ಸಾರಾಂಶ
ಕನ್ನಡಪ್ರಭ ವಾರ್ತೆ ಕಲಬುರಗಿ
ಕಳೆದ 3 ತಿಂಗಳಿಂದ ಹನಿ ನೀರೂ ಇಲ್ಲದಂತೆ ಬತ್ತಿ ಬರಡಾಗಿರುವ ಭೀಮಾ ನದಿ ಒಡಲಿಗೆ ಮಹಾರಾಷ್ಟ್ರದ ಉಜನಿಯಿಂದ ನೀರು ಹರಿಸಬೇಕು. ಇಲ್ಲಾಂದ್ರೆ ಪಕ್ಕದ ಕೃಷ್ಣಾ ನದಿ ಆಲಮಟ್ಟಿ ಅಣೆಕಟ್ಟಿನಿಂದಲಾದರೂ 5 ಟಿಎಂಸಿ ನೀರು ಹರಿಸಬೇಕು ಎಂದು ಆಗ್ರಹಿಸಿ ಜೆಡಿಎಸ್ ಮುಖಂಡ ಶಿವಕುಮಾರ್ ನಾಟೀಕಾರ್ ನೇತೃತ್ವದಲ್ಲಿ ಅಫಜಲ್ಪುರ ಪಟ್ಟಣದ ಡಾ. ಅಂಬೇಡ್ಕರ್ ವೃತ್ತದಲ್ಲಿ ಕಳೆದ ಶುಕ್ರವಾರದಿಂದ ಅಮರಣಾಂತ ಉಪವಾಸ ಸತ್ಯಾಗ್ರಹ ಶುರುವಾಗಿದೆ.ಕಳೆದ 3 ದಿನದಿಂದ ಶುರುವಾಗಿರುವ ಸತ್ಯಾಗ್ರಹಕ್ಕೆ ಜನಬೆಂಬಲ ವ್ಯಕ್ತಾಗುತ್ತಿದೆ. ಮಠಾಧೀಶರು, ಹೋರಾಟಗಾರರು, ಕಬ್ಬು ಬೆಳೆಗಾರರು, ತೊಗರಿ ಬೆಳೆಗಾರರು ಸೇರಿ ಅನೇಕರು ತಂಡೋಪತಂಡವಾಗಿ ಹೋರಾಟದ ಸ್ಥಳಕ್ಕೆ ಆಗಮಿಸಿ ಬೆಂಬಲ ಸೂಚಿಸುತ್ತಿದ್ದಾರೆ.
ಅಲ್ಲಿ ತಮಿಳುನಾಡಿಗೆ ಕಾವೇರಿ ನೀರು ಹರಿಸದಿದ್ದರೆ ಸುಪ್ರೀಂ ಕೋರ್ಟ್ ಮಾತನಾಡುತ್ತದೆ. ಆದರೆ ನಮ್ಮಲ್ಲಿನ ಜನಪ್ರತಿನಿಧಿಗಳ ಇಚ್ಛಾಶಕ್ತಿ ಕೊರತೆಯಿಂದಾಗಿ ಭೀಮಾ ನದಿಗೆ ನೀರು ಹರಿಸದಿದ್ದರೂ ಯಾರೂ ಮಾತಾಡೋದಿಲ್ಲ, ಇದಕ್ಕಿಂತ ಬೇರೊಂದು ವಿಷಾದವಿದೆಯೆ? ಶಿವಕುಮಾರ ನಾಟೀಕಾರ ಅಸಮಧಾನ ಹೊರಹಾಕಿದ್ದಾರೆ.ಹೋರಾಟದ ವೇದಿಕೆಯಲ್ಲಿ ರೈತರು, ಜನರನ್ನು ಉದ್ದೇಶಿಸಿ ಮಾತನಾಡಿ, ಭೀಮಾ ನದಿ ಮೇಲೆ ಅವಲಂಬನೆಯಾದ ರೈತರು ಪ್ರತಿ ವರ್ಷ 45 ಲಕ್ಷ ಟನ್ ಕಬ್ಬು ಬೆಳೆಯುತ್ತಾರೆ. ಕಲಬುರಗಿ ಜಿಲ್ಲೆಯಲ್ಲೇ ಅಫಜಲ್ಪುರ ಒಂದೇ ತಾಲೂಕಿನಲ್ಲಿ ಸುಮಾರು 12 ಲಕ್ಷ ಟನ್ ಕಬ್ಬನ್ನು ರೈತರು ಯಥೇಚ್ಛವಾಗಿ ಬೆಳೆಯುತ್ತಾರೆ. ಹೀಗೆ ಹೊಲದಲ್ಲಿರೋ ಫಸಲು ನೀರಿಲ್ಲದೆ ಒಣಗಿದ್ದು, ಏಪ್ರಿಲ್, ಮೇ ತಿಂಗಳಲ್ಲೇ ಭೀಮಾ ನದಿಗೆ ನೀರು ಹರಿಸದಿದ್ದರೆ ₹400 ಕೋಟಿಗೂ ಅಧಿಕ ಹಾನಿ ಸಂಭವಿಸುತ್ತಿದ್ದರೂ ಕೇಳೋರಿಲ್ಲದಂತಾಗಿದೆ ಎಂದು ದೂರಿದರು.
ಮಹಾರಾಷ್ಟ್ರದಿಂದ ಭೀಮಾನದಿಗೆ ಬರಬೇಕಿರುವ ನಮ್ಮ ಹಕ್ಕಿನ ನೀರನ್ನು ನಮಗೆ ಕೊಡಿಸುವ ಜವಾಬ್ದಾರಿ ಬಚಾವತ್ ಆಯೋಗದ ಮೇಲಿದ್ದು, 1976ರಲ್ಲಿ ಆಯೋಗ ನೀಡಿದ ತೀರ್ಪಿನಂತೆ ಒಟ್ಟು 351 ಟಿಎಂಸಿ ನೀರಿನಲ್ಲಿ ಮಹಾರಾಷ್ಟ್ರ 300.6, ಕರ್ನಾಟಕ 45.3 ಮತ್ತು ಆಂದ್ರಪ್ರದೇಶ 5.1 ಟಿಎಂಸಿ ನೀರಿನ ಪಾಲು ಹೊಂದಿವೆ.ಆದರೆ, ನೀರಿನ ಬಳಕೆ ಪ್ರಮಾಣವನ್ನು ಮಹಾರಾಷ್ಟ್ರಕ್ಕೆ 95 ಟಿಎಂಸಿ ಕರ್ನಾಟಕಕ್ಕೆ 15 ಟಿಎಂಸಿ ಪ್ರಮಾಣದಲ್ಲಿ ಬಳಕೆ ಮಾಡಿಕೊಳ್ಳಲು ಸೂಚಿಸಲಾಗಿತ್ತು. ಅದರಂತೆ ಆರಂಭದ ಕೆಲವು ವರ್ಷ ಮಹಾರಾಷ್ಟ್ರದ ಉಜನಿ ಆಣೆಕಟ್ಟಿನಿಂದ ನೀರನ್ನು ಬಳಕೆ ಮಾಡಿಕೊಳ್ಳಲು ಬಿಡಲಾಗುತ್ತಿತ್ತು. ಅಂದಿನ ಪರಿಸ್ಥಿತಿಯಲ್ಲಿ ಕರ್ನಾಟಕದಲ್ಲಿ ಆ ನೀರನ್ನು ಬಳಕೆ ಮಾಡಿಕೊಳ್ಳಲು ಸೂಕ್ತ ಯೋಜನೆಗಳು ರೂಪುಗೊಳ್ಳದೆ ಇರುವುದರಿಂದ ನಮ್ಮ ಭಾಗದ ರೈತರ ಬದುಕು ದುಸ್ತರಗೊಂಡಿದೆ ಎಂದರು.
1998ರಿಂದ ಈಚೆಗೆ ನಮ್ಮ ಹಕ್ಕಿನ 15 ಟಿಎಂಸಿ ನೀರು ನಮಗೆ ದಕ್ಕುತ್ತಿಲ್ಲ. ಹಾಗಾಗಿ ನಮ್ಮ ಪಾಲಿನ ನೀರು ನಮಗೆ ಕೊಡಿಸುವ ನಿಟ್ಟಿನಲ್ಲಿ ರಾಜ್ಯ ಸರಕಾರ ತನ್ನ ಪ್ರಾಮಾಣಿಕ ಪ್ರಯತ್ನ ಮಾಡಬೇಕು ಎಂದು ಒತ್ತಾಯಿಸಿದರು.ನೀರು ಬಳಕೆಯಲ್ಲಿ ಮಹಾ ಅಕ್ರಮ: ಈ ಮಧ್ಯೆ ಮಹಾರಾಷ್ಟ್ರ ಸರಕಾರ ಕೇಂದ್ರ ಜಲಸಂಪನ್ಮೂಲ ಮಂಡಳಿ ಅನುಮತಿ ಪಡೆಯದೆ ಉಜನಿ ಆಣೆಕಟ್ಟಿನ ಹಿನ್ನೀರಿನಲ್ಲಿ ಅಕ್ರಮವಾಗಿ ಸುಮಾರು 25 ಕಿ.ಮೀ ಉದ್ದದ ಸುರಂಗ ಮಾರ್ಗ ಕೊರೆದು ಸೀನಾ ನದಿಗೆ ಸಂಪರ್ಕ ಕಲ್ಪಿಸಿರುವುದರಿಂದ 13.5 ಟಿಎಂಸಿ ನೀರು ಸೀನಾ ನದಿಗೆ ಸೇರ್ಪಡೆ ಆಗುತ್ತಿದೆ. ಉಜನಿ ಆಣೆಕಟ್ಟು 117.2 ನೀರಿನ ಸಾಮರ್ಥ್ಯ ಹೊಂದಿದ್ದು ಅದರಲ್ಲಿ 60.5ಟಿಎಂಸಿ ನೀರು ಡೆಡ್ ಸ್ಟೋರೇಜ್ ನಲ್ಲಿದ್ದರೆ, 56.7 ಟಿಎಂಸಿ ನೀರು ಲೈವ್ ಸ್ಟೋರೇಜ್‍ನಲ್ಲಿದೆ. ಉಜಿನಿ ಅಣೆಕಟ್ಟನ್ನು ಕೇಂದ್ರ ಜಲ ಸಂಪನ್ಮೂಲ ಮಂಡಳಿ ಅನುಮತಿ ಇಲ್ಲದೆ 3 ಮೀಟರ್ ಎತ್ತರಿಸಿ 7 ಟಿಎಂಸಿ ನೀರನ್ನು ಅಧಿಕವಾಗಿ ಸಂಗ್ರಹಿಸಲು ಆರಂಭಿಸಿ ಈಗಾಗಲೇ 6-7 ವರ್ಷಗಳಾಗಿವೆ. ಇಷ್ಟೆಲ್ಲ ಅನ್ಯಾಯ ಮಹಾರಾಷ್ಟ್ರ ಸರ್ಕಾರ ಮಾಡುತ್ತಿದ್ದರೂ, ನಮ್ಮ ರಾಜ್ಯ ಸರ್ಕಾರ ಮಾತ್ರ ಸೌಜನ್ಯಕ್ಕೂ ನಮ್ಮ ಹಕ್ಕಿನ ನೀರನ್ನು ಬಿಡುಗಡೆಗೊಳಿಸುವಂತೆ ಒತ್ತಾಯಿಸುತ್ತಿಲ್ಲ. ಭೀಮಾ ನದಿ ಹರಿಯುವ ನಮ್ಮ ಭಾಗದ ಎಲ್ಲ ಪ್ರದೇಶಗಳಲ್ಲಿ ನೀರಿನ ಅಭಾವ ಎದುರಾಗಿದೆ ಎಂದರು.
ಕೂಡಲೇ ಉಜನಿ ಅಥವಾ ಆಲಮಟ್ಟಿ ಜಲಾಶಯದಿಂದ 5 ಟಿಎಂಸಿ ನೀರು ಹರಿಸಬೇಕು. ಇಲ್ಲವಾದರೆ ಮುಂಬರುವ ದಿನಗಳಲ್ಲಿ ಪ್ರತಿಭಟನೆ ರೂಪರೇಷೆ ಬದಲಾಯಿಸಿ ದೊಡ್ಡ ಮಟ್ಟದಲ್ಲಿ ಬೃಹತ್ ಹೋರಾಟ ಮಾಡುವುದಾಗಿ ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.ಹೋರಾಟಕ್ಕೆ ವಿಶ್ವಾರಾಧ್ಯ ಮಳೇಂದ್ರ ಶಿವಾಚಾರ್ಯರು, ಚಿನ್ಮಯಗಿರಿಯ ವೀರಮಹಾಂತ ಶ್ರೀ, ಮರುಳಾರಾಧ್ಯ ಶ್ರೀ, ಚಂದ್ರಶೇಖರ ಶಿವಾಚಾರ್ಯರು, ಸಾರಂಗಬಸವ ಶಿವಾಚಾರ್ಯರು, ಶೀ ಪ್ರಭುಕುಮಾರ ಮಹಾ ಸ್ವಾಮೀಜಿ, ಸಿದ್ಧಲಿಂಗ ಶಿವಾಚಾರ್ಯರು, ಡಾ. ಸೋಮಶೇಖರ ಶಿವಾಚಾರ್ಯರು, ಶ್ರೀ ರೇವಣಸಿದ್ಧ ಶಿವಾಚಾರ್ಯರು ಸೇರಿ ಅನೇಕ ಪೂಜ್ಯರು ಬೆಂಬಲ ಸೂಚಿಸಿದ್ದಾರೆ.