ಪುನರ್ವಸತಿ ಕೇಂದ್ರದ ನಿವೇಶನ ಹಂಚಿಕೆಗೆ ಆಗ್ರಹ

| Published : Mar 28 2024, 12:55 AM IST

ಸಾರಾಂಶ

ಶಿರೂರು ಗ್ರಾಮದ ಪುನರ್ವಸತಿ ಕೇಂದ್ರದ ನಿವೇಶನಗಳ ಹಂಚಿಕೆ ಹಾಗೂ ಹದ್ದುಬಸ್ತು ಮಾಡಿಕೊಂಡುವಂತೆ ಆಗ್ರಹಿಸಿ ಪುನರ್ವಸತಿ ಹೋರಾಟ ಸಮಿತಿ ಕಾರ್ಯಕರ್ತರು ಪಟ್ಟಣದಲ್ಲಿ ತಹಸೀಲ್ದಾರ್ ಗೆ ಮನವಿ ಸಲ್ಲಿಸಿದರು.

ತಹಸೀಲ್ದಾರ್‌ಗೆ ಹೋರಾಟ ಸಮಿತಿ ಕಾರ್ಯಕರ್ತರ ಮನವಿ

ಕನ್ನಡಪ್ರಭ ವಾರ್ತೆ ಕುಕನೂರು

ಶಿರೂರು ಗ್ರಾಮದ ಪುನರ್ವಸತಿ ಕೇಂದ್ರದ ನಿವೇಶನಗಳ ಹಂಚಿಕೆ ಹಾಗೂ ಹದ್ದುಬಸ್ತು ಮಾಡಿಕೊಂಡುವಂತೆ ಆಗ್ರಹಿಸಿ ಪುನರ್ವಸತಿ ಹೋರಾಟ ಸಮಿತಿ ಕಾರ್ಯಕರ್ತರು ಪಟ್ಟಣದಲ್ಲಿ ತಹಸೀಲ್ದಾರ್ ಅಶೋಕ ಶಿಗ್ಗಾವಿಗೆ ಬುಧವಾರ ಮನವಿ ಸಲ್ಲಿಸಿದರು.

ಈ ಹಿಂದೆ ಶಿರೂರು ಗ್ರಾಪಂ ಕಾರ್ಯಾಲಯದಲ್ಲಿ ಪುನರ್ವಸತಿ ಕೇಂದ್ರದ ನಿವೇಶನ ಹಂಚಿಕೆ ಮತ್ತು ಹದ್ದುಬಸ್ತು ಉದ್ದೇಶದಿಂದ ವಿಶೇಷ ಗ್ರಾಮ ಸಭೆ ನಡೆಸಲಾಗಿತ್ತು. ಬೇರೆ ಬೇರೆ ನಿವೇಶನಗಳಲ್ಲಿ ಅತಿಕ್ರಮವಾಗಿ ನಿರ್ಮಾಣಗೊಂಡ ಕಟ್ಟಡದ ಬಗ್ಗೆ ಚರ್ಚೆ ನಡೆಸಿದ್ದರು. ಗ್ರಾಮದ ಖಾಜಬಿ ಖಾಸಿಂಸಾಬ್ ಸೋಂಪೂರ ಇವರಿಗೆ ನಿವೇಶನ ಸಂಖ್ಯೆ ೬೪ ನೀಡಲಾಗಿತ್ತು. ಆದರೆ ಸಿದ್ದಮ್ಮ ಗಂಡ ಈರಪ್ಪ ಕಡಗತ್ತಿ ಅಕ್ರಮವಾಗಿ ಮನೆ ನಿರ್ಮಾಣ ಮಾಡಿರುವುದರಿಂದ ಸಿದ್ದಮ್ಮ ಗಂಡ ಈರಪ್ಪ ಕಡಗತ್ತಿ ಇವರಿಗೆ ನೀಡಿರುವ ಸಂಖ್ಯೆ ೬೩ ನಿವೇಶನವನ್ನು ಖಾಜಬಿ ಖಾಸಿಂಸಾಬ್ ಸೋಂಪೂರ ಅವರಿಗೆ ನೀಡಲು ಒಪ್ಪಿಗೆ ನೀಡಿದ್ದರಿಂದ ಸಭೆಯಲ್ಲಿ ಠರಾವು ಪಾಸ್‌ ಮಾಡಲಾಗಿತ್ತು.

ಆದರೆ, ಈ ಎರಡು ನಿವೇಶನದ ಮಾಲೀಕರು ಮೃತಪಟ್ಟ ಹಿನ್ನೆಲೆ ಖಾಜಬಿ ಮಗ ಮಾಬುಸಾಹೆಬ್ ಸೋಂಪೂರ ನಮ್ಮ ನಿವೇಶನ ಬಿಟ್ಟುಕೊಡುವಂತೆ ಸಿದ್ದಮ್ಮನ ಮಗ ಬಾಳಪ್ಪನನ್ನು ಕೇಳಿದ್ದರಿಂದ ದೌರ್ಜನ್ಯ ಎಸಗಿದ್ದಾನೆ. ಇದರಿಂದ ಗ್ರಾಮದ ದಲಿತ ಸಮುದಾಯದ ಹಿರಿಯರು ಮಧ್ಯೆ ಪ್ರವೇಶಿಸಿ, ನ್ಯಾಯಯುತವಾಗಿ ಬಗೆಹರಿಸಲು ಮುಂದಾದಾಗ ವೀರೇಶ ಹುಬ್ಬಳ್ಳಿ ಬೆಲೆ ನೀಡಿಲ್ಲ. ಕೂಡಲೇ ನಿವೇಶನ ಕಳೆದುಕೊಂಡ ಖಾಜಬಿ ಸೋಂಪೂರ ಕುಟುಂಬಕ್ಕೆ ಅನ್ಯಾಯವಾಗಿದ್ದು, ನ್ಯಾಯ ಒದಗಿಸಬೇಕು. ಅಲ್ಲದೇ ಹಲವು ಬಾರಿ ಅತಿಕ್ರಮಿಸಿರುವ ನಿವೇಶನವನ್ನು ತೆರವುಗೊಳಿಸುವಂತೆ ಪೊಲೀಸ್ ಇಲಾಖೆಗೆ ದೂರು ನೀಡಿದ್ದರು ಪ್ರಯೋಜನವಾಗುತ್ತಿಲ್ಲ. ಕೂಡಲೇ ನೊಂದ ಕುಟುಂಬಕ್ಕೆ ನ್ಯಾಯ ದೊರಕಿಸಿಕೊಂಡಬೇಕು ಎಂದು ಒತ್ತಾಯಿಸಿದರು.

ಡಾ. ಬಿ.ಆರ್. ಅಂಬೇಡ್ಕರ್ ಯುವಶಕ್ತಿ ಸಂಘದ ಅಧ್ಯಕ್ಷ ದೇವಪ್ಪ ಹೊಸಮನಿ, ಭೀಮ್ ಆರ್ಮಿ ಜಿಲ್ಲಾಧ್ಯಕ್ಷ ನಿಂಗು ಬೆಣಕಲ್, ತಾಲೂಕಾಧ್ಯಕ್ಷ ಶಂಕರ್ ಭಂಡಾರಿ, ಪ್ರಮುಖರಾದ ಶ್ರೀಧರ ಭಂಡಾರಿ, ಶ್ರೀಕಾಂತ ಹೊಸಮನಿ, ಗುಡದಪ್ಪ ಭಂಗಿ, ವೀರೇಂದ್ರ ಮಾದಿನೂರ, ವೀರಪ್ಪ ನಡುಲಮನಿ, ಮಂಜುನಾಥ ರಂಗಪ್ಪ ವಾಲ್ಮೀಕಿ, ಮಲ್ಲಪ್ಪ ಬಂಗಾರಿ, ಈಶಪ್ಪ ದೊಡ್ಡಮನಿ ಇತರರಿದ್ದರು.