ಕನ್ನಡಪ್ರಭ ವಾರ್ತೆ ಬೈಲಹೊಂಗಲ

ಜಗತ್ತಿಗೆ ಕಾಯಕ ತತ್ವ ಬೋಧಿಸಿದ ಜಗಜ್ಯೋತಿ ಬಸವೇಶ್ವರ ಜಯಂತಿಯನ್ನು ರಾಜ್ಯದ ರೈಲ್ವೆ ಇಲಾಖೆಯಲ್ಲಿ ಕಾಯಕ ದಿನವನ್ನಾಗಿ ಆಚರಿಸಲು ಅಧಿಕಾರಿಗಳು, ಕಾರ್ಮಿಕ ವರ್ಗ ಹಾಗೂ ಸರ್ವ ಸಿಬ್ಬಂದಿ ಪಾಲ್ಗೊಂಡು ಆಚರಿಸುವಂತೆ ಕ್ರಮ‌ಕೈಗೊಳ್ಳಬೇಕು ಎಂದು ನೈಋತ್ಯ ರೈಲ್ವೆ ವಿಭಾಗದ ಡಿ.ಆರ್.ಯು.ಸಿ.ಸಿ‌ ನಿರ್ದೇಶಕ ಎಫ್.ಎಸ್.ಸಿದ್ದನಗೌಡರ ಆಗ್ರಹಿಸಿದರು.

ನೈಋತ್ಯ ರೈಲ್ವೆ ವಿಭಾಗೀಯ ಕಚೇರಿ ಹುಬ್ಬಳ್ಳಿಯಲ್ಲಿ ಶುಕ್ರವಾರ ನಡೆದ 41ನೇ ಡಿ.ಆರ್.ಯು.ಸಿ.ಸಿ ಸಭೆಯಲ್ಲಿ ಮನವಿ ನೀಡಿ ಮಾತನಾಡಿದ ಅವರು, ಜಗಜ್ಯೋತಿ ಬಸವೇಶ್ವರರ ಜಯಂತಿಯನ್ನು ಅತ್ಯಂತ ವಿಜೃಂಭಣೆಯಿಂದ ಕನ್ನಡ ನಾಡಿನಲ್ಲಿ ಆಚರಿಸುವಾಗ ರೈಲ್ವೆ ಇಲಾಖೆಯಲ್ಲಿ ಆಚರಿಸದೇ ಇರುವುದು ಅತ್ಯಂತ ದುರದೃಷ್ಟಕರ. ಪ್ರತಿವರ್ಷ ಮೇ ತಿಂಗಳಲ್ಲಿ ಬರುವ ಅಕ್ಷಯ ತೃತೀಯಾದಂದು ಬರುವ ಬಸವ ಜಯಂತಿ ಆಚರಣೆ ಮಾಡಲು ಕ್ರಮಕೈಗೊಳ್ಳಬೇಕು ಎಂದು ಒತ್ತಾಯಿಸಿದರು. ಬಳಕೆದಾರರ ಹಿತದೃಷ್ಟಿಯಿಂದ ಬೆಳಗಾವಿ-ಧಾರವಾಡ ನೇರ ರೈಲ್ವೆ ಕಾಮಗಾರಿಯ ‌ಸಮಸ್ಯೆಗಳನ್ನು ಇತ್ಯರ್ಥಗೊಳಿಸಿ, ತ್ವರಿತಗತಿಯಲ್ಲಿ ಕಾಮಗಾರಿ ಪ್ರಾರಂಭಿಸಬೇಕು. ಲೊಕಾಪೂರ-ರಾಮದುರ್ಗ-ಸವದತ್ತಿ ಹೊಸ ಮಾರ್ಗದ ಸರ್ವೆ ಕಾರ್ಯಕ್ಕೆ ಕ್ರಮ ಕೈಗೊಳ್ಳಬೇಕು. ಬೆಳಗಾವಿ-ಬೈಲಹೊಂಗಲ-ಸೊಗಲ-ಸವದತ್ತಿ ಮಾರ್ಗದ ಬಗ್ಗೆ ಹೊಸ ಪ್ರಸ್ತಾವನೆಯನ್ನು ಸರ್ಕಾರಕ್ಕೆ ಸಲ್ಲಿಸಬೇಕು. ಮಹಾರಾಷ್ಟ್ರದಿಂದ ಲಕ್ಷಾಂತರ ಭಕ್ತರು ಬರುವ ಸೋಗಲ ಕ್ಷೇತ್ರ ಮತ್ತು ರೇಣುಕಾ ಯಲ್ಲಮ್ಮ ಕ್ಷೇತ್ರ ಪ್ರವಾಸೋದ್ಯಮ ಕ್ಷೇತ್ರಗಳಾಗಿ ಹೊರಹೊಮ್ಮುವತ್ತ ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದರು.ಹುಬ್ಬಳ್ಳಿ-ದಾದರ ಲೋಕ್ ಮಾನ್ಯ ತಿಲಕ್ Train No: 17317 & 17318 ಹಾಗೂ ಹರಿಪ್ರಿಯಾ ಎಕ್ಸ್‌ಪ್ರೆಸ್‌ Train No:17416&17415 ಈ ರೈಲುಗಳು ಪಾಶ್ಚಾಪೂರ ರೈಲ್ವೆ ನಿಲ್ದಾಣದಲ್ಲಿ ಪ್ರಯಾಣಿಕರ ಅನಕೂಲಕ್ಕಾಗಿ ನಿಲುಗಡೆಗೊಳಿಸಬೇಕು.

ದಿನ‌ನಿತ್ಯವಸ್ತುಗಳು, ಸರಕುಸಾಗಾಣಿಕೆ ಹಾಗೂ ಪ್ರವಾಸೊದ್ಯಮದ ಬೆಳವಣಿಗೆಗಾಗಿ ಬೆಳಗಾವಿ-ಗೋವಾ ನಡುವೆ ಮೆಮೋ/ಪ್ರಾಸಿಂಜರ್ ರೈಲ್ವೆ ಪ್ರಾರಂಭಿಸಬೇಕು ಎಂದರು.ಬೆಳಗಾವಿ ಸಮೀಪದ ಸೂಳೆಭಾವಿ ಹತ್ತಿರ ರೈಲ್ವೆ ಸೇತುವೆ ಸಮೀಪದ ತಡೆಗೊಡಿಯಿಂದ ರೈತರ ಜಮೀನುಗಳಿಗೆ ರಸ್ತೆಗೆ ತೊಂದರೆಯಾಗಿದ್ದು ಈ ಬಗ್ಗೆ ಶೀಘ್ರವಾಗಿ ಕ್ರಮ ಕೈಗೊಳ್ಳಬೇಕು. ಬೆಳಗಾವಿ-ಬೆಂಗಳೂರ ವಂದೇ ಭಾರತ ರೈಲನ್ನು ಪ್ರಯಾಣಿಕರ ಹಿತದೃಷ್ಟಿಯಿಂದ ಬೆಳಗ್ಗೆ 7 ಗಂಟೆಗೆ ಪ್ರಾರಂಭಿಸಬೇಕು. ರಾತ್ರಿ ಹೊರಡುವ ಬೆಳಗಾವಿ-ಬೆಂಗಳೂರು ಎಕ್ಸ್‌ಪ್ರೆಸ್ ರೈಲು ಪ್ಲಾಟ್ ಫಾರಂ-1ರಲ್ಲಿ ನಿಲ್ಲಲು ಸೂಚಿಸಬೇಕು. ಧಾರವಾಡದಲ್ಲಿ ನಿರ್ಮಾಣವಾಗಿರುವ ನಿಲ್ದಾಣದ ಕಳಪೆ ಕಾಮಗಾರಿ ಪರೀಶಿಲಿಸಬೇಕು. ರೈಲಿನಲ್ಲಿ ಸಿಬ್ಬಂದಿ ಪ್ರಯಾಣಿಕರ ಜೊತೆ ಸೌಹಾರ್ದವಾಗಿ ನಡೆದುಕೊಳ್ಳಲು ಕ್ರಮ ವಹಿಸುವಂತೆ ತಿಳಿಸಿದರು. ಇದಕ್ಕೆ ಅಧಿಕಾರಿಗಳು ಕ್ರಮಕೈಗೊಳ್ಳುವ ಭರವಸೆ ನೀಡಿದರು.ಈ ಕುರಿತು ಮನವಿಯನ್ನು ವಿಭಾಗೀಯ ರೈಲ್ವೆ ಅಧಿಕಾರಿಗಳಿಗೆ‌ ನೀಡಿದರು. ಈ ಸಭೆಯಲ್ಲಿ ವಿಭಾಗಿಯ ಅಧಿಕಾರಿಗಳು, ರೈಲ್ವೆ ನಿರ್ದೇಶಕರು ಉಪಸ್ಥಿತರಿದ್ದರು.ಅಮೃತ ಕಾಲ ಅಡಿಯಲ್ಲಿ ರೈಲ್ವೆ ಇಲಾಖೆ ಶರವೇಗದಲ್ಲಿ ಅಭಿವೃದ್ಧಿಯಾಗಿದೆ. ಈ ಸಂದರ್ಭದಲ್ಲಿ ನನ್ನನ್ನು ಸದಸ್ಯನಾಗಿ ಆಯ್ಕೆ ಮಾಡಿ ರೈಲ್ವೆ ಬಳಕೆದಾರರ ಅಲ್ಪ ಸೇವೆ ಮಾಡಲು ಅನಕೂಲ ಮಾಡಿದ ರಾಜ್ಯಸಭಾ ಸಂಸದ ಈರಣ್ಣ ಕಡಾಡಿ ಅವರಿಗೆ ಕೃತಜ್ಞತೆಗಳು.

-ಎಫ್.ಎಸ್.ಸಿದ್ದನಗೌಡರ,


ನೈಋತ್ಯ ರೈಲ್ವೆ ವಿಭಾಗದ ಡಿ.ಆರ್.ಯು.ಸಿ.ಸಿ‌ ನಿರ್ದೇಶಕರು.