ಪಾಣೆಮಂಗಳೂರು ಹಳೆ ಸೇತುವೆ ಅಭಿವೃದ್ಧಿ, ಸ್ವಚ್ಛತೆಗೆ ಆಗ್ರಹ

| Published : Sep 18 2025, 01:11 AM IST

ಸಾರಾಂಶ

ಸೋಮವಾರ ನಡೆದ ಬಂಟ್ವಾಳ ಪುರಸಭೆಯ ಸಾಮಾನ್ಯ ಸಭೆಯಲ್ಲಿ ಪಾಣೆಮಂಗಳೂರು ಹಳೆ ಸೇತುವೆಯನ್ನು ಪುರಸಭೆ ವತಿಯಿಂದ ಅಭಿವೃದ್ಧಿಪಡಿಸುವಂತೆ ಪುರಸಭೆ ಸದಸ್ಯರು ಒತ್ತಾಯಿಸಿದರು.

ಬಂಟ್ವಾಳ: ಪಾಣೆಮಂಗಳೂರು ಹಳೆಯ ಸೇತುವೆಯ ಅಭಿವೃದ್ಧಿ ಪಡಿಸುವ ಕೆಲಸ ಪುರಸಭೆಯಿಂದ ಆಗಬೇಕು. ಇತ್ತೀಚಿಗೆ ಸಾಮರ್ಥ್ಯ ಪರೀಕ್ಷೆ ನಡೆಸಿದ ಬಳಿಕ ಅದರ ಯಾವುದೇ ರೀತಿಯ ಕ್ರಮಕೈಗೊಂಡಿಲ್ಲ. ಕನಿಷ್ಠ ಪಕ್ಷ ಸೇತುವೆ ಸುತ್ತ ಸ್ವಚ್ಛಗೊಳಿಸುವ ಕೆಲಸ ಕೂಡ ಮಾಡಿಲ್ಲ ಎಂದು ಪುರಸಭೆ ಸದಸ್ಯ ಸಿದ್ದೀಕ್ ಗುಡ್ಡೆಯಂಗಡಿ ಆಗ್ರಹಿಸಿದ್ದಾರೆ.

ಸೋಮವಾರ ನಡೆದ ಬಂಟ್ವಾಳ ಪುರಸಭೆಯ ಸಾಮಾನ್ಯ ಸಭೆಯಲ್ಲಿ ಅವರು ಮಾತನಾಡಿದರು. ಪುರಸಭಾ ಅಧ್ಯಕ್ಷ ವಾಸು ಪೂಜಾರಿ ಅಧ್ಯಕ್ಷತೆ ವಹಿಸಿದ್ದರು.ಸಾಮಾನ್ಯ ಸಭೆಯಲ್ಲಿ ಯಾವುದೇ ಪ್ರಕರಣಗಳಿಗೆ ಸಂಬಂಧಿಸಿದಂತೆ ಕೇಳಿದ ಪ್ರಶ್ನೆಗೆ ಒಂದೇ ಒಂದು ಕಾನೂನು ಪ್ರಕಾರ ದಾಖಲೆಗಳು ಸಿಗುತ್ತಿಲ್ಲ. ಪುರಸಭೆಯ ಸದಸ್ಯರುಗಳಿಗೆ ಮರ್ಯಾದೆ ಇಲ್ಲವೇ? ನಾವೇನು ಕೆಲಸವಿಲ್ಲದೆ ಬಂದು ಇಲ್ಲಿ ಕುಳಿತುಕೊಂಡಿದ್ದೇವಾ? ಎಂದು ಅಧಿಕಾರಿಗಳಿಗೆ ಹಿರಿಯ ಸದಸ್ಯ ಎ.ಗೋವಿಂದ ಪ್ರಭು ಪ್ರಶ್ನಿಸಿದರು.

ಪುರಸಭೆ ಒಂದೇ ಕಾನೂನು ಮಾತ್ರ ಎರಡು ಇದು ಯಾವ ನ್ಯಾಯ ಇಲ್ಲಿ ಬೇಕಾದಂತೆ ಕಾನೂನುಗಳು ಎಂದು ಹಿರಿಯ ಸದಸ್ಯ ಎ.ಗೋವಿಂದ ಪ್ರಭು ಆರೋಪ ವ್ಯಕ್ತಪಡಿಸಿದರು.

ಪಾಣೆಮಂಗಳೂರಿನ ಬ್ರಿಟಿಷ್ ಕಾಲದ ಉಕ್ಕಿನ ಸೇತುವೆಯ ಅಳಿವು ಉಳಿವಿನ ಪ್ರಶ್ನೆಯಾಗಿದ್ದು, ಇದರ ದುರಸ್ತಿಯ ಬಗ್ಗೆ ಪುರಸಭೆ ಹೆಚ್ಚಿನ ಆಸಕ್ತಿ ವಹಿಸಬೇಕು ಎಂದು ಸದಸ್ಯರು ಹೇಳಿದರು.

ಕುಡಿಯುವ ನೀರು ಸರಬರಾಜು ಮಾಡುವ ಉದ್ದೇಶದಿಂದ ಅಮೃತಯೋಜನೆಯಡಿ ಪೈಪ್ ಲೈನ್ ಹಾಕಲಾಗಿದೆ, ಆದರೆ ನೀರು ಬರುತ್ತಿಲ್ಲ. ಇದೀಗ ಮನೆಯ ಮಾಲೀಕರ ಆಧಾರ್ ಕಾರ್ಡ್ ಪಡೆದುಕೊಂಡು ಸಾವಿರಾರು ರು. ಬಿಲ್ ನೀಡಿ ಹೋಗುತ್ತಾರೆ. ಬಿಲ್ ಕಟ್ಟಿದವರಿಗೆ ಕುಡಿಯುವ ನೀರು ಇಲ್ಲ, ಬಿಲ್ ಕಟ್ಟದವರಿಗೆ ನೀರು ಹೋಗುತ್ತದೆ ಎಂದು ಆರೋಪ ಮಾಡಿದರು. ಜೊತೆಗೆ ಬಿಲ್ ಕಟ್ಟದಿದ್ದರೆ ನಿಮ್ಮ ಮೇಲೆ ಕೇಸು ದಾಖಲಿಸುತ್ತೇವೆ ಎಂದು ಹೆದರಿಸುವ ಕೆಲಸ ಪುರಸಭೆಯಿಂದ ಆಗುತ್ತಿದೆ ಎಂದರೆ? ಏನರ್ಥ ಎಂದರು.

ಕೋಟ್ಯಾಂತರ ರೂಪಾಯಿ ಖರ್ಚು ಮಾಡಿ ಪುರಸಭಾ ವ್ಯಾಪ್ತಿಯ ನಿವಾಸಿಗಳಿಗೆ ನಿರಂತರವಾಗಿ ಕುಡಿಯುವ ನೀರು ಪೂರೈಕೆ ಮಾಡುವು ವ್ಯವಸ್ಥೆಯಲ್ಲಿ ಸಂಪೂರ್ಣ ವಿಫಲವಾಗಿದೆ. ಯೋಜನೆ ಸಮರ್ಪಕವಾಗಿ ಕಾರ್ಯರೂಪಕ್ಕೆ ತರಲು ಸಾಧ್ಯವಾಗದೆ ಇರುವುದಕ್ಕೆ ಇರುವ ಕಾರಣಗಳು ಯಾವುದು ಎಂಬುದು ಗೊತ್ತಾಗುತ್ತಿಲ್ಲ, ಹಾಗಾಗಿ ಲೋಕಾಯುಕ್ತಕ್ಕೆ ದೂರು ನೀಡಲು ನಿರ್ಣಯ ಮಾಡುವಂತೆ ಪುರಸಭಾ ಅಧ್ಯಕ್ಷ ವಾಸುಪೂಜಾರಿ ಸೂಚನೆ ನೀಡಿದರು. ಈ ಮೂಲಕ ಕುಡಿಯುವ ನೀರಿನ ಯೋಜನೆಯಲ್ಲಿ ಆಗಿರುವ ಅವ್ಯವಹಾರಗಳನ್ನು ಬಯಲಿಗೆ ತರುವ ಕಾರ್ಯ ಆಗಲಿ ಎಂದು ಆಗ್ರಹಿಸಿದರು.

ಸದಸ್ಯರಾದ ಹರಿಪ್ರಸಾದ್, ರಾಮಕೃಷ್ಣ ಆಳ್ವ, ಮಹಮ್ಮದ್ ನಂದರಬೆಟ್ಟು, ಮಹಮ್ಮದ್ ಶರೀಫ್ ಮತ್ತಿತರರು ಚರ್ಚೆಯಲ್ಲಿ ಭಾಗವಹಿಸಿದರು.