ವಾಣಿವಿಲಾಸಕ್ಕೆ 10 ಟಿಎಂಸಿ ನೀರು ನಿಗದಿಗೆ ಆಗ್ರಹ

| Published : Aug 13 2024, 12:48 AM IST

ಸಾರಾಂಶ

ಸರ್ಕಾರ ವಾಣಿವಿಲಾಸ ಜಲಾಶಯಕ್ಕೆ 10 ಟಿಎಂಸಿ ನೀರು ನಿಗದಿಪಡಿಸಿ, ಈ ಜಲಾಶಯದಿಂದ ಗಾಯತ್ರಿ ಜಲಾಶಯಕ್ಕೆ ನೀರು ಹರಿಸಿ ತದನಂತರ ಈ ಡ್ಯಾಂನಿಂದ ಶಿರಾ ಮತ್ತು ಹಿರಿಯೂರು ತಾಲೂಕಿನ 16 ಕೆರೆಗಳಿಗೆ ನೀರು ಹರಿಸಿದರೆ 1 ಸಾವಿರ ಎಕರೆ ಭೂಮಿ ನೀರಾವರಿ ಪ್ರದೇಶವಾಗಲಿದೆ ಎಂದು ರಾಜ್ಯ ತೆಂಗು ಮತ್ತು ನಾರು ನಿಗಮದ ಮಾಜಿ ಅಧ್ಯಕ್ಷ ಬಿ.ಕೆ.ಮಂಜುನಾಥ್ ತಿಳಿಸಿದರು.

ಕನ್ನಡಪ್ರಭ ವಾರ್ತೆ ಶಿರಾ ಸರ್ಕಾರ ವಾಣಿವಿಲಾಸ ಜಲಾಶಯಕ್ಕೆ 10 ಟಿಎಂಸಿ ನೀರು ನಿಗದಿಪಡಿಸಿ, ಈ ಜಲಾಶಯದಿಂದ ಗಾಯತ್ರಿ ಜಲಾಶಯಕ್ಕೆ ನೀರು ಹರಿಸಿ ತದನಂತರ ಈ ಡ್ಯಾಂನಿಂದ ಶಿರಾ ಮತ್ತು ಹಿರಿಯೂರು ತಾಲೂಕಿನ 16 ಕೆರೆಗಳಿಗೆ ನೀರು ಹರಿಸಿದರೆ 1 ಸಾವಿರ ಎಕರೆ ಭೂಮಿ ನೀರಾವರಿ ಪ್ರದೇಶವಾಗಲಿದೆ ಎಂದು ರಾಜ್ಯ ತೆಂಗು ಮತ್ತು ನಾರು ನಿಗಮದ ಮಾಜಿ ಅಧ್ಯಕ್ಷ ಬಿ.ಕೆ.ಮಂಜುನಾಥ್ ತಿಳಿಸಿದರು. ಶಿರಾ ತಾಲೂಕಿನ ಗಡಿ ಗ್ರಾಮ ಜವಗೊಂಡನಹಳ್ಳಿ ಗ್ರಾಮದಲ್ಲಿ ಕಳೆದ 55 ದಿನಗಳಿಂದ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಹಾಗೂ ಶಿರಾ ತಾಲೂಕಿನ ಗೌಡಗೆರೆ ಹೋಬಳಿಯ ಉಜ್ಜನಕುಂಟೆ, ಮೆಳೆಕೋಟೆ, ಪಿನ್ನನಹೊಳೆ ಗ್ರಾಮಗಳ ರೈತರು ಹಮ್ಮಿಕೊಂಡಿರುವ ಅನಿರ್ದಿಷ್ಟಾವಧಿ ಧರಣಿಯಲ್ಲಿ ಅವರು ಮಾತನಾಡಿದರು.

ಸರ್ಕಾರ ಈ ಭಾಗದ ರೈತರ ಸಮಸ್ಯೆಗೆ ಸ್ಪಂದಿಸಬೇಕಿದ್ದು, ಚಿತ್ರದುರ್ಗ ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್ ಅವರು ಈ ನೀರಾವರಿ ಹೋರಾಟಗಾರರ ಸಮಸ್ಯೆ ಆಲಿಸಬೇಕು. ಈಗಾಗಲೇ ಚಿತ್ರದುರ್ಗ ಸಂಸದ ಗೋವಿಂದ ಕಾರಜೋಳ ಈ ಮುಷ್ಕರ ನಿರತ ರೈತರನ್ನು ಭೇಟಿ ಮಾಡಿ ಭರವಸೆ ನೀಡಿದ್ದು, ಕೇಂದ್ರ ಸರ್ಕಾರ ಅಪ್ಪರ್ ಭದ್ರಾ ನೀರಾವರಿ ಯೋಜನೆಗೆ ನಿಗದಿಪಡಿಸಿರುವ 5300 ಕೋಟಿ ರೂಪಾಯಿ ಅನುದಾನ ಶೀಘ್ರ ಬಿಡುಗಡೆಗೊಳಿಸಿ ಕಾಮಗಾರಿ ಪೂರ್ಣಗೊಳಿಸುವುದರ ಜೊತೆಗೆ, ಅಪ್ಪರ್ ಭದ್ರಾ ನೀರಾವರಿ ಯೋಜನೆಯನ್ನು ರಾಷ್ಟ್ರೀಯ ಯೋಜನೆಯಾಗಿ ಘೋಷಿಸಬೇಕು ಎಂದು ಆಗ್ರಹಿಸಿದರು.

ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ತಾಲೂಕು ಅಧ್ಯಕ್ಷ ತಿಪ್ಪೇಸ್ವಾಮಿ ಮಾತನಾಡಿ, ಕಳೆದ 55 ದಿನಗಳಿಂದ ನಾವು ನೀರಿಗಾಗಿ ಹೋರಾಟ ಮಾಡುತ್ತಿದ್ದೇವೆ. ನಮ್ಮನ್ನು ಸೌಜನ್ಯಕ್ಕಾದರೂ ಕೇಳುವ ಪರಿಸ್ಥಿತಿ ಸರ್ಕಾರಕ್ಕಿಲ್ಲ. ಇದು ರೈತರ ಬಗ್ಗೆ ಇಟ್ಟಿರುವ ಕಾಳಜಿ ತೋರಿಸುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಪ್ರತಿಭಟನೆಯಲ್ಲಿ ಜೆಡಿಎಸ್ ಮುಖಂಡ ಉಜ್ಜನಕುಂಟೆ ಹೆಚ್.ನಾಗರಾಜು, ರೈತ ಮುಖಂಡರಾದ ಸಿದ್ದನಂಜಪ್ಪ, ಎಂ.ಆರ್. ಛಾಯಾಪತಿ, ಪೂಜಾರ್ ಈಶ್ವರ್, ಕೆ.ಎಂ.ರಂಗಸ್ವಾಮಿ, ಕಾಂಗ್ರೆಸ್ ಮುಖಂಡ ಉದಯಶಂಕರ್, ಯಶೋಧರ ಗೌಡ, ಚಿನ್ನಸ್ವಾಮಿ, ಪದ್ಮನಾಭ ಶಾಸ್ತ್ರಿ, ಚಿಕ್ಕನಕೋಟೆ ಈರಣ್ಣ , ಡಿ.ಈಶ್ವರಪ್ಪ ಸೇರಿದಂತೆ ನೂರಾರು ರೈತರು ಭಾಗವಹಿಸಿದ್ದರು.