ್ರಹಿಸುತ್ತಿದ್ದಾರೆ.

ಕಂಪ್ಲಿ: ಎಲ್‌ಎಲ್ಸಿ ಕಾಲುವೆಯ ಸೂಗೂರು ವಿತರಣಾ ನಾಲೆಯ 14ನೇ ಮೈಲಿನ ಇಟಗಿ ಕಾಲುವೆಗಳಿಗೆ ಸಮರ್ಪಕವಾಗಿ ನೀರು ಪೂರೈಸುವಂತೆ ಆಗ್ರಹಿಸಿ ರೈತರು ಬುಧವಾರ ಎಮ್ಮಿಗನೂರಿನಿಂದ ಕಂಪ್ಲಿಯ ನೀರಾವರಿ ನಿಗಮದ ಕಚೇರಿವರೆಗೆ ಪಾದಯಾತ್ರೆ ನಡೆಸಿ ಪ್ರತಿಭಟನೆ ನಡೆಸಿದರು.

ಎಮ್ಮಿಗನೂರಿನ ಜಡಿತಾತ ದೇವಸ್ಥಾನದಿಂದ ಪಾದಯಾತ್ರೆ ಆರಂಭಿಸಿದ ರೈತರು ವಿವಿಧ ಘೋಷಣೆ ಕೂಗುತ್ತಾ ಕಂಪ್ಲಿಯ ನೀರಾವರಿ ನಿಗಮದ ಕಚೇರಿಗೆ ಆಗಮಿಸಿದರು. ಬಳಿಕ ಕಚೇರಿ ಆವರಣದಲ್ಲಿ ಪ್ರತಿಭಟನೆ ನಡೆಸಿ ಸೂಗೂರು ವಿತರಣಾ ನಾಲೆಯ ಅಚ್ಚುಕಟ್ಟು ಪ್ರದೇಶದ ರೈತರಿಗೆ ಸಮರ್ಪಕವಾಗಿ ನೀರು ತಲುಪುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ನಂತರ ನೀರಾವರಿ ನಿಗಮದ ಎಇಇ ಎ.ಶ್ರೀನಿವಾಸಗೆ ಮನವಿ ಸಲ್ಲಿಸಿದರು.

ರೈತ ಸಂಘದ ತಾಲೂಕಾಧ್ಯಕ್ಷ ವಿ. ವೀರೇಶ್ ಮಾತನಾಡಿ, ಸೂಗೂರು ವಿತರಣಾ ನಾಲೆಯಿಂದ ಕೆಲವರು ಸೈಫಾನ್ ಪೈಪ್‌ ಮೂಲಕ ಅಕ್ರಮವಾಗಿ ನೀರು ತೆಗೆದುಕೊಂಡು ಹೋಗಿ ಸಂಗ್ರಹಿಸುತ್ತಿದ್ದಾರೆ. ಬಳಿಕ ಆ ನೀರನ್ನು ಬೇರೆಯವರಿಗೆ ಮಾರಾಟ ಮಾಡುತ್ತಿರುವ ಆರೋಪ ಕೇಳಿಬರುತ್ತಿವೆ. ಇದರಿಂದ ಸೂಗೂರು ವಿತರಣಾ ನಾಲೆಯ ಅಚ್ಚುಕಟ್ಟು ಪ್ರದೇಶದಲ್ಲಿರುವ ರೈತರಿಗೆ ಸಮರ್ಪಕವಾಗಿ ನೀರು ತಲುಪದೇ ತೊಂದರೆ ಅನುಭವಿಸುವಂತಾಗಿದೆ ಎಂದು ದೂರಿದರು.

ರೈತ ಸಂಘದ ರಾಜ್ಯ ಕಾರ್ಯಾಧ್ಯಕ್ಷ ಬಿ.ವಿ. ಗೌಡ ಮಾತನಾಡಿ, ರೈತರ ಜಮೀನುಗಳಿಗೆ ಸಮರ್ಪಕ ನೀರು ತಲುಪಿಸುವ ಜವಾಬ್ದಾರಿ ನೀರಾವರಿ ನಿಗಮದ ಅಧಿಕಾರಿಗಳ ಮೇಲಿದೆ. ಆಂಧ್ರಪ್ರದೇಶದ ನೀರಾವರಿ ಮಂಡಳಿ ಅಧಿಕಾರಿಗಳು ಕಾಲುವೆಯ ಕೊನೆಯ ಅಂಚಿನ ರೈತರಿಗೂ ನೀರು ತಲುಪಿಸುವ ರೀತಿಯಲ್ಲಿ ಕಾರ್ಯ ನಿರ್ವಹಿಸುವಂತೆ ಇಲ್ಲಿನ ಅಧಿಕಾರಿಗಳು ಕರ್ತವ್ಯ ನಿರ್ವಹಿಸಬೇಕು ಎಂದು ಹೇಳಿದರು.

ಸೂಗೂರು ವಿತರಣಾ ನಾಲೆಗೆ ಕನಿಷ್ಠ 60 ಕ್ಯೂಸೆಕ್ ನೀರು ಹರಿಸಿ, ನಾಲೆಯ ಕೊನೆಯ ಅಂಚಿನ ಜಮೀನುಗಳಿಗೂ ನೀರು ತಲುಪುವಂತೆ ಕ್ರಮ ಕೈಗೊಳ್ಳಬೇಕು. ಆರಂಭದ ಭಾಗದಲ್ಲೇ ಹೆಚ್ಚಿನ ಪ್ರಮಾಣದ ನೀರನ್ನು ಬಳಸಿಕೊಳ್ಳುವುದರಿಂದ ಕೊನೆಯ ಭಾಗದ ರೈತರು ನೀರಿಗಾಗಿ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಆದ್ದರಿಂದ ನೀರಿನ ಹರಿವಿನ ಮೇಲೆ ಅಧಿಕಾರಿಗಳು ನಿರಂತರ ನಿಗಾ ವಹಿಸಬೇಕು ಎಂದು ಆಗ್ರಹಿಸಿದರು.

ಕಾಲುವೆಗಳಲ್ಲಿ ನೀರು ಹರಿಯುತ್ತಿದ್ದರೂ ಅಚ್ಚುಕಟ್ಟು ಪ್ರದೇಶದ ಎಲ್ಲ ರೈತರ ಜಮೀನುಗಳಿಗೆ ಸಮರ್ಪಕವಾಗಿ ನೀರು ತಲುಪದಿದ್ದರೆ ನೀರಾವರಿ ಯೋಜನೆಯ ಉದ್ದೇಶವೇ ವಿಫಲವಾಗುತ್ತದೆ. ಹೀಗಾಗಿ ನೀರು ಹಂಚಿಕೆಯಲ್ಲಿ ಯಾವುದೇ ತಾರತಮ್ಯವಾಗದಂತೆ ಅಧಿಕಾರಿಗಳು ಕ್ರಮ ಕೈಗೊಂಡು ಕೊನೆಯ ಅಂಚಿನ ರೈತರಿಗೂ ನೀರು ದೊರೆಯುವಂತೆ ವ್ಯವಸ್ಥೆ ಮಾಡಬೇಕು ಎಂದು ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ಕೆ.ರಮೇಶ್, ಕಾಗೆ ಈರಣ್ಣ, ಬರ್ಗಿ ನಾಗರಾಜಗೌಡ, ಶಿವನೇಗೌಡರ ರಾಜಶೇಖರ, ಬುರೆಡ್ಡಿ ಸಣ್ಣಜಡೆಪ್ಪ, ಶಾಷಾವಲಿ, ಬಾವಿಕಟ್ಟೆ ಜಡೆಪ್ಪ, ಅನಿಲ್‌ಕುಮಾರ್, ಡೈರಿ ವೀರೇಶ್, ಕೆ.ಖಾಸಿಂಸಾಬ್, ಬುರೆಡ್ಡಿ ಬಸವನಗೌಡ, ಹರಿಜನ ಲಿಂಗಪ್ಪ ಸೇರಿದಂತೆ ಹಲವು ರೈತರು ಪಾಲ್ಗೊಂಡಿದ್ದರು.