ಸಾರಾಂಶ
ಕಂಪ್ಲಿ: ಕೋಲ್ಕತಾದಲ್ಲಿನ ಕಾರ್ಯನಿರತ ವೈದ್ಯೆ ಮೇಲೆ ಅತ್ಯಾಚಾರವೆಸಗಿ ಕೊಲೆಗೈದ ಆರೋಪಿಗಳಿಗೆ ಗಲ್ಲುಶಿಕ್ಷೆ ವಿಧಿಸಬೇಕು ಎಂದು ವೈದ್ಯರಾದ ಡಾ. ರವೀಂದ್ರ ಕನಿಕೇರಿ ಹಾಗೂ ಡಾ. ಜಂಭುನಾಥ ಆಗ್ರಹಿಸಿದರು. ಪಟ್ಟಣದ ಡಾ. ಬಿ.ಆರ್. ಅಂಬೇಡ್ಕರ್ ವೃತ್ತದಲ್ಲಿ ಡಾ. ಎ.ಪಿ.ಜೆ. ಅಬ್ದುಲ್ ಕಲಾಂ ಟ್ರಸ್ಟ್, ಜೆಸಿಐ ಕಂಪ್ಲಿ ಸೋನಾ ಹಾಗೂ ಪಟ್ಟಣದ ವೈದ್ಯರ ವತಿಯಿಂದ ಇತ್ತೀಚೆಗೆ ಹಮ್ಮಿಕೊಂಡಿದ್ದ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಕೋಲ್ಕತಾದ ಸರ್ಕಾರಿ ಮೆಡಿಕಲ್ ಕಾಲೇಜಿನಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ವೈದ್ಯೆಯ ಮೇಲೆ ದುಷ್ಕರ್ಮಿಗಳು ಅತ್ಯಾಚಾರವೆಸಗಿ ಕೊಲೆ ಮಾಡುವ ಮೂಲಕ ವಿಕೃತಿ ಮೆರೆದಿದ್ದಾರೆ. ಈ ಘಟನೆ ಇಡಿ ದೇಶವೇ ತಲೆ ತಗ್ಗಿಸುವಂತಹ ಕೃತ್ಯವಾಗಿದೆ. ಸದಾ ಜನತೆಯ ಆರೋಗ್ಯದ ಹಿತಕ್ಕಾಗಿ ಹಗಲಿರುಳು ಶ್ರಮಿಸುವಂತಹ ಸೇವಕರೆಂದರೆ ಅದು ವೈದ್ಯರು ಮಾತ್ರ. ಪುರಾಣಗಳಲ್ಲಿ ವೈದ್ಯರನ್ನು ದೇವರೆಂದು ಗೌರವಿಸಿರುವುದಿದೆ. ದೇವರ ಸಮಾನವಾದ ವೈದ್ಯೆಯ ಮೇಲೆ ಈ ರೀತಿಯ ಕೃತ್ಯವ್ಯಸಗಿರುವುದು ಖಂಡನೀಯ. ಈ ಕೃತ್ಯವನ್ನು ಖಂಡಿಸಿ ಪ್ರತಿಭಟನೆಯಲ್ಲಿ ತೊಡಗಿದ್ದವರ ಮೇಲೆ ಹಲ್ಲೆಯಾಗಿರುವುದು ಶೋಚನೀಯ. ಈ ಘಟನೆಯಿಂದಾಗಿ ದೇಶದಲ್ಲಿ ವೈದ್ಯರು ನಿರ್ಭೀತಿಯಿಂದ ತಮ್ಮ ಕರ್ತವ್ಯ ನಿರ್ವಹಿಸಲಿಕ್ಕೆ ಭಯಪಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಈಗಲಾದರೂ ಸರ್ಕಾರ ಎಚ್ಚೆತ್ತುಕೊಂಡು ಆರೋಪಿಗಳಿಗೆ ಗಲ್ಲುಶಿಕ್ಷೆ ವಿಧಿಸಬೇಕು. ಈ ಕುರಿತು ಕೇಂದ್ರ ಸರ್ಕಾರ ಕಠಿಣವಾದ ಕಾನೂನು ಜಾರಿಗೆ ತರುವ ಮೂಲಕ ಈ ರೀತಿಯ ಕೃತ್ಯಗಳು ದೇಶದಲ್ಲಿ ಮರುಕಳಿಸದಂತೆ ಕ್ರಮ ವಹಿಸಬೇಕು ಎಂದು ಒತ್ತಾಯಿಸಿದರು.ವೈದ್ಯರಾದ ಡಾ. ರವೀಂದ್ರ ಕನಿಕೇರಿ, ಡಾ. ಮಲ್ಲೇಶಪ್ಪ, ಡಾ. ಜಂಭುನಾಥ ಗೌಡ, ಡಾ. ನಿರ್ಮಲಾ ಜಂಭುನಾಥ, ಡಾ. ಮಂಜುನಾಥ್, ಡಾ.ಬಿ. ಸುಧಾಕರ್, ಡಾ. ಶ್ರದ್ದಾ ಭರತ್, ಡಾ. ಭರತ್ ಪದ್ಮಶಾಲಿ, ಡಾ. ಎ.ಪಿ.ಜೆ. ಅಬ್ದುಲ್ ಕಲಾಂ ಟ್ರಸ್ಟ್ ಅಧ್ಯಕ್ಷರಾದ ಅಕ್ಕಿ ಜಿಲಾನ್, ಜೆಸಿಐ ಕಂಪ್ಲಿ ಸೋನಾದ ಅಧ್ಯಕ್ಷ ಸುಹಾಸ್ ಚಿತ್ರಗಾರ, ಮುಖಂಡರಾದ ಬಡಿಗೇರ್ ಜಿಲಾನ್ ಸಾಬ್, ಮೌಲಸಾಬ್, ವಾಸಿಮ್ ಫಯಾಜ್, ಸಿದ್ದರಾಮೇಶ್ವರ ಶಾಸ್ತ್ರಿ, ಅರುಂಧತಿ ಸುಧಾಕರ, ಪವನ್ ಪದ್ಮಶಾಲಿ, ವಿನುತಾ ಪವನ್, ಸುಮನ್, ಸುಭಾನ್, ಜಿಲಾನ್, ಮೌಲ ಹುಸೇನ್ ಇದ್ದರು.