ಲಕ್ಷ್ಮೇಶ್ವರ: ಪಟ್ಟಣದ ಬಸ್ ಸ್ಟ್ಯಾಂಡ್ ಹತ್ತಿರ ಹಾಗೂ ಇನ್ನಿತರ ಸಾರ್ವಜನಿಕರ ಸ್ಥಳಗಳಲ್ಲಿ ಮಹಿಳಾ ಶೌಚಾಲಯ ಇಲ್ಲದೆ ಇರುವುದರಿಂದ ಪರದಾಡುವಂತಾಗಿದ್ದು, ಪಟ್ಟಣದಲ್ಲಿ ಮಹಿಳೆಯರಿಗಾಗಿ ಶೌಚಾಲಯ ನಿರ್ಮಿಸುವಂತೆ ಆಟೋ ಚಾಲಕ ಹಾಗೂ ಮಾಲೀಕರ ಸಂಘದಿಂದ ಪುರಸಭೆ ಮುಖ್ಯಾಧಿಕಾರಿ ಪರಶುರಾಮ ಗುಡದಾರಿ ಅವರಿಗೆ ಸೋಮವಾರ ಮನವಿ ಸಲ್ಲಿಸಲಾಯಿತು.

ಈ ವೇಳೆ ಮಾತನಾಡಿದ ಸಂಘದ ಮುಖಂಡರು, ಪಟ್ಟಣಕ್ಕೆ ದಿನನಿತ್ಯ ಬಂದು ಹೋಗುವ ಸಾವಿರಾರು ಮಹಿಳೆಯರಿಗೆ ಸೂಕ್ತ ಶೌಚಾಲಯ ಇಲ್ಲದೆ ಇರುವುದರಿಂದ ಜನರು ಇಲ್ಲಿನ ಆಡಳಿತ ಯಂತ್ರವನ್ನು ಶಪಿಸುವಂತಾಗಿದ್ದು, ಹೆಣ್ಣುಮಕ್ಕಳಿಗೆ ಶೌಚಾಲಯವು ಇಲ್ಲದೆ ಇರುವುದರಿಂದ ಅವರು ಎಲ್ಲೆಂದರಲ್ಲಿ ಮರೆಯನ್ನು ಹುಡುಕಿಕೊಂಡು ಹೋಗುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಆದ್ದರಿಂದ ಮಹಿಳೆಯರ ಹಿತರಕ್ಷಣೆಗಾಗಿ ಪಟ್ಟಣದ ಶಿಗ್ಲಿ ನಾಕಾ ಬಳಿ ಇರುವ ಇಂದಿರಾ ಕ್ಯಾಂಟೀನ್ ಹತ್ತಿರವಿರುವ ಖುಲ್ಲಾ ಜಾಗದಲ್ಲಿ ಮಹಿಳೆಯರಿಗಾಗಿ ಶೌಚಾಲಯ ನಿರ್ಮಿಸಿದರೆ ಹೆಚ್ಚು ಅನೂಕೂಲವಾಗುತ್ತದೆ ಎಂದರು.

ಮನವಿ ಸ್ವೀಕರಿಸಿದ ಮುಖ್ಯಾಧಿಕಾರಿ ಪರಶುರಾಮ ಗುಡದಾರಿ, ಈ ಕುರಿತಂತೆ ಪುರಸಭೆಯಿಂದ ಸೂಕ್ತ ಸ್ಥಳಗಳಲ್ಲಿ ಮಹಿಳೆಯರಿಗೆ ಮತ್ತು ಪುರುಷರಿಗೆ ಪ್ರತ್ಯೇಕ ಶೌಚಾಲಯ ನಿರ್ಮಿಸಲು ಹಿರಿಯ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.

ಈ ವೇಳೆ ಅಟೋ ಸಂಘದ ಅಧ್ಯಕ್ಷ ಶಿರಾಜ್ ಡಾಲಾಯತ್, ಸೋಮು ಉಪ್ಪಾರ, ಹನುಮಂತಪ್ಪ ಜಗದಮನಿ, ಮಂಜುನಾಥ ಬಸಾಪೂರ, ಮಾಬುಸಾಬ ಅಂಜಾನವರ, ರಾಜೇಸಾಬ ಮುಲ್ಲಾನವರ, ಪ್ರಶಾಂತ ಹುರಕನವರ, ಬಸವರಾಜ ನಡವಲಕೇರಿ, ಚಂದ್ರಣ್ಣ ಗುಡಿಸಲಮನಿ, ಮಾಂತೇಶ ಹಾದಿಮನಿ, ಕಿರಣ ಗುಡಿಸಲಮನಿ, ಈರಣ್ಣ ಮೆಣಸಿನಕಾಯಿ, ಜಮಾಲ ನಧಾಪ್, ನಿಸಾರ ಚಂಗಾಪುರಿ, ಮಲ್ಲೇಶ ಅಂಕಲಿ, ನಿಸಾರ್ ಚನ್ನಪಟ್ಟಣ, ಮುರ್ತೂಜಾ ಧಾರವಾಡ, ದಾದಾಪೀರ ಕಣವಿ, ದಾವಲ ಹತ್ತಿಮತ್ತೂರ, ಜಿಲಾನಿ, ಇಬ್ರಾಹಿಂ, ಸಾಹೀದ್ ಉಳ್ಳಟ್ಟಿ, ನಿಂಗಪ್ಪ ಮುಳಗುಂದ, ದಾದಾಪೀರ ಸೂರಣಗಿ, ಸುಲೇಮಾನ್ ಆಡೂರ, ಬಿಜಾಪೂರ, ಶಂಕರ ಭಜಂತ್ರಿ, ಉಮೇಶ ಗೊಜಗೊಜಿ, ಅಶೋಕ ಗೊಜಗೊಜಿ, ರವಿ ಬನ್ನಿಕೊಪ್ಪ ಸೇರಿದಂತೆ ಅನೇಕರಿದ್ದರು.