ಜಂಬೂಸವಾರಿಯಂದು ಕಪ್ಪು ಬಾವುಟ ಪ್ರದರ್ಶಿಸುವ ಬೆದರಿಕೆ ಹಾಕಿದ್ದ ಪುರುಷೋತ್ತಮ್ ಬಂಧನಕ್ಕೆ ಆಗ್ರಹ

| Published : Sep 29 2025, 01:02 AM IST

ಜಂಬೂಸವಾರಿಯಂದು ಕಪ್ಪು ಬಾವುಟ ಪ್ರದರ್ಶಿಸುವ ಬೆದರಿಕೆ ಹಾಕಿದ್ದ ಪುರುಷೋತ್ತಮ್ ಬಂಧನಕ್ಕೆ ಆಗ್ರಹ
Share this Article
  • FB
  • TW
  • Linkdin
  • Email

ಸಾರಾಂಶ

ನಗರದ ಜನತೆ ತಮ್ಮನ್ನು ಮರೆತು ಬಿಡುತ್ತಾರೆ ಎಂಬ ಕಾರಣದಿಂದ ಪುರುಷೋತ್ತಮ್ ಇಂತಹ ಬಾಲಿಶ ಹೇಳಿಕೆ ನೀಡುತ್ತಿರುತ್ತಾರೆ. ಪದೇ ಪದೇ ಧಾರ್ಮಿಕ ಕ್ಷೇತ್ರವಾದ ಚಾಮುಂಡಿಬೆಟ್ಟದ ಬಗ್ಗೆ ಅಪಮಾನಕಾರಿ ಹೇಳಿಕೆ ನೀಡುತ್ತಿದ್ದಾರೆ. ಈ ಹಿಂದೆ ತಾವು ಮೇಯರ್ ಆಗಿದ್ದಾಗ ಚಾಮುಂಡೇಶ್ವರಿಗೆ ಸ್ವತಃ ಪುಷ್ಪಾರ್ಚನೆ ಮಾಡಿದ್ದನ್ನು ಇವರು ಮರೆತಿದ್ದಾರೆ ಎಂದು ಅವರು ಲೇವಡಿ ಮಾಡಿದರು.

ಕನ್ನಡಪ್ರಭ ವಾರ್ತೆ ಮೈಸೂರು

ಜಂಬೂಸವಾರಿಯಂದು ನಗರದ 8 ದಿಕ್ಕಿನಲ್ಲಿ ಕಪ್ಪು ಬಾವುಟ ಪ್ರದರ್ಶಿಸುವುದಾಗಿ ಬೆದರಿಕೆ ಹಾಕಿರುವ ಮಾಜಿ ಮೇಯರ್ ಪುರುಷೋತ್ತಮ್ ಅವರನ್ನು ಕೂಡಲೇ ಬಂಧಿಸಬೇಕು ಅಥವಾ ಗಡಿಪಾರು ಮಾಡಬೇಕು ಎಂದು ಮಾಜಿ ಉಪ ಮೇಯರ್ ವಿ. ಶೈಲೇಂದ್ರ ಆಗ್ರಹಿಸಿದರು.

ಚಾಮುಂಡಿಬೆಟ್ಟದಲ್ಲಿ ಮಹಿಷ ಪ್ರತಿಮೆಗೆ ಮಹಿಷ ದಸರಾ ಆಚರಣಾ ಸಮಿತಿಗೆ ಶಾಂತಿ ಸುವ್ಯವಸ್ಥೆ ಕಾಯ್ದುಕೊಳ್ಳಲೆಂದು ಜಿಲ್ಲಾಡಳಿತ, ಪೊಲೀಸ್ ಇಲಾಖೆ ಅನುಮತಿ ನೀಡಲಿಲ್ಲ. ಇದನ್ನೇ ನೆಪವಾಸಿಕೊಂಡು ಪುರುಷೋತ್ತಮ್ ಅ.2 ರಂದು ಕಪ್ಪು ಬಾವುಟ ಪ್ರದರ್ಶಿಸುವುದಾಗಿ ಬೆದರಿಕೆ ಹಾಕಿದ್ದಾರೆ ಎಂದು ಅವರು ಭಾನುವಾರ ಸುದ್ದಿಗೋಷ್ಠಿಯಲ್ಲಿ ಕಿಡಿಕಾರಿದರು.

ನಗರದ ಜನತೆ ತಮ್ಮನ್ನು ಮರೆತು ಬಿಡುತ್ತಾರೆ ಎಂಬ ಕಾರಣದಿಂದ ಪುರುಷೋತ್ತಮ್ ಇಂತಹ ಬಾಲಿಶ ಹೇಳಿಕೆ ನೀಡುತ್ತಿರುತ್ತಾರೆ. ಪದೇ ಪದೇ ಧಾರ್ಮಿಕ ಕ್ಷೇತ್ರವಾದ ಚಾಮುಂಡಿಬೆಟ್ಟದ ಬಗ್ಗೆ ಅಪಮಾನಕಾರಿ ಹೇಳಿಕೆ ನೀಡುತ್ತಿದ್ದಾರೆ. ಈ ಹಿಂದೆ ತಾವು ಮೇಯರ್ ಆಗಿದ್ದಾಗ ಚಾಮುಂಡೇಶ್ವರಿಗೆ ಸ್ವತಃ ಪುಷ್ಪಾರ್ಚನೆ ಮಾಡಿದ್ದನ್ನು ಇವರು ಮರೆತಿದ್ದಾರೆ ಎಂದು ಅವರು ಲೇವಡಿ ಮಾಡಿದರು.

ಒಂದು ಕಡೆ ತಾವು ಬೌದ್ಧ ಬಿಕ್ಕು ಎಂದು ಹೇಳಿಕೊಂಡರೆ, ಮತ್ತೊದು ಕಡೆ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುತ್ತಾರೆ. ಸ್ವತಃ ಮನೆಯಲ್ಲೇ ಇವರ ಮನೆ ದೇವರಾದ ಮೇಲುಕೋಟೆ ಚೆಲುವರಾಯಸ್ವಾಮಿ, ಕಾಳಿಕಾಂಬ ದೇವರ ಪೂಜೆ ನಡೆಯುತ್ತಿದೆ. ಹೀಗಾಗಿ, ತಮ್ಮ ಮನೆಯನ್ನೆ ಪರಿವರ್ತಿಸಲಾಗದವರು ಈ ರೀತಿ ಅವಿವೇಕದ ಹೇಳಿಕೆ ನೀಡುವುದು ಸರಿಯಲ್ಲ ಎಂದು ಅವರು ಖಂಡಿಸಿದರು.

ಮೈಸೂರು ಸಾಂಸ್ಕೃತಿಕ, ಶಾಂತಿಯುತ ನಗರ. ಆದರೆ, ಪುರುಷೋತ್ತಮ್ ಪದೇ ಪದೇ ಶಾಂತಿ ಭಂಗಕ್ಕೆ ಕಾರಣವಾಗುವ ಹೇಳಿಕೆ ಮೂಲಕ ದಲಿತ ಸಮುದಾಯದವನ್ನು ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ಚಾಮುಂಡಿಬೆಟ್ಟ ಯುದುವಂಶದ ಆಸ್ತಿಯಾಗಿದೆ. ಇವರಿಗೆ ಮಹಿಷಾಸುರನ ಬಗ್ಗೆ ಅಷ್ಟೊಂದು ಗೌರವ ಇದ್ದರೆ ತಮ್ಮ ಸ್ವಂತ ಆಸ್ತಿಗಳಲ್ಲಿ ಮಹಿಷನ ಪ್ರತಿಮೆ ನಿರ್ಮಿಸಿ ಪೂಜಿಸಲಿ. ಇದಕ್ಕೆ ತಮ್ಮ ಅಭ್ಯಂತರ ಇಲ್ಲ. ಬದಲಾಗಿ ಡಾ.ಬಿ.ಆರ್. ಅಂಬೇಡ್ಕರ್ ರಚಿಸಿದ ಸಂವಿಧಾನದಲ್ಲಿರುವ ಕಾನೂನುಗಳಿಗೆ ಅಡ್ಡಿಯುಂಟು ಮಾಡುವುದು ಸರಿಯಲ್ಲ. ಇದೇ ರೀತಿಯ ಹೇಳಿಕೆ ಮುಂದುವರಿಸಿದರೆ ಉಗ್ರ ಹೋರಾಟ ನಡೆಸಬೇಕಾಗುತ್ತದೆ ಎಂದು ಅವರು ಎಚ್ಚರಿಸಿದರು.

ಮುಖಂಡರಾದ ಅಶೋಕಪುರಂ ಮಹೇಶ್, ವಾಜಮಂಗಲ ಮಹೇಶ್, ರವಿ, ಗೌತಮ್ ಮೊದಲಾದವರು ಇದ್ದರು.