ಕೃಷಿ ಪಂಪ್‌ಸೆಟ್‌ಗಳಿಗೆ ನಿರಂತರ 7 ಗಂಟೆ ಗುಣಮಟ್ಟದ ವಿದ್ಯುತ್ ಪೂರೈಸಬೇಕು ಹಾಗೂ ವಿವಿಧ ಬೇಡಿಕೆ ಈಡೇರಿಸಬೇಕು ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ತಾಲೂಕು ಘಟಕದಿಂದ ರಾಣೆಬೆನ್ನೂರು ಕಾರ್ಯನಿರ್ವಾಹಕ ಎಂಜಿನಿಯರ್ ಪ್ರಭಾಕರ ಎಂ.ಎಚ್. ಅವರಿಗೆ ಮನವಿ ಸಲ್ಲಿಸಿದರು.
ರಟ್ಟೀಹಳ್ಳಿ: ಕೃಷಿ ಪಂಪ್‌ಸೆಟ್‌ಗಳಿಗೆ ನಿರಂತರ 7 ಗಂಟೆ ಗುಣಮಟ್ಟದ ವಿದ್ಯುತ್ ಪೂರೈಸಬೇಕು ಹಾಗೂ ವಿವಿಧ ಬೇಡಿಕೆ ಈಡೇರಿಸಬೇಕು ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ತಾಲೂಕು ಘಟಕದಿಂದ ರಾಣೆಬೆನ್ನೂರು ಕಾರ್ಯನಿರ್ವಾಹಕ ಎಂಜಿನಿಯರ್ ಪ್ರಭಾಕರ ಎಂ.ಎಚ್. ಅವರಿಗೆ ಮನವಿ ಸಲ್ಲಿಸಿದರು.
ಈ ವೇಳೆ ಮಾತನಾಡಿದ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಜಿಲ್ಲಾಧ್ಯಕ್ಷ ರಾಮಣ್ಣ ಕೆಂಚಳ್ಳೇರ, ಹೆಸ್ಕಾಂನಿಂದ ವಿದ್ಯುತ್ ಪೂರೈಕೆಯ ಕಣ್ಣುಮುಚ್ಚಾಲೆಯಿಂದ ರೈತರು ಹೈರಾಣಾಗಿದ್ದಾರೆ. 7 ತಾಸು ತ್ರಿಫೇಸ್ ವಿದ್ಯುತ್ ನಿರಂತರ ಪೂರೈಕೆ ಮಾಡಬೇಕು, ರಾಜ್ಯದಲ್ಲಿ ಮುಂಗಾರು ಕೈಕೊಟ್ಟಿದ್ದರಿಂದ ರೈತರ ಕಣ್ಣೆದುರೆ ಬೆಳೆಗಳು ಒಣಗುತ್ತಿದ್ದು, ಅಳಿದುಳಿದ ಬೆಳೆಗಳನ್ನು ಉಳಿಸಿಕೊಳ್ಳಬೇಕಾದ ಅನಿವಾರ್ಯತೆ ಇದೆ. ಕಾರಣ ತಕ್ಷಣ ತಾಲೂಕಿನಾದ್ಯಂತ ಇರುವ ಲೈನ್‌ಗಳನ್ನೂ ದುರಸ್ತಿ ಮಾಡಬೇಕು. ಸದ್ಯದ ಪರಿಸ್ಥಿತಿಯಲ್ಲಿ ರಾತ್ರಿ ಸಮಯದಲ್ಲಿ ಕಾಡುಪ್ರಾಣಿಗಳ ಹಾವಳಿ ಹೆಚ್ಚಾಗಿದ್ದರಿಂದ ರೈತರು ಹೊಲಗಳಿಗೆ ತೆರಳಲಾಗದೆ ಕೈಕಟ್ಟಿ ಕುಳಿತುಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗಿದೆ. ರಾತ್ರಿ ಪಾಳಿಯ ವಿದ್ಯುತ್ ನೀತಿಯನ್ನು ಸಂಪೂರ್ಣವಾಗಿ ಕೈಬಿಟ್ಟು ಹಗಲು ನಿರಂತರವಾಗಿ 7 ತಾಸು ವಿದ್ಯುತ್ ಪೂರೈಕೆ ಮಾಡಬೇಕು ಎಂದು ಆಗ್ರಹಿಸಿದರು.ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ತಾಲೂಕಾಧ್ಯಕ್ಷ ಶಂಕ್ರಗೌಡ ಶಿರಗಂಬಿ ಮಾತನಾಡಿ, ವಿದ್ಯುತ್ ಖಾಸಗೀಕರಣ ನೀತಿಯಿಂದಾಗಿ ರೈತರ ಕೃಷಿಯಿಂದ ವಿಮುಖವಾಗಿ ರಾಜ್ಯದಲ್ಲಿ ಅರಾಜಕತೆ ಸೃಷ್ಟಿ ಮಾಡುವ ಸರ್ಕಾರದ ನೀತಿ ತಕ್ಷಣ ಕೈಬಿಡಬೇಕು ಎಂದು ಆಗ್ರಹಿಸಿದರು.
ನಗರ ಹಾಗೂ ಕೈಗಾರಿಕೆ ಪ್ರದೇಶಗಳಿಗೆ ನಿರಂತರ ವಿದ್ಯುತ್ ಪೂರೈಕೆ ಮಾಡುವ ವಿದ್ಯುತ್ ಕಂಪನಿಗೆ ನಮ್ಮ ಧಿಕ್ಕಾರ, ದೇಶಕ್ಕೆ ಅನ್ನ ನೀಡುವ ರೈತರನ್ನು ಕಡೆಗಣಿಸಿ ಕೃಷಿ ಪಂಪಸೆಟ್‌ಗಳಿಗೆ ತಾರತಮ್ಯ ನೀತಿ ಅನುಸರಿಸುವ ಕಂಪನಿ ನೀತಿಯಿಂದ ರೈತ ಕಂಗಾಲಾಗಿದ್ದಾನೆ. ಆದ್ದರಿಂದ ಆದ್ಯತೆ ಮೇರೆಗೆ ಕೃಷಿ ಚಟುವಟಿಕೆಗೆ ವಿದ್ಯುತ್ ಒದಗಿಸಬೇಕು ಹಾಗೂ ಹಕ್ಕೊತ್ತಾಯ ಪತ್ರದಲ್ಲಿನ ವಿವಿಧ ಬೇಡಿಕೆಗಳನ್ನು ತಕ್ಷಣ ಜಾರಿ ಮಾಡಬೇಕು. ಇಲ್ಲವಾದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಸಾಮೂಹಿಕ ನಾಯಕತ್ವದಲ್ಲಿ ವಿವಿಧ ಹಂತಗಳಲ್ಲಿ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಸಿದರು.ರೈತ ಸಂಘದ ಕಾರ್ಯದರ್ಶಿ ಶಂಭು ಮುತ್ತಗಿ, ಪ್ರಶಾಂತ ದ್ಯಾವಕ್ಕಳವರ, ಎ.ಆರ್. ಮಣಕೂರ, ರಟ್ಟೀಹಳ್ಳಿ ಹೆಸ್ಕಾಂ ಅಧಿಕಾರಿ ನಾಗರಾಜ ಸೋಮಕ್ಕಳವರ ಹಾಗೂ ವಿವಿಧ ಗ್ರಾಮಗಳ ರೈತ ಮುಖಂಡರು ಇದ್ದರು.