ಸಾರಾಂಶ
ಕನ್ನಡಪ್ರಭ ವಾರ್ತೆ ಬೇಲೂರು ಮದ್ಯದಂಗಡಿಗಳಲ್ಲಿ ಗಾಜಿನ ಲೋಟಗಳ ಬಳಕೆ ಹಾಗೂ ಸ್ವಚ್ಛತೆ ಇಲ್ಲದಿದ್ದರೆ ಅಂತಹ ಅಂಗಡಿಗಳ ವಿರುದ್ಧ ಶಿಸ್ತು ಕ್ರಮ ಕೈಗೊಂಡು ಪರವಾನಗಿ ರದ್ದು ಪಡಿಸಲಾಗುವುದು ಎಂದು ಪುರಸಭೆ ಅಧ್ಯಕ್ಷೆ ಎಚ್ಚರಿಕೆ ನೀಡಿದರು. ಮದ್ಯಪ್ರಿಯ ಸಂಘದ ವತಿಯಿಂದ ಹಾಗೂ ಸಾರ್ವಜನಿಕರ ದೂರಿನ ಹಿನ್ನಲೆಯಲ್ಲಿ ಅಧಿಕಾರಿಗಳು ಹಾಗೂ ಸಿಬ್ಬಂದಿಯೊಂದಿಗೆ ಪಟ್ಟಣ ವ್ಯಾಪ್ತಿಯ ಬಾರ್ ಗಳಿಗೆ ಭೇಟಿ ನೀಡಿ ಪರಿಶೀಲನೆ ಮಾಡಿದರು. ಕೆಲವು ಅಂಗಡಿಗಳಲ್ಲಿ ಅಶುಚಿತ್ವ ಇದ್ದುದ್ದನ್ನು ಕಂಡು ಅಂಗಡಿಗಳ ಬಾಗಿಲು ಮುಚ್ಚಿಸಲು ಅಧ್ಯಕ್ಷರು ಅಧಿಕಾರಿಗಳಿಗೆ ಸೂಚನೆ ನೀಡಿದರು. ಇದೇ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈಗಾಗಲೇ ಪುರಸಭೆಯಿಂದ ಪ್ಲಾಸ್ಟಿಕ್ ಸಂಪೂರ್ಣ ನಿಷೇಧ ಮಾಡಿದ್ದರೂ ಕೆಲವು ಮದ್ಯದಂಗಡಿಗಳಲ್ಲಿ ಪ್ಲಾಸ್ಟಿಕ್ ಲೋಟವನ್ನು ಹೆಚ್ಚಾಗಿ ಬಳಸುತ್ತಿರುವುದಲ್ಲದೆ ಎಲ್ಲಿ ನೋಡಿದರೂ ಸಹ ಸ್ವಚ್ಛತೆ ಇಲ್ಲದೆ ಗಬ್ಬುನಾರುತ್ತಿದೆ. ಈಗಾಗಲೇ ಪುರಸಭೆ ವ್ಯಾಪ್ತಿಯಿಂದ ಪರವಾನಗಿ ಪಡೆದಿಲ್ಲದೆ ಹಳೆಯ ಪರವಾನಗಿಯನ್ನು ಮುಂದುವರೆಸಿಕೊಂಡು ಹೋಗುತ್ತಿದ್ದಾರೆ. ಕಡ್ಡಾಯವಾಗಿ ಎಲ್ಲಾ ವ್ಯಾಪಾರಸ್ಥರು ಪುರಸಭೆಯಿಂದ ಪಡೆದಿರುವ ಪರವಾನಗಿಯನ್ನು ಕಾಣುವ ರೀತಿಯಲ್ಲಿ ಹಾಕಬೇಕು.ಅಲ್ಲದೆ ಕುಡಿಯುವ ನೀರು ಸ್ವಚ್ಛತೆಗೆ ಆದ್ಯತೆ ಕೊಡಬೇಕು. ಕೆಲವು ಅಂಗಡಿಗಳಿಗೆ ಮೊದಲು ದಂಡದ ರೂಪದಲ್ಲಿ ೨ ಸಾವಿರದಿಂದ ೫ ಸಾವಿರದವರೆಗೆ ದಂಡ ಹಾಕುತ್ತಿದ್ದು, ಇದೇ ರೀತಿ ಮುಂದುವರೆದರೆ ಅಬಕಾರಿ ಇಲಾಖೆ ಹಾಗೂ ಸಂಬಂಧಪಟ್ಟ ಇಲಾಖೆಗೆ ಮಾಹಿತಿ ನೀಡಿ ಅಂಗಡಿಗಳನ್ನು ಮುಚ್ಚಿಸಲಾಗುವುದು ಎಂದರು. ಪುರಸಭೆ ಮುಖ್ಯಾಧಿಕಾರಿ ಸುಜಯ್ ಮಾತನಾಡಿ, ಯಾವುದೇ ವ್ಯಾಪಾರ ವಹಿವಾಟು ನಡೆಯುವ ಸ್ಥಳಗಳಲ್ಲಿ ಸ್ವಚ್ಛತೆಗೆ ಆದ್ಯತೆ ನೀಡಬೇಕು. ಪ್ಲಾಸ್ಟಿಕ್ ಕಡ್ಡಾಯವಾಗಿ ನಿಷೇಧಮಾಡಿರುವ ಬಗ್ಗೆ ಪ್ರತಿನಿತ್ಯ ಪ್ರಚಾರ ಮಾಡುತ್ತಿದ್ದೇವೆ. ಎಲ್ಲೆಂದರಲ್ಲಿ ಅವರ ವೈನ್ ಸ್ಟೋರ್ ಪಕ್ಕದಲ್ಲೆ ಕಸರಾಶಿ ಹಾಕುವ ಮೂಲಕ ಕಾಯಿಲೆಗಳಿಗೆ ದಾರಿ ಮಾಡಿಕೊಟ್ಟಿದ್ದಾರೆ. ಈಗಾಗಲೇ ಅವರಿಗೆ ಎರಡು ಬಾರಿ ಸೂಚನೆ ನೀಡಿದ್ದರೂ ಅದನ್ನೆ ಮುಂದುವರೆ ಸಿಕೊಂಡು ಹೋಗುತ್ತಿದ್ದಾರೆ. ಅದಕ್ಕಾಗಿ ಕೂಡಲೆ ಅಲ್ಲಿರುವ ಕಸವನ್ನು ಅವರೇ ವಿಲೇವಾರಿಮಾಡಿಸುವರೆಗೂ ಅಂಗಡಿಯನ್ನು ಬಾಗಿಲು ಹಾಕಿಸುತ್ತಿದ್ದೇವೆಂದು ತಿಳಿಸಿದರು. ನಂತರ ಮದ್ಯಪ್ರಿಯ ಸಂಘದ ತಾಲೂಕು ಅಧ್ಯಕ್ಷ ತೊಟೇಶ್ ಮಾತನಾಡಿ, ಈಗಾಗಲೇ ಮದ್ಯದಂಗಡಿಗಳಲ್ಲಿ ಸ್ವಚ್ಛತೆ ಕುಡಿಯುವ ನೀರು ಸೇರಿದಂತೆ ಅವರಿಗೆ ಶೌಚಾಲಯದ ವ್ಯವಸ್ಥೆ ಸರಿಪಡಿಸುವಂತೆ ಅಧಿಕಾರಿಗಳಿಗೆ ನಾವು ಹತ್ತಾರು ಬಾರಿ ಮದ್ಯದಂಗಡಿಯಲ್ಲಿ ಸ್ವಚ್ಚತೆ ಇಲ್ಲ ಎಂದು ಅಬಕಾರಿ ಇಲಾಖೆಗೆ ಮನವಿ ಮಾಡಿದ್ದರೂ ಅವರು ಕಣ್ಣು ಮುಚ್ಚಿಕುಳಿತಿದ್ದರು. ಆದರೆ ನಮ್ಮ ಪುರಸಭೆ ಅಧ್ಯಕ್ಷರ ಕಾರ್ಯವೈಖರಿಗೆ ನಾವು ಕೃತಜ್ಞತೆ ಸಲ್ಲಿಸುತ್ತೇವೆ. ನಾವು ಮನವಿ ಮಾಡಿದ ಒಂದೇ ದಿನದಲ್ಲಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸುವುದರ ಜೊತೆಗೆ ದಂಡ ಹಾಕುತ್ತಿದ್ದಾರೆ . ಸ್ವಚ್ಚತೆ ಇಲ್ಲದ ಬಾರ್ ಗಳಲ್ಲಿ ಹೆಚ್ಚಿನ ದಂಡ ವಿಧಿಸುವಂತೆ ಮನವಿ ಮಾಡಿದರು. ಈ ಸಂದರ್ಭದಲ್ಲಿ ಆರೋಗ್ಯ ಅಧಿಕಾರಿ ಲೋಹಿತ್, ಮದ್ಯಪ್ರಿಯರ ಸಂಘದ ಉಪಾಧ್ಯಕ್ಷ ಧರ್ಮೇಗೌಡ, ಸದಸ್ಯರಾದ ವೆಂಕಟೇಶ್, ಪುರಸಭೆ ಸಿಬ್ಬಂದಿಗಳು ಹಾಜರಿದ್ದರು.