ಶಿರಹಟ್ಟಿ ಪಟ್ಟಣವು ಭಾವೈಕ್ಯತೆಗೆ ಹೆಸರಾಗಿದ್ದು, ಪ್ರಸಿದ್ಧ ಧಾರ್ಮಿಕ ಕ್ಷೇತ್ರವನ್ನು ಹೊಂದಿದೆ. ನಿತ್ಯ ವಿವಿಧೆಡೆಯಿಂದ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ದೇವರ ದರ್ಶನಕ್ಕೆ ಆಗಮಿಸುತ್ತಿದ್ದು, ಬಂದ ಭಕ್ತರಿಗೆ ಹಾಗೂ ಸಾರ್ವಜನಿಕರಿಗೆ ಶೌಚಾಲಯ ಹಾಗೂ ಸ್ನಾನಗೃಹವಿಲ್ಲ.
ಶಿರಹಟ್ಟಿ: ಶಿರಹಟ್ಟಿ ಪಟ್ಟಣದ ಫಕೀರೇಶ್ವರ ಮಠಕ್ಕೆ ಹಾಗೂ ಹಜರತ್ ಮೆಹಬೂಬ ಸುಬ್ಹಾನಿ ದರ್ಗಾಕ್ಕೆ ದೇವರ ದರ್ಶನ ಪಡೆಯಲು ನಿತ್ಯವೂ ಸಾವಿರಾರು ಸಂಖ್ಯೆಯಲ್ಲಿ ಜನರ ಆಗಮಿಸುತ್ತಿದ್ದು, ಸಾರ್ವಜನಿಕರ ಉಪಯೋಗಕ್ಕಾಗಿ ಉಚಿತ ಸಾರ್ವಜನಿಕ ಶೌಚಾಲಯ ಹಾಗೂ ಸ್ನಾನಗೃಹ ನಿರ್ಮಾಣ ಮಾಡಬೇಕು ಎಂದು ಆಗ್ರಹಿಸಿ ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಸೇನೆಯ ತಾಲೂಕು ಘಟಕದ ವತಿಯಿಂದ ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಲಾಯಿತು.ಸೋಮವಾರ ಪಟ್ಟಣದ ಬಸವೇಶ್ವರ ವೃತ್ತದ ಬಳಿ ಕೆಲ ಹೊತ್ತು ರಸ್ತೆ ತಡೆ ನಡೆಸಿ ಬೃಹತ್ ಪ್ರತಿಭಟನೆ ನಡೆಸಿದರು. ಈ ವೇಳೆ ಸಂಘಟನೆಯ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಸವರಾಜ ವಡವಿ ಮಾತನಾಡಿ, ಶಿರಹಟ್ಟಿ ಪಟ್ಟಣವು ಭಾವೈಕ್ಯತೆಗೆ ಹೆಸರಾಗಿದ್ದು, ಪ್ರಸಿದ್ಧ ಧಾರ್ಮಿಕ ಕ್ಷೇತ್ರವನ್ನು ಹೊಂದಿದೆ. ನಿತ್ಯ ವಿವಿಧೆಡೆಯಿಂದ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ದೇವರ ದರ್ಶನಕ್ಕೆ ಆಗಮಿಸುತ್ತಿದ್ದು, ಬಂದ ಭಕ್ತರಿಗೆ ಹಾಗೂ ಸಾರ್ವಜನಿಕರಿಗೆ ಶೌಚಾಲಯ ಹಾಗೂ ಸ್ನಾನಗೃಹವಿಲ್ಲ ಎಂದು ದೂರಿದರು. ಸಂಘಟನೆಯ ತಾಲೂಕು ಕಾರ್ಯಾಧ್ಯಕ್ಷ ದೇವೇಂದ್ರ ಶಿಂದೆ ಮಾತನಾಡಿ, ಧಾರ್ಮಿಕ ಸ್ಥಳಕ್ಕೆ ದೇವರ ದರ್ಶನ ಪಡೆಯಲು ಬರುವ ಭಕ್ತರಿಗೆ ಸಾರ್ವಜನಿಕ ಶೌಚಾಲಯ ಮತ್ತು ಸ್ನಾನಗೃಹ ಇಲ್ಲದಿರುವುದು ನಾಚಿಕೆಯ ಸಂಗತಿ. ಹತ್ತಾರು ಬಾರಿ ಮೌಖಿಕವಾಗಿ ಅಧಿಕಾರಿಗಳ ಗಮನಕ್ಕೆ ತರಲಾಗಿದೆ. ಅಧಿಕಾರಿಗಳು ಮಾತ್ರ ಸ್ಪಂದಿಸುತ್ತಿಲ್ಲ. ಇದೇ ಧೋರಣೆ ಮುಂದುವರೆದರೆ ಸಾರ್ವಜನಿಕರ ಪರವಾಗಿ ಬೀದಿಗಿಳಿದು ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು.
ಸಂಘಟನೆ ವತಿಯಿಂದ ಕೆಲಹೊತ್ತು ರಸ್ತೆ ತಡೆ ನಡೆಸಿ ಪ್ರತಿಭಟಿಸಿದರು. ಸ್ಥಳಕ್ಕೆ ತಹಸೀಲ್ದಾರ್ ಆಗಮಿಸಿ ಮನವಿ ಸ್ವೀಕರಿಸುವ ವರೆಗೂ ಪ್ರತಿಭಟನಯಿಂದ ಹಿಂದೆ ಸರಿಯುವುದಿಲ್ಲ ಎಂದು ಪಟ್ಟು ಹಿಡಿದರು. ನಂತರ ಗ್ರೇಡ್- ೨ ತಹಸೀಲ್ದಾರ್ ವಿ.ಎ. ಮುಳಗುಂದಮಠ ಆಗಮಿಸಿ ಮನವಿ ಸ್ವೀಕರಿಸಿದರು. ಪ್ರತಿಭಟನೆ ವೇಳೆ ಪೊಲೀಸ್ ಬಂದೋಬಸ್ತ ಕೈಗೊಳ್ಳಲಾಗಿತ್ತು.ಪ್ರತಿಭಟನೆಯಲ್ಲಿ ಸಂಘಟನೆಯ ಇಮ್ರಾನ್ ಬಾವಿಕಟ್ಟಿ, ಮಲಿಕ್ ನಗಾರಿ, ತೋಸಿಫ ವಡ್ಡಟ್ಟಿ, ಅನ್ವರ್ ಬರದ್ವಾಡ, ಮೋದಿನ್ ಪರಿಟ್, ಆಸಿಫ್ ಪಠಾನ್, ಮಂಜು ಭಜಂತ್ರಿ, ದೀಪಾ ಹರಿಪೂರ ಸೇರಿದಂತೆ ಅನೇಕರು ಇದ್ದರು.