ಐಪಿಎಸ್ ಹುದ್ದೆಗೆ ಸಿಐಡಿ ಡಿಟೆಕ್ಟಿವ್‌ ಅಧಿಕಾರಿಗಳ ಬೇಡಿಕೆ

| Published : Jan 24 2024, 02:03 AM IST

ಐಪಿಎಸ್ ಹುದ್ದೆಗೆ ಸಿಐಡಿ ಡಿಟೆಕ್ಟಿವ್‌ ಅಧಿಕಾರಿಗಳ ಬೇಡಿಕೆ
Share this Article
  • FB
  • TW
  • Linkdin
  • Email

ಸಾರಾಂಶ

ತಮಗೆ ಐಪಿಎಸ್‌ ಹುದ್ದೆಗೆ ಮುಂಬಡ್ತಿ ನೀಡುವಂತೆ ಸಿಐಡಿ ಡಿಟೆಕ್ಟಿವ್‌ ವೃಂದದ ಅಧಿಕಾರಿಗಳು ಬೇಡಿಕೆ ಇಟ್ಟಿದ್ದಾರೆ. ಈ ಸಂಬಂಧ ರಾಜ್ಯ ಸರ್ಕಾರಕ್ಕೆ ಒತ್ತಾಯಿಸಿ ಓರ್ವ ಅಧಿಕಾರಿ ಪತ್ರ ಸಹ ಬರೆದಿದ್ದಾರೆ. ತನ್ಮೂಲಕ ಕೆಎಸ್‌ಆರ್‌ಪಿ ಕಮಾಡೆಂಟ್‌ಗಳ ಬಳಿಕ ಐಪಿಎಸ್‌ ಹುದ್ದೆಗೆ ಸಿಐಡಿ ಡಿಟೆಕ್ಟಿವ್ ವೃಂದದ ಅಧಿಕಾರಿಗಳು ಸಹ ಹಕ್ಕೊತ್ತಾಯ ಮಂಡಿಸಿದ್ದಾರೆ. ಇದು ಐಪಿಎಸ್‌ ಹುದ್ದೆ ಮುಂಬಡ್ತಿಗೆ ಸಿವಿಲ್‌ ಮತ್ತು ನಾನ್‌ ಸಿವಿಲ್‌ ಪೊಲೀಸ್ ಅಧಿಕಾರಿಗಳ ನಡುವೆ ಮತ್ತೊಂದು ಸಮರಕ್ಕೂ ಕಾರಣವಾಗುವ ಸಾಧ್ಯತೆಗಳಿವೆ.

ಗಿರೀಶ್ ಮಾದೇನಹಳ್ಳಿ

ಕನ್ನಡಪ್ರಭ ವಾರ್ತೆ ಬೆಂಗಳೂರು ತಮಗೆ ಭಾರತೀಯ ಪೊಲೀಸ್‌ ಸೇವೆ (ಐಪಿಎಸ್‌) ಹುದ್ದೆಗೆ ಮುಂಬಡ್ತಿ ನೀಡುವಂತೆ ರಾಜ್ಯ ಅಪರಾಧ ತನಿಖಾ ದಳದ (ಸಿಐಡಿ) ಡಿಟೆಕ್ಟಿವ್‌ ವೃಂದದ ಅಧಿಕಾರಿಗಳು (ಎಸ್‌ಪಿ) ಬೇಡಿಕೆ ಇಟ್ಟಿದ್ದಾರೆ. ಈ ಸಂಬಂಧ ರಾಜ್ಯ ಸರ್ಕಾರಕ್ಕೆ ಒತ್ತಾಯಿಸಿ ಓರ್ವ ಅಧಿಕಾರಿಯೊಬ್ಬರು ಪತ್ರ ಸಹ ಬರೆದಿದ್ದಾರೆ.ತನ್ಮೂಲಕ ರಾಜ್ಯ ಸಶಸ್ತ್ರ ಮೀಸಲು ಪಡೆಯ (ಕೆಎಸ್‌ಆರ್‌ಪಿ) ಕಮಾಡೆಂಟ್‌ಗಳ ಬಳಿಕ ಐಪಿಎಸ್‌ ಹುದ್ದೆಗೆ ಸಿಐಡಿ ಡಿಟೆಕ್ಟಿವ್ ವೃಂದದ ಅಧಿಕಾರಿಗಳು ಸಹ ಹಕ್ಕೊತ್ತಾಯ ಮಂಡಿಸಿದ್ದಾರೆ. ಈ ಬೆಳವಣಿಗೆ ಬೆನ್ನಲ್ಲೇ ಇದು ಐಪಿಎಸ್‌ ಹುದ್ದೆ ಮುಂಬಡ್ತಿಗೆ ಸಿವಿಲ್‌ ಮತ್ತು ನಾನ್‌ ಸಿವಿಲ್‌ ಪೊಲೀಸ್ ಅಧಿಕಾರಿಗಳ ನಡುವೆ ಮತ್ತೊಂದು ಸಮರಕ್ಕೂ ಕಾರಣವಾಗುವ ಸಾಧ್ಯತೆಗಳಿವೆ.ರಾಜ್ಯದ ಒಟ್ಟು ಐಪಿಎಸ್‌ ಹುದ್ದೆಗಳ ಶೇ.33ರಷ್ಟು ಸ್ಥಾನಗಳನ್ನು ಸೇವಾ ಹಿರಿತನ ಆಧಾರದ ಮೇರೆಗೆ ಮುಂಬಡ್ತಿ ನೀಡಬಹುದಾಗಿದೆ. ಇದುವರೆಗೆ ಕೆಎಸ್‌ಪಿಎಸ್‌ನಿಂದ ನೇರ ಆಯ್ಕೆಯಾದ ಡಿವೈಎಸ್ಪಿಗಳು ಹಾಗೂ ಪಿಎಸ್‌ಐ ಹುದ್ದೆಯಿಂದ ಪದನ್ನೋತಿ ಪಡೆದ ಸಿವಿಲ್‌ ಪೊಲೀಸರಿಗೆ ಆದತ್ಯೆ ನೀಡಲಾಗಿದೆ. ಆದರೆ ಕೆಎಸ್‌ಆರ್‌ಪಿ ಕಮಾಡೆಂಟ್ ಆಗಿ ಐಪಿಎಸ್ ಹುದ್ದೆಗೆ ಮುಂಬಡ್ತಿ ಪಡೆದಿದ್ದ ದಿ.ನಾರಾಯಣಗೌಡರದ್ದು ವಿಶೇಷ ಪ್ರಕರಣವಾಗಿ ಇಲಾಖೆಯಲ್ಲಿ ಉಳಿದಿದೆ. ಈಗ ಸೇವಾ ಜ್ಯೇಷ್ಠತೆ ಮೇರೆಗೆ ಸಿವಿಲ್ ಪೊಲೀಸರು ಮಾತ್ರವಲ್ಲ, ಕೆಎಸ್ಆರ್‌ಪಿ ಹಾಗೂ ಸಿಐಡಿ ಡಿಟೆಕ್ಟಿವ್ ವೃಂದದ ಅಧಿಕಾರಿಗಳು ಐಪಿಎಸ್‌ ಹುದ್ದೆ ಬಯಸಿದ್ದಾರೆ.2001ರಲ್ಲಿ ಸಿಐಡಿಗೆ ಡಿಟೆಕ್ಟಿವ್‌ ಸಬ್ ಇನ್ಸ್‌ಪೆಕ್ಟರ್‌ ಆಗಿ ನೇಮಕವಾಗಿದ್ದೆ. ಸೇವಾ ಹಿರಿತನದಲ್ಲಿ 2007ರಲ್ಲಿ ಇನ್ಸ್‌ಪೆಕ್ಟರ್‌ ಹಾಗೂ 2012ರಲ್ಲಿ ಡಿವೈಎಸ್ಪಿ ಹುದ್ದೆಗೆ ಮುಂಬಡ್ತಿ ನೀಡಲಾಯಿತು. ಬಳಿಕ 2020ರಲ್ಲಿ ಪೊಲೀಸ್ ಅಧೀಕ್ಷ (ನಾನ್‌ ಐಪಿಎಸ್‌) ಹುದ್ದೆಗೆ ಪದನ್ನೋತಿ ನೀಡಲಾಗಿತ್ತು. 2013ರಲ್ಲಿ ಡಿವೈಎಸ್ಪಿ ಮುಂಬಡ್ತಿ ಹೊಂದಿದ ಅಧಿಕಾರಿಗಳಿಗೆ ಭಾರತೀಯ ಸೇವಾ ವೃಂದಕ್ಕೆ ಬಡ್ತಿ ನೀಡುವ ಸಲುವಾಗಿ ಪೊಲೀಸ್ ಪ್ರಧಾನ ಕಚೇರಿ ದಾಖಲಾತಿಗಳನ್ನು ಪಡೆಯಿತು. ಆದರೆ 2023ರಲ್ಲಿ ಐಪಿಎಸ್‌ ಹುದ್ದೆಗೆ ಮುಂಬಡ್ತಿ ಶಿಫಾರಸು ಮಾಡಿದ ಅಧಿಕಾರಿಗಳ ಪಟ್ಟಿಯಲ್ಲಿ ನನ್ನ ಹೆಸರು ಬಿಡಲಾಗಿದೆ. ಹೀಗಾಗಿ ನನಗೆ ಐಪಿಎಸ್ ಹುದ್ದೆಗೆ ಅವಕಾಶ ಕಲ್ಪಿಸುವ ಮೂಲಕ ಸಾಮಾಜಿಕ ನ್ಯಾಯ ದೊರಕಿಸಿ ಕೊಡಬೇಕು ಎಂದು ಗೃಹ ಇಲಾಖೆಯ ಪ್ರಧಾನ ಕಾರ್ಯದರ್ಶಿ ಹಾಗೂ ರಾಜ್ಯ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗಳಿಗೆ ಲೋಕಾಯುಕ್ತ ಎಸ್ಪಿ (ವಿಚಾರಣೆಗಳು) ವಿವೇಕಾನಂದ ತುಳಸಿಗೇರಿ ಪತ್ರ ಬರೆದು ಕೋರಿದ್ದಾರೆ. ಈ ಪತ್ರವು ‘ಕನ್ನಡಪ್ರಭ’ಕ್ಕೆ ಲಭ್ಯವಾಗಿದೆ.ಅಪರಾಧ ಪ್ರಕರಣಗಳ ತನಿಖೆ ಸಲುವಾಗಿ ಸಿಐಡಿಯಲ್ಲಿ 2001ರಲ್ಲಿ ಡಿಟೆಕ್ಟಿವ್ (ಪತ್ತೆದಾರಿಕೆ) ಅಧಿಕಾರಿಗಳ ವೃಂದವನ್ನು ಸೃಜಿಸಿದ ಸರ್ಕಾರವು, ಮೊದಲ ಹಂತದಲ್ಲಿ 12 ಮಂದಿಯನ್ನು ಪಿಎಸ್‌ಐ ಹುದ್ದೆಗೆ ಆಯ್ಕೆ ಮಾಡಿತು. ಸೇವಾ ಹಿರಿತನ ಆಧಾರದ ಮೇರೆಗೆ ಈ ಅಧಿಕಾರಿಗಳ ಪೈಕಿ 8 ಮಂದಿಗೆ ಎಸ್ಪಿಗಳಾಗಿ ಮುಂಬಡ್ತಿ ಲಭಿಸಿದೆ. ಇನ್ನುಳಿದವರ ಪೈಕಿ ಇಬ್ಬರು ಅಕಾಲಿಕ ಮರಣ ಹೊಂದಿದ್ದಾರೆ. ಈಗ ಎಸ್ಪಿಗಳಾಗಿರುವ ಅಧಿಕಾರಿಗಳು ಐಪಿಎಸ್‌ ಹುದ್ದೆಗೆ ಹಕ್ಕೊತ್ತಾಯ ಮಂಡಿಸಿದ್ದಾರೆ. ರಾಜ್ಯದಲ್ಲಿ 215 ಐಪಿಎಸ್‌ ಮಂಜೂರಾತಿ ಹುದ್ದೆಗಳಿದ್ದು, ಇದರಲ್ಲಿ ಶೇ.33ರಷ್ಟು ಹುದ್ದೆಗಳು ರಾಜ್ಯ ಪೊಲೀಸರಿಗೆ ಮೀಸಲಾಗಿದೆ. ಅಂದರೆ 215 ಅಧಿಕಾರಿಗಳ ಪೈಕಿ 150 ಯುಪಿಎಸ್‌ಸಿ ಮೂಲಕ ಆಯ್ಕೆಯಾದ ಐಪಿಎಸ್ ಅಧಿಕಾರಿಗಳಾದರೆ, 65 ಹುದ್ದೆಗಳನ್ನು ಮುಂಬಡ್ತಿ ಆಧಾರದ ಮೇರೆಗೆ ಕೆಎಸ್‌ಪಿಎಸ್‌ ಅಧಿಕಾರಿಗಳು ತುಂಬಲಿದ್ದಾರೆ.