ಲಂಚಕ್ಕೆ ಬೇಡಿಕೆ, ಕಾನ್‌ಸ್ಟೇಬಲ್ ಅಮಾನತು

| Published : Nov 24 2023, 01:30 AM IST

ಸಾರಾಂಶ

ಶಿಗ್ಗಾಂವಿ ಪೊಲೀಸ್ ಠಾಣೆಯಲ್ಲಿದ್ದ ವಾಹನವನ್ನು ಮಾಲೀಕರಿಗೆ ನೀಡಲು ಪೊಲೀಸ್ ಲಂಚಕ್ಕೆ ಬೇಡಿಕೆ ಇಟ್ಟಿರುವ ವಿಡಿಯೋ ಗುರುವಾರ ವೈರಲ್ ಆಗುತ್ತಿದ್ದಂತೆ ಸಂಬಂಧಪಟ್ಟ ಕಾನ್‌ಸ್ಟೇಬಲ್‌ನನ್ನು ಅಮಾನತುಗೊಳಿಸಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಂಶುಕುಮಾರ್ ಆದೇಶಿಸಿದ್ದಾರೆ. ಪೊಲೀಸ್ ಕಾನ್‌ಸ್ಟೇಬಲ್ ರಮೇಶ ಭಜಂತ್ರಿ ಲಂಚ ಕೇಳಿದವರು. ಸಾಹೇಬ್ರಿಗೆ ₹ ೫ ಸಾವಿರ ಮತ್ತು ನನಗೆ ₹ ೨ ಸಾವಿರ ಕೊಡು ಎಂದು ಲಂಚ ಕೇಳಿರುವ ದೃಶ್ಯಾವಳಿ ವಿಡಿಯೋದಲ್ಲಿ ಸೆರೆಯಾಗಿದೆ.

ಕನ್ನಡಪ್ರಭ ವಾರ್ತೆ ಹಾವೇರಿ

ಶಿಗ್ಗಾಂವಿ ಪೊಲೀಸ್ ಠಾಣೆಯಲ್ಲಿದ್ದ ವಾಹನವನ್ನು ಮಾಲೀಕರಿಗೆ ನೀಡಲು ಪೊಲೀಸ್ ಲಂಚಕ್ಕೆ ಬೇಡಿಕೆ ಇಟ್ಟಿರುವ ವಿಡಿಯೋ ಗುರುವಾರ ವೈರಲ್ ಆಗುತ್ತಿದ್ದಂತೆ ಸಂಬಂಧಪಟ್ಟ ಕಾನ್‌ಸ್ಟೇಬಲ್‌ನನ್ನು ಅಮಾನತುಗೊಳಿಸಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಂಶುಕುಮಾರ್ ಆದೇಶಿಸಿದ್ದಾರೆ.

ಪೊಲೀಸ್ ಕಾನ್‌ಸ್ಟೇಬಲ್ ರಮೇಶ ಭಜಂತ್ರಿ ಲಂಚ ಕೇಳಿದವರು. ಸಾಹೇಬ್ರಿಗೆ ₹ ೫ ಸಾವಿರ ಮತ್ತು ನನಗೆ ₹ ೨ ಸಾವಿರ ಕೊಡು ಎಂದು ಲಂಚ ಕೇಳಿರುವ ದೃಶ್ಯಾವಳಿ ವಿಡಿಯೋದಲ್ಲಿ ಸೆರೆಯಾಗಿದೆ.

ಘಟನೆ ವಿವರ:

ಹುಬ್ಬಳ್ಳಿಯ ಗಣೇಶ ಪೇಟೆಯ ಮೊಹಮ್ಮದ್ ಇಬ್ರಾಹಿಂ ಮಂಚಿನಕೊಪ್ಪ ಎಂಬವರು ತಮ್ಮ ಕಾರನ್ನು ಪರಿಚಿತರಾದ ಇಮ್ರಾನ್ ಎಂಬುವವರಿಗೆ ಕೊಟ್ಟು, ಕಾರಿನ ಕಂತು ಕಟ್ಟಿಕೊಂಡು ಹೋಗು ಎಂದು ತಿಳಿಸಿದ್ದ. ಇಮ್ರಾನ್ ಅವರಿಂದ ಕಾರು ಪಡೆದಿದ್ದ ಧಾರವಾಡ ಜಿಲ್ಲೆಯ ಹಿರೇನರ್ತಿ ಗ್ರಾಮದ ಹನೀಫ್ ೪ ತಿಂಗಳು ಕಾರಿನ ಕಂತು ಕಟ್ಟಿ, ೨ ತಿಂಗಳ ಕಂತನ್ನು ಬಾಕಿ ಉಳಿಸಿಕೊಂಡಿದ್ದರು. ಆ ನಂತರ ಫೋನ್ ಸ್ವಿಚ್‌ಆಫ್ ಮಾಡಿಕೊಂಡು ತಲೆಮರೆಸಿಕೊಂಡಿದ್ದರು. ನಮ್ಮ ಕಾರು ಶಿಗ್ಗಾಂವಿ ಪಟ್ಟಣದಲ್ಲಿ ಇರುವುದನ್ನು ಪತ್ತೆ ಹಚ್ಚಿ ಪೊಲೀಸರಿಗೆ ದೂರು ನೀಡಿದ್ದೆವು ಎಂದು ಇಮ್ರಾನ್ ಸಹೋದರ ಜಾವೇದ್ ತಿಳಿಸಿದರು.

ಶಿಗ್ಗಾಂವಿ ಮೂಲದ ವಿಜಯೇಂದ್ರ ಎಂಬವರಿಗೆ ಹನೀಫ್ ₹೨ ಲಕ್ಷಕ್ಕೆ ಕಾರನ್ನು ಅಡ ಇಟ್ಟಿದ್ದರು. ನಮ್ಮ ದೂರಿನ ಮೇರೆಗೆ ಪೊಲೀಸರು ಕಾರನ್ನು ಠಾಣೆಗೆ ತರಿಸಿದ್ದಾರೆ. ಈ ಕಾರನ್ನು ಬಿಡುಗಡೆ ಮಾಡಲು ₹೧೫ ಸಾವಿರ ಲಂಚಕ್ಕೆ ಪೊಲೀಸ್ ಕಾನ್‌ಸ್ಟೇಬಲ್ ಬೇಡಿಕೆ ಇಟ್ಟಿದ್ದರು. ಅಂತಿಮವಾಗಿ ₹೭ ಸಾವಿರ ಕೊಡಲಾಯಿತು ಎಂದು ಜಾವೇದ್ ದೂರಿದ್ದಾರೆ.

ವಿಡಿಯೋ ನನ್ನ ಗಮನಕ್ಕೆ ಬಂದಿದೆ. ಪೊಲೀಸ್ ಕಾನ್‌ಸ್ಟೇಬಲ್ ರಮೇಶ ಭಜಂತ್ರಿಯನ್ನು ಇಲಾಖೆ ವಿಚಾರಣೆ ಕಾಯ್ದಿರಿಸಿ, ಅಮಾನತು ಮಾಡಲಾಗಿದೆ. ಲಂಚ ಪ್ರಕರಣಗಳು ಕಂಡು ಬಂದರೆ ಕಟ್ಟುನಿಟ್ಟಿನ ಕ್ರಮ ಜರುಗಿಸಲಾಗುವುದು ಎನ್ನುತ್ತಾರೆ ಎಸ್ಪಿ ಅಂಶುಕುಮಾರ್.