ಮೊದಲು ಜನತೆಗೆ ಅಗತ್ಯವಾಗಿ ಬೇಕಾದ ಮೂಲಭೂತ ಸೌಲಭ್ಯಗಳನ್ನು ಒದಗಿಸುವಂತೆ ತಹಸೀಲ್ದಾರ್ ನಂದಿನಿ ಅವರನ್ನು ಸಾರ್ವಜನಿಕರು ಒತ್ತಾಯಿಸಿದರು.

ಕನ್ನಡಪ್ರಭ ವಾರ್ತೆ ಮಧುಗಿರಿ

ಆಂದ್ರದ ಗಡಿ ಪ್ರದೇಶಕ್ಕೆ ಹೊಂದಿಕೊಂಡಿರುವ ಮಧುಗಿರಿ ತಾಲೂಕಿನ ಕೊಡಿಗೇನಹಳ್ಳಿ ಖಾಸಗಿ ಬಸ್ ನಿಲ್ದಾಣದಲ್ಲಿ ಪ್ರಯಾಣಿಕರಿಗೆ ಮತ್ತು ನಾಗರಿಕರಿಗೆ ಶುದ್ಧ ಕುಡಿವ ನೀರಿನ ಘಟಕವಿಲ್ಲ, ಶೌಚಾಲಯದ ವ್ಯವಸ್ಥೆಯಿಲ್ಲದೆ ಸಾರ್ವಜನಿಕರು ಪರದಾಡುತ್ತಿದ್ದು ಮೊದಲು ಜನತೆಗೆ ಅಗತ್ಯವಾಗಿ ಬೇಕಾದ ಮೂಲಭೂತ ಸೌಲಭ್ಯಗಳನ್ನು ಒದಗಿಸುವಂತೆ ತಹಸೀಲ್ದಾರ್ ನಂದಿನಿ ಅವರನ್ನು ಸಾರ್ವಜನಿಕರು ಒತ್ತಾಯಿಸಿದರು.

ಶನಿವಾರ ತಾಲೂಕಿನ ಕೊಡಿಗೇನಹಳ್ಳಿ ಗ್ರಾಮ ಪಂಚಾಯಿತಿ ಆವರಣದಲ್ಲಿ ಹಮ್ಮಿಕೊಂಡಿದ್ದ ಪ್ರಜಾಸೇವಾ ಅಭಿಯಾನ ಕಾರ್ಯಕ್ರಮದಲ್ಲಿ ಈ ರೀತಿ ಪ್ರಶ್ನೆಗಳು ಎದುರಾದವು. ತಕ್ಷಣ ಕಾರ್ಯಪ್ರವೃತ್ತರಾದ ತಹಸೀಲ್ದಾರ್ ನಂದಿನಿ ಅವರು ಸ್ಥಳದಲ್ಲೇ ಇದ್ದ ಇಒ ಉತ್ತಮ್ ಅವರಿಗೆ ಇನ್ನೂ ತಡ ಮಾಡದೇ ಒಂದು ವಾರದೊಳಗಾಗಿ ಇಲ್ಲಿನ ಬಸ್ ನಿಲ್ದಾಣದಲ್ಲಿ ಕುಡಿವ ನೀರಿನ ಘಟಕ ನಿರ್ಮಿಸಬೇಕು.ಜನರ ಅವಶ್ಯಕತೆಗೆ ತಕ್ಕಂತೆ ಸೂಕ್ತ ಜಾಗ ನೋಡಿ ಸಾರ್ವಜನಿಕ ಶೌಚಾಲಯ ಸಹ ಕಲ್ಪಿಸಬೇಕು ಎಂದು ಸೂಚಿಸಿದರು.

ಕಂದಾಯ ಇಲಾಖೆಗೆ ಸಂಬಂಧಿಸಿದಂತೆ 21 ಅರ್ಜಿಗಳು ಹಾಗೂ ಗ್ರಾಮ ಪಂಚಾಯಿತಿಗೆ ಸಂಬಂಧಪಟ್ಟಂತೆ 7 ಅರ್ಜಿಗಳು ಬಂದವು. ಸಾರ್ವಜನಿಕರಿಂದ ಕುಂದು ಕೊರತೆ ಅಹವಾಲು ಸ್ವೀಕರಿಸಿದ ತಹಶೀಲ್ದಾರ್ ನಂದಿನಿ ಅವರು, ಆದ್ಯತೆ ಮೇರೆಗೆ ಎಲ್ಲ ಸಮಸ್ಯೆಗಳನ್ನು ಬಗೆಹರಿಸುವ ಭರವಸೆ ನೀಡಿದರು. ಜನರು ತಮ್ಮ ಕೆಲಸಕ್ಕಾಗಿ ಕಚೇರಿಗೆ ಅಲೆಯ ಬಾರದು ಎಂಬ ದೃಷ್ಠಿಯಿಂದ ಸರ್ಕಾರ ಅಧಿಕಾರಿಗಳೇ ಜನರ ಮನೆ ಬಾಗಿಲ ಬಳಿ ಹೋಗಿ ಸಮಸ್ಯೆ ಬಗೆಹರಿಸಬೇಕು ಎಂಬುದು ಸರ್ಕಾರದ ಉದ್ದೇಶ. ಅದಕ್ಕಾಗಿಯೇ ಪ್ರಜಾಸೇವಾ ಕಾರ್ಯಕ್ರಮ ಆಯಾ ಭಾಗದಲ್ಲಿ ಹಮ್ಮಿಕೊಳ್ಳಲಾಗುತ್ತಿದೆ ಎಂದರು.

ಕಾರ್ಯ ನಿರ್ವಹಣಾಧಿಕಾರಿ ಉತ್ತಮ್, ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ಎನ್. ಹನುಮಂತರಾಯಪ್ಪ, ಜಿಲ್ಲಾ ಪಂಚಾಯಿತಿ ಎಇಇ ಮಂಜುನಾಥ್, ಬೆಸ್ಕಾಂ ಎಇಇ ಕೃಷ್ಣಮೂರ್ತಿ, ಎ.ಡಿ.ಒ. ಧನಂಜಯ್, ಉಪ ತಹಶೀಲ್ದಾರ್ ಸುದರ್ಶನ್, ಕಂದಾಯ ತನಿಖಾಧಿಕಾರಿ ಸಿ.ಆರ್. ರವೀಂದ್ರ, ಪಿಡಿಒ ಶ್ರೀನಿವಾಸ್, ಕೃಷಿ ಅಧಿಕಾರಿ ಚನ್ನಕೇಶವ, ರಂಗನಾಥ್, ಇದ್ದರು.