ಮಂಡ್ಯದಿಂದ ನೀವೇ ಸ್ಪರ್ಧೆ ಮಾಡಿ: ಕುಮಾರಸ್ವಾಮಿಗೆ ಅಮಿತ್‌ ಶಾ ಸಲಹೆ

| Published : Mar 18 2024, 01:48 AM IST / Updated: Mar 18 2024, 07:48 AM IST

Amith Sahah And HDK
ಮಂಡ್ಯದಿಂದ ನೀವೇ ಸ್ಪರ್ಧೆ ಮಾಡಿ: ಕುಮಾರಸ್ವಾಮಿಗೆ ಅಮಿತ್‌ ಶಾ ಸಲಹೆ
Share this Article
  • FB
  • TW
  • Linkdin
  • Email

ಸಾರಾಂಶ

ನಿಖಿಲ್‌ ಸ್ಪರ್ಧೆ ಬೇಡ, ಚಿಕ್ಕಬಳ್ಳಾಪುರ ಬೇಕಾದರೂ ಪರಿಗಣಿಸಿ ಎಂದು ಗೃಹ ಸಚಿವ ಸಲಹೆ ನೀಡಿದ್ದು, ಚಿಕ್ಕಬಳ್ಳಾಪುರ ಬೇಡ, ಮಂಡ್ಯದಲ್ಲಿ ಸ್ಪರ್ಧಿಸುವ ಬಗ್ಗೆ ದೇವೇಗೌಡರ ಕೇಳಿ ಹೇಳುವೆ ಎಂಬುದಾಗಿ ಎಚ್‌ಡಿಕೆ ತಿಳಿಸಿದ್ದಾರೆ ಎಂದು ತಿಳಿದುಬಂದಿದೆ.

ಕನ್ನಡಪ್ರಭ ವಾರ್ತೆ ಬೆಂಗಳೂರು/ಮಂಡ್ಯ

ಮಂಡ್ಯ ಲೋಕಸಭಾ ಕ್ಷೇತ್ರದಿಂದ ಜೆಡಿಎಸ್ ಅಭ್ಯರ್ಥಿಯಾಗಿ ಖುದ್ದು ಪಕ್ಷದ ರಾಜ್ಯಾಧ್ಯಕ್ಷ ಹಾಗೂ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರೇ ಕಣಕ್ಕಿಳಿಯಲಿ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಸಲಹೆ ನೀಡಿದ್ದಾರೆ ಎನ್ನಲಾಗಿದೆ.

ಆದರೆ, ತಮ್ಮ ಆರೋಗ್ಯ ಸಮಸ್ಯೆ ಹಿನ್ನೆಲೆಯಲ್ಲಿ ಪೂರ್ಣ ಸಹಮತ ವ್ಯಕ್ತಪಡಿಸದ ಕುಮಾರಸ್ವಾಮಿ ಅವರು ಏಕಾಏಕಿ ನಿರಾಕರಿಸುವ ಬದಲು ಆಲೋಚನೆ ಮಾಡುವುದಾಗಿ ಹೇಳಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಶನಿವಾರ ದೆಹಲಿಯಲ್ಲಿ ಅಮಿತ್ ಶಾ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ ಸಂದರ್ಭ ಮಂಡ್ಯ ಕ್ಷೇತ್ರದಿಂದ ಪುತ್ರ ನಿಖಿಲ್ ಕುಮಾರಸ್ವಾಮಿ ಅಥವಾ ಮಾಜಿ ಸಚಿವ ಸಿ.ಎಸ್‌.ಪುಟ್ಟರಾಜು ಅವರನ್ನು ಕಣಕ್ಕಿಳಿಸಲು ಕುಮಾರಸ್ವಾಮಿ ಆಸಕ್ತಿ ತೋರಿದ್ದಾರೆ. 

ಇದಕ್ಕೆ ಪ್ರತಿಕ್ರಿಯಿಸಿದ ಅಮಿತ್ ಶಾ ಅವರು ನಿಖಿಲ್ ಕುಮಾರಸ್ವಾಮಿ ಅವರನ್ನು ಮಂಡ್ಯ ಕ್ಷೇತ್ರದಲ್ಲಿ ಕಣಕ್ಕಿಳಿಸುವುದು ಬೇಡ. ಅದಕ್ಕೆ ಬೇರೆ ಬೇರೆ ಕಾರಣಗಳಿವೆ ಎಂದು ಹೇಳಿದರು ಎಂದು ತಿಳಿದುಬಂದಿದೆ.

ಮಂಡ್ಯ ಕ್ಷೇತ್ರದಿಂದ ನೀವೇ ಅಭ್ಯರ್ಥಿಯಾಗಬೇಕು ಎಂಬುದು ಬಿಜೆಪಿಯ ನಿಲುವು. ನೀವೇ ಕಣಕ್ಕಿಳಿದರೆ ಮೈತ್ರಿ ಪಕ್ಷದ ಗೆಲುವಿಗೆ ಅನುಕೂಲಕರ ವಾತಾವರಣ ನಿರ್ಮಾಣವಾಗಲಿದೆ. ಅಂತಿಮ ನಿರ್ಧಾರ ನಿಮಗೇ ಬಿಟ್ಟಿದ್ದು ಎಂಬ ಅಭಿಪ್ರಾಯ ಹೇಳಿದ್ದಾರೆ ಎಂದು ತಿಳಿದು ಬಂದಿದೆ.

ಆದರೆ, ಕುಮಾರಸ್ವಾಮಿ ಅವರು ತಮ್ಮ ಆರೋಗ್ಯದ ಸಮಸ್ಯೆಯನ್ನು ಅಮಿತ್ ಶಾ ಅವರ ಮುಂದಿಟ್ಟಿದ್ದಾರೆ. ಹೃದಯ ಸಂಬಂಧಿ ಶಸ್ತ್ರಚಿಕಿತ್ಸೆಗಾಗಿ ಮಂಗಳವಾರ ಚೆನ್ನೈಗೆ ತೆರಳುತ್ತಿದ್ದೇನೆ. 

ಗುರುವಾರ ಶಸ್ತ್ರಚಿಕಿತ್ಸೆ ಇದೆ. ಮೂರು ದಿನಗಳ ಬಳಿಕ ಬೆಂಗಳೂರಿಗೆ ವಾಪಸಾಗುತ್ತೇನೆ. ನಾನು ಮಂಡ್ಯ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿದಲ್ಲಿ ಒತ್ತಡ ಹೆಚ್ಚಾಗುತ್ತದೆ. 

ಆದರೂ ಪಕ್ಷದ ವರಿಷ್ಠರೂ ಆಗಿರುವ ತಂದೆ ದೇವೇಗೌಡರೊಂದಿಗೆ ಒಂದು ಬಾರಿ ಸಮಾಲೋಚನೆ ನಡೆಸಿ ನಿರ್ಧಾರ ತಿಳಿಸುವಂತೆ ಎಂದು ಕುಮಾರಸ್ವಾಮಿ ಹೇಳಿದರು ಎನ್ನಲಾಗಿದೆ.

ಆಗ ಅಮಿತ್ ಶಾ ಅವರು ಮಂಡ್ಯ ಕ್ಷೇತ್ರ ಬೇಡ ಎಂದಾದರೆ ಚಿಕ್ಕಬಳ್ಳಾಪುರ ಕ್ಷೇತ್ರದಿಂದ ನೀವು ಸ್ಪರ್ಧಿಸಿ ಎಂಬ ಸಲಹೆಯನ್ನೂ ನೀಡಿದ್ದಾರೆ. ಇದಕ್ಕೆ ಉತ್ತರಿಸಿದ ಕುಮಾರಸ್ವಾಮಿ, ಚಿಕ್ಕಬಳ್ಳಾಪುರ ಕ್ಷೇತ್ರದಲ್ಲಿ ನಮ್ಮ ಬಲವೇನೋ ಇದೆ. ಆದರೆ, ಅಲ್ಲಿ ಪಕ್ಷದ ಒಬ್ಬ ಶಾಸಕರೂ ಇಲ್ಲ. 

ಮೇಲಾಗಿ ಬಿಜೆಪಿಯಿಂದ ಮಾಜಿ ಸಚಿವ ಡಾ.ಕೆ.ಸುಧಾಕರ್‌ ಮತ್ತು ಶಾಸಕ ಎಸ್‌.ಆರ್‌.ವಿಶ್ವನಾಥ್ ಪುತ್ರ ಅಲೋಕ್ ಅವರ ನಡುವೆ ಸ್ಪರ್ಧೆಗೆ ತೀವ್ರ ಪೈಪೋಟಿ ಏರ್ಪಟ್ಟಿದೆ. ಹೀಗಿರುವಾಗ ನಾನು ಅಲ್ಲಿಂದ ಸ್ಪರ್ಧೆ ಮಾಡುವುದು ಸರಿಯಲ್ಲ ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿದರು ಎಂದು ಮೂಲಗಳು ತಿಳಿಸಿವೆ.

ಪ್ರಜ್ವಲ್‌ ಸ್ಪರ್ಧೆ ಬಗ್ಗೆ ಮರು ಪರಿಶೀಲನೆಗೆ ಶಾ ಸಲಹೆ?
ಹಾಸನದಲ್ಲಿ ಪ್ರಜ್ವಲ್ ರೇವಣ್ಣ ಬದಲು ಬೇರೊಬ್ಬರನ್ನು ಅಭ್ಯರ್ಥಿಯನ್ನಾಗಿಸುವ ಬಗ್ಗೆ ಪರಿಶೀಲಿಸಿ ಎಂಬ ಸಲಹೆಯನ್ನು ಅಮಿತ್ ಶಾ ನೀಡಿದ್ದಾರೆ ಎನ್ನಲಾಗುತ್ತಿದೆ. 

ಪ್ರಜ್ವಲ್ ಸ್ಪರ್ಧೆಗೆ ಕೆಲವು ಕಾನೂನಾತ್ಮಕ ಸಮಸ್ಯೆಗಳು ಎದುರಾಗಬಹುದು. ಹೀಗಾಗಿ, ಅಭ್ಯರ್ಥಿ ಬದಲಾವಣೆ ಮಾಡಿದರೆ ಉತ್ತಮ ಎಂಬ ಸಲಹೆಯನ್ನು ಅಮಿತ್ ಶಾ ಕೊಟ್ಟಿದ್ದಾರೆ ಎನ್ನಲಾಗಿದೆ.

ಈ ಬಗ್ಗೆ ಕೂಡ ದೇವೇಗೌಡರೊಂದಿಗೆ ಚರ್ಚಿಸಿ ಅಂತಿಮ ನಿರ್ಧಾರ ಕೈಗೊಳ್ಳಲಾಗುವುದು ಎಂದು ಕುಮಾರಸ್ವಾಮಿ ಹೇಳಿದ್ದಾರೆ ಎನ್ನಲಾಗಿದೆ.