ಡಂಬಳ: ನೂರಾರು ಜನರಿಗೆ ಪೂರೈಸುವ ಕುಡಿಯುವ ನೀರಿನ ಒವರ್ ಹೆಡ್ ಟ್ಯಾಂಕ್ ಸುತ್ತ ಅನೈರ್ಮಲ್ಯ ತಾಂಡವವಾಡುತ್ತಿದ್ದು, ಮುರಡಿ ತಾಂಡಾದ ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
ಒವರ್‌ಹೆಡ್ ಟ್ಯಾಂಕ್ ಸುತ್ತ ಗಿಡಗಂಟಿಗಳು ನೀರು ಬಿಡುವ ಸ್ಥಳದಲ್ಲಿ ದುರ್ವಾಸನೆ ಹಾಗೂ ಜೊಂಡು ಬೆಳೆದಿದೆ. ಮುರಡಿ ಮತ್ತು ಮುರಡಿ ತಾಂಡಾದಲ್ಲಿರುವ ಇದೇ ಒವರ್‌ಹೆಡ್ ಟ್ಯಾಂಕ್‌ನಿಂದ ಗ್ರಾಮದ ಬಡಾವಣೆಗಳಿಗೆ ಕುಡಿಯುವ ನೀರಿನ ಸರಬರಾಜು ಮಾಡಲಾಗುತ್ತಿದೆ.ಇಲ್ಲಿನ ಕಲುಷಿತ ವಾತಾವರಣದಿಂದ ಸೊಳ್ಳೆಗಳು ವಾಸಿಸುವ ಸ್ಥಳವಾಗಿ ಮಾರ್ಪಟ್ಟಿದೆ. ಅಲ್ಲದೆ ಗ್ರಾಮದೊಳಗೆ ಬಿಡುವ ವಾಲ್ವ್‌ಗಳ ಸ್ಥಳದಲ್ಲಿ ಕಲುಷಿತ ನೀರು ನಿಲ್ಲುತ್ತಿದ್ದು, ಸೊಳ್ಳೆಗಳ ತಾಣವಾಗಿದೆ. ಇದರಿಂದ ಗ್ರಾಮಸ್ಥರ ಆರೋಗ್ಯದ ಸಮಸ್ಯೆಗಳಿಗೆ ಎಡೆ ಮಾಡಿಕೊಡುತ್ತಿದೆ.
ಒವರ್ ಹೆಡ್ ಟ್ಯಾಂಕ್‌ನ ಸ್ವಚ್ಛತೆ ಮತ್ತು ನೀರನ್ನು ಸರಬರಾಜು ಮಾಡುವ ಸ್ಥಳವನ್ನು ಸಂಬಂಧಪಟ್ಟ ಪಂಚಾಯಿತಿ ಅಧಿಕಾರಿ ಸಿಬ್ಬಂದಿ ಗಮನಹರಿಸಿ ಸ್ವಚ್ಛಗೊಳಿಸಬೇಕು. ಅಲ್ಲದೇ ನಿವಾಸಿಗಳಿಗೆ ಶುದ್ಧ ನೀರು ಸರಬರಾಜು ಮಾಡುವಂತೆ ಮುರಡಿ ಮತ್ತು ಮುರಡಿ ತಾಂಡಾ ಗ್ರಾಮದ ಜನತೆ ಆಗ್ರಹಿಸಿದ್ದಾರೆ. ಈ ವಿಷಯವಾಗಿ ಪಿಡಿಒ ಅವರಿಗೆ ಕರೆ ಮಾಡಿದರೂ ಸ್ವೀಕರಿಸಲಿಲ್ಲ.ಕ್ರಮಕ್ಕೆ ಆಗ್ರಹ: ಒವರ್‌ಹೆಡ್ ಟ್ಯಾಂಕ್‌ಗಳ ಸುತ್ತ ಗಿಡಗಂಟಿಗಳು ಬೆಳೆದು ನಿಂತಿದೆ. ಗ್ರಾಮದಲ್ಲಿ ನೀರು ಬಿಡುವ ವಾಲ್ವ್ ಚೆಂಬರ್‌ನಲ್ಲಿ ಜೋಂಡು ಕಲುಷಿತ ನೀರಿನಡಿ ಸೊಳ್ಳೆಗಳು ವಾಸಿಸುವ ಸ್ಥಳವಾಗಿದೆ. ಹೀಗಾಗಿ ಕಲುಷಿತ ನೀರನ್ನು ಗ್ರಾಮಕ್ಕೆ ಪೂರೈಕೆ ಮಾಡುತ್ತಾರೆ. ಸಂಬಂಧಪಟ್ಟ ಇಲಾಖೆ ಹಿರಿಯ ಅಧಿಕಾರಿಗಳು ಇತ್ತ ಗಮನ ಹರಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಮುರಡಿ ತಾಂಡಾ ಗ್ರಾಮಸ್ಥರಾದ ರಾಮಪ್ಪ ಲಮಾಣಿ ಆಗ್ರಹಿಸಿದರು.