ಸಾರಾಂಶ
ಬೆಳಗಾವಿ: ನಗರದ ಹೊರವಲಯದಲ್ಲಿ ನಿರ್ಮಾಣ ಮಾಡಲಾಗುತ್ತಿರುವ ಹಲಗಾ ಹಾಗೂ ಮಚ್ಛೆ ಬೈಪಾಸ್ ರಸ್ತೆಯನ್ನು ಶೀಘ್ರವಾಗಿ ಪೂರ್ಣಗೊಳಿಸುವಂತೆ ಒತ್ತಾಯಿಸಿ ಶನಿವಾರ ರಸ್ತೆ ನಿರ್ಮಾಣಕ್ಕೆ ಸ್ವಾಧೀನಪಡಿಸಿಕೊಳ್ಳಲಾಗಿರುವ ಜಮೀನು ಮಾಲೀಕರು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.
ಕನ್ನಡಪ್ರಭ ವಾರ್ತೆ ಬೆಳಗಾವಿ
ನಗರದ ಹೊರವಲಯದಲ್ಲಿ ನಿರ್ಮಾಣ ಮಾಡಲಾಗುತ್ತಿರುವ ಹಲಗಾ ಹಾಗೂ ಮಚ್ಛೆ ಬೈಪಾಸ್ ರಸ್ತೆಯನ್ನು ಶೀಘ್ರವಾಗಿ ಪೂರ್ಣಗೊಳಿಸುವಂತೆ ಒತ್ತಾಯಿಸಿ ಶನಿವಾರ ರಸ್ತೆ ನಿರ್ಮಾಣಕ್ಕೆ ಸ್ವಾಧೀನಪಡಿಸಿಕೊಳ್ಳಲಾಗಿರುವ ಜಮೀನು ಮಾಲೀಕರು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.ಹಲಗಾ ಮತ್ತು ಮಚ್ಚೆ ಗ್ರಾಮಗಳ ನಡುವೆ ಬೈ ಪಾಸ್ ರಸ್ತೆ ನಿರ್ಮಾಣಕ್ಕೆ ಸ್ವಾಧೀನ ಪಡಿಸಿಕೊಳ್ಳಲಾದ ಕೃಷಿ ಭೂಮಿಗಳ ಮಾಲೀಕರು ನಗರದ ಸರ್ವತೋಮುಖ ಅಭಿವೃದ್ಧಿಗೆ ಬದ್ಧರಾಗಿದ್ದೇವೆ. ಆದರೆ ಕೆಲವರ ಹಿತಾಸಕ್ತಿಯಿಂದಾಗಿ ಸ್ಥಗಿತಗೊಂಡಿರುವ ಹಲಗಾ-ಮಚ್ಚೆ ಬೈಪಾಸ್‌ನ ಉದ್ದೇಶಿತ ರಸ್ತೆ ನಿರ್ಮಾಣ ಆದಷ್ಟು ಬೇಗ ಪೂರ್ಣಗೊಳಿಸಬೇಕು. ಈ ಬೈಪಾಸ್ ರಸ್ತೆ ನಿರ್ಮಿಸಿದರೆ ಇತರ ರಾಜ್ಯಗಳಿಂದ ಗೋವಾಗೆ ಹೋಗುವ ವಾಹನಗಳು ಬೈಪಾಸ್ ಮೂಲಕ ಹೋಗಬಹುದಾಗಿದೆ. ಇದರಿಂದ ನಗರದಲ್ಲಿನ ವಾಹನ ಸಂಚಾರ ದಟ್ಟಣೆ ಕಡಿಮೆಯಾಗಲಿದೆ. ಅಪಘಾತಗಳ ಸಂಖ್ಯೆಯೂ ಕಡಿಮೆಯಾಗಲಿದೆ. ನಗರದಲ್ಲಿ ಶಬ್ದ ಹಾಗೂ ವಾಯು ಮಾಲಿನ್ಯ ತಡೆಯಬಹುದಾಗಿದೆ. ಬೈಪಾಸ್ ರಸ್ತೆ ನಿರ್ಮಾಣದಿಂದ ರಿಯಲ್ ಎಸ್ಟೇಟ್, ವ್ಯಾಪಾರ, ಪ್ರವಾಸಿಗರು ಮತ್ತು ಹೂಡಿಕೆ ಆಕರ್ಷಿಸಬಹುದು, ರೈತರಿಗೂ ತಮ್ಮ ಸರಕು ಸಾಗಿಸಲು ಇದು ನೆರವಾಗಲಿದೆ. ಇದು ಸ್ಥಳೀಯ ಆರ್ಥಿಕತೆ ಹೆಚ್ಚಿಸಲಿದೆ ಎಂದರು.
ಧರ್ಮು ಪಾಟೀಲ, ಅಶೋಕ ಪಾಟೀಲ, ಬಿ.ಡಿ.ಪಾಟೀಲ, ಎ.ಬಿ.ಪಾಟೀಲ, ಅಶೋಕ ಬಟ್ಟಲ, ಪಿ.ಎಂ.ಪಾಟೀಲ ಇತರರು ಇದ್ದರು.