ದೇಶೀಯ ಗೋವಂಶದ ಸಂಪೂರ್ಣ ರಕ್ಷಣೆ, ಗೋಹತ್ಯೆ ತಡೆಗೆ ಕಠಿಣ ಕೇಂದ್ರ ಕಾನೂನು ಜಾರಿ ಹಾಗೂ ಪ್ರತ್ಯೇಕ ಗೋ-ಪಾಲನೆ ಸಚಿವಾಲಯ ಸ್ಥಾಪನೆ ಸೇರಿದಂತೆ ವಿವಿಧ ಬೇಡಿಕೆಗಳನ್ನು ಮುಂದಿಟ್ಟು ಗೋ ಸಮ್ಮಾನ್ ಆಹ್ವಾನ್ ಅಭಿಯಾನದ ಪದಾಧಿಕಾರಿಗಳು ಸೋಮವಾರ ಕಾರವಾರದಲ್ಲಿ ಪ್ರತಿಭಟನೆ ನಡೆಸಿ, ಜಿಲ್ಲಾಡಳಿತದ ಮೂಲಕ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಗೆ ಮನವಿ ಸಲ್ಲಿಸಿದರು.

ಕಾರವಾರದಲ್ಲಿ ಗೋ ಸಮ್ಮಾನ್ ಆಹ್ವಾನ್ ಅಭಿಯಾನದಿಂದ ಮನವಿ

ಕನ್ನಡಪ್ರಭ ವಾರ್ತೆ ಕಾರವಾರ

ದೇಶೀಯ ಗೋವಂಶದ ಸಂಪೂರ್ಣ ರಕ್ಷಣೆ, ಗೋಹತ್ಯೆ ತಡೆಗೆ ಕಠಿಣ ಕೇಂದ್ರ ಕಾನೂನು ಜಾರಿ ಹಾಗೂ ಪ್ರತ್ಯೇಕ ಗೋ-ಪಾಲನೆ ಸಚಿವಾಲಯ ಸ್ಥಾಪನೆ ಸೇರಿದಂತೆ ವಿವಿಧ ಬೇಡಿಕೆಗಳನ್ನು ಮುಂದಿಟ್ಟು ಗೋ ಸಮ್ಮಾನ್ ಆಹ್ವಾನ್ ಅಭಿಯಾನದ ಪದಾಧಿಕಾರಿಗಳು ಸೋಮವಾರ ಕಾರವಾರದಲ್ಲಿ ಪ್ರತಿಭಟನೆ ನಡೆಸಿ, ಜಿಲ್ಲಾಡಳಿತದ ಮೂಲಕ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಗೆ ಮನವಿ ಸಲ್ಲಿಸಿದರು.

ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದ ಅಭಿಯಾನದ ಪದಾಧಿಕಾರಿಗಳು, ಗೋವುಗಳ ಸಂರಕ್ಷಣೆ, ಸೇವೆ ಮತ್ತು ರಾಷ್ಟ್ರೀಯ ಗೌರವವನ್ನು ಖಾತ್ರಿಪಡಿಸುವ ಸಮಗ್ರ ಕೇಂದ್ರ ಕಾನೂನನ್ನು ಜಾರಿಗೆ ತರಬೇಕೆಂದು ಒತ್ತಾಯಿಸಿದರು.

ಗೋ ಕಳ್ಳಸಾಗಣೆ ಮತ್ತು ಗೋಹತ್ಯೆಯನ್ನು ಜಾಮೀನುರಹಿತ ಗಂಭೀರ ಅಪರಾಧವೆಂದು ಪರಿಗಣಿಸಿ ಜೀವಾವಧಿ ಶಿಕ್ಷೆ ಹಾಗೂ ಆಸ್ತಿ ಮುಟ್ಟುಗೋಲು ಹಾಕಿಕೊಳ್ಳುವ ಕಠಿಣ ಕಾನೂನು ರೂಪಿಸಬೇಕು. ದೇಶೀಯ ಗೋವಂಶಕ್ಕೆ ರಾಷ್ಟ್ರಮಾತೆ ಅಥವಾ ರಾಷ್ಟ್ರ ಆರಾಧ್ಯ ಎಂಬ ಸಾಂವಿಧಾನಿಕ ಮಾನ್ಯತೆ ನೀಡಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.

ಎಲ್ಲ ಕಸಾಯಿಖಾನೆಗಳ ಪರವಾನಗಿ ರದ್ದುಗೊಳಿಸುವುದು, ಪಂಚಗವ್ಯ ಸಂಶೋಧನೆಗೆ ಉತ್ತೇಜನ ನೀಡುವುದು, ಶಾಲೆಗಳ ಮಧ್ಯಾಹ್ನದ ಬಿಸಿಯೂಟ ಮತ್ತು ದೇವಾಲಯಗಳ ಪ್ರಸಾದದಲ್ಲಿ ದೇಶಿ ಗೋಹಾಲು ಹಾಗೂ ತುಪ್ಪದ ಬಳಕೆಯನ್ನು ಕಡ್ಡಾಯಗೊಳಿಸುವುದು, ಪ್ರತಿ ಗ್ರಾಮ ಪಂಚಾಯಿತಿಯಲ್ಲಿ ನಂದಿಶಾಲೆ ಹಾಗೂ ಜಿಲ್ಲಾ ಮಟ್ಟದಲ್ಲಿ ಆದರ್ಶ ಗೋ ಅಭಯಾರಣ್ಯ ಸ್ಥಾಪಿಸುವುದು ಸೇರಿದಂತೆ ಹಲವು ಬೇಡಿಕೆಗಳನ್ನು ಮನವಿಯಲ್ಲಿ ಪ್ರಸ್ತಾಪಿಸಲಾಗಿದೆ.

ಇದರ ಜೊತೆಗೆ ಹೆದ್ದಾರಿಗಳಲ್ಲಿ ಗೋ-ಆ್ಯಂಬುಲೆನ್ಸ್ ಹಾಗೂ ಟ್ರಾಮಾ ಸೆಂಟರ್‌ಗಳನ್ನು ಸ್ಥಾಪಿಸುವುದು, ಶಾಲಾ ಪಠ್ಯಕ್ರಮದಲ್ಲಿ ಗೋ ವಿಜ್ಞಾನ ವಿಷಯವನ್ನು ಸೇರಿಸುವುದು, ಗೋಮಾಳ ಭೂಮಿಗಳ ಸಂರಕ್ಷಣೆಗೆ ಪ್ರತ್ಯೇಕ ಮಂಡಳಿ ರಚಿಸುವಂತೆ ಆಗ್ರಹಿಸಲಾಗಿದೆ.ಕರಾವಳಿ ಜಿಲ್ಲೆಯ ಸಂಚಾಲಕ ಗಜೇಂದ್ರ ಎಸ್. ಬೇಲೆಮನೆ, ನಾಗರಾಜ ಪೂಜಾರಿ ಬೈಂದೂರು, ಗುರೂಜಿ ರಘುವೀರ್, ಅಮಿತ್ ಮಾಳ್ಸೇಕರ್, ಧೀರಜ್ ರಾಣೆ, ಸಾಯಿಕಿರಣ ನಾಗೇಕರ, ಪ್ರಶಾಂತ ಪೇಡ್ನೇಕರ್, ವಿನಾಯಕ ಸಾವಂತ, ಓಂಕಾರ್ ಅಂಕೋಲೇಕರ್ ಮತ್ತಿತರರು ಇದ್ದರು.