ಮಾಜಿ ಸಂಸದ ರಮೇಶ್ ಕತ್ತಿ ವಿರುದ್ಧ ಶಿಸ್ತು ಕ್ರಮಕ್ಕೆ ಆಗ್ರಹ

| Published : Oct 28 2025, 12:23 AM IST

ಸಾರಾಂಶ

ಮಾಜಿ ಸಂಸದ ರಮೇಶ್ ಕತ್ತಿ ಜಾತಿ ಹೆಸರಿನಲ್ಲಿ ಬೆಸ್ತಾರ್ ಹಾಗೂ ನಾಯಕ ಸಮುದಾಯವನ್ನು ಅವಾಚ್ಯ ಶಬ್ಧಗಳಿಂದ ನಿಂದಿಸಿರುವುದು ಖಂಡನೀಯ. ಕೂಡಲೇ ಪೊಲೀಸ್ ಇಲಾಖೆ ಜಾತಿ ನಿಂದನೆ ಪ್ರಕರಣ ದಾಖಲಿಸಿಕೊಳ್ಳಬೇಕು.

ಕನ್ನಡಪ್ರಭ ವಾರ್ತೆ ಮಳವಳ್ಳಿ

ವಾಲ್ಮೀಕಿ, ಬೆಸ್ತರ್ ಹಾಗೂ ನಾಯಕ ಜನಾಂಗದವರನ್ನು ಅವಾಚ್ಯ ಶದ್ಧಗಳಿಂದ ನಿಂದಿಸಿರುವ ಚಿಕ್ಕೋಡಿ ಮಾಜಿ ಸಂಸದ ರಮೇಶ್ ಕತ್ತಿ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ಪಟ್ಟಣದಲ್ಲಿ ಗಂಗಾಮತ ಸಮಾಜದವರು, ಗಡಿಕುಲದ ಯಜಮಾನರ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದರು.

ಪಟ್ಟಣದ ರಾಮರೂಢ ಮಠದ ಆವರಣದಲ್ಲಿ ಸೇರಿದ ನೂರಾರು ಮಂದಿ ನಂತರ ಪಟ್ಟಣದ ಪ್ರಮುಖ ರಸ್ತೆಯಲ್ಲಿ ಮೆರವಣಿಗೆ ಹೊರಟು ಅನಂತ್‌ರಾಂ ವೃತ್ತದಲ್ಲಿ ಕತ್ತಿ ವಿರುದ್ಧ ಘೋಷಣೆ ಕೂಗುವ ಜೊತೆಗೆ ಪ್ರತಿಕೃತಿ ದಹಿಸಿ ಆಕ್ರೋಶ ವ್ಯಕ್ತಪಡಿಸಿದರು.

ಟಿಎಪಿಸಿಎಂಎಸ್ ನಿರ್ದೇಶಕ ಕೆ.ಜೆ.ದೇವರಾಜು ಮಾತನಾಡಿ, ಮಾಜಿ ಸಂಸದ ರಮೇಶ್ ಕತ್ತಿ ಜಾತಿ ಹೆಸರಿನಲ್ಲಿ ಬೆಸ್ತಾರ್ ಹಾಗೂ ನಾಯಕ ಸಮುದಾಯವನ್ನು ಅವಾಚ್ಯ ಶಬ್ಧಗಳಿಂದ ನಿಂದಿಸಿರುವುದು ಖಂಡನೀಯ. ಕೂಡಲೇ ಪೊಲೀಸ್ ಇಲಾಖೆ ಜಾತಿ ನಿಂದನೆ ಪ್ರಕರಣ ದಾಖಲಿಸಿಕೊಳ್ಳಬೇಕೆಂದು ಆಗ್ರಹಿಸಿದರು.

ರಮೇಶ್‌ ಕತ್ತಿ ಅವರು ಬೆಳಗಾವಿಯ ಡಿಸಿಸಿ ಬ್ಯಾಂಕ್ ಚುನಾವಣೆ ವೇಳೆ ಸೋಲಿನ ಹತಾಶೆಯಿಂದ ಸಚಿವ ಸತೀಶ್ ಜಾರಕಿಹೊಳಿ ಹಾಗೂ ಶಾಸಕ ರಮೇಶ್ ಜಾರಕಿಹೊಳಿ ಕುಟುಂಬವನ್ನು ಅವಾಚ್ಯ ಶದ್ಧಗಳಿಂದ ನಿಂದಿಸಿರುವುದನ್ನು ಖಂಡಿಸಿದರು.

ವಾಲ್ಮೀಕಿ, ಬೇಡ, ನಾಯಕ ಹಾಗೂ ಬೆಸ್ತರ್ ಜನಾಂಗವನ್ನು ಕತ್ತಿ ಅವರು ಅಶ್ಲೀಲ ಪದಗಳ ಮೂಲಕ ಜಾತಿ ನಿಂದನೆ ಮಾಡಿ ನಮ್ಮ ಸಮುದಾಯದ ಜನರ ಭಾವನೆಗಳಿಗೆ ನೋವುಂಟು ಮಾಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿ ಶಿರಸ್ತೇದಾರ ಗುರುಪ್ರಸಾದ್ ಅವರ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದ ನಂತರ ಪಟ್ಟಣ ಪೊಲೀಸ್ ಠಾಣೆಗೆ ತೆರಳಿ ದೂರು ದಾಖಲಿಸಿದರು.

ಪ್ರತಿಭಟನೆಯಲ್ಲಿ ಮುಖಂಡರಾದ ಪ್ರಭು, ಎಂ.ಎಸ್.ರವಿ, ಶಿವಕುಮಾರ್, ಗುರುಸಿದ್ದ, ಶಿವಕುಮಾರ್, ಮೊಗಣ್ಣ, ಆನಂದ್, ಅಂಕನಾಥ್, ಮಂಜುನಾಥ್, ಕಂಬರಾಜು, ಮಾರೇಹಳ್ಳಿ ಕಿಟ್ಟಿ, ರಾಮಸ್ವಾಮಿ, ವೆಂಕಟೇಶ್, ಗಂಗರಾಜು, ಮತ್ತಿತರರು ಪಾಲ್ಗೊಂಡಿದ್ದರು.

ಬಿಡದೆ ಸುರಿದ ಮಳೆಗೆ ಮನೆ ಗೋಡೆ ಕುಸಿತ

ಕಿಕ್ಕೇರಿ: ಕಳೆದ ವಾರದಿಂದ ಬಿಡದೆ ಸುರಿಯುತ್ತಿರುವ ಮಳೆಯಿಂದ ಮಣ್ಣಿನಗೋಡೆಯ ಮನೆಗಳು ಶೀತವಾಗಿ ಒಂದೊಂದಾಗಿ ಕುಸಿಯಲು ಆರಂಭಿಸಿದ್ದು, ತಹಸೀಲ್ದಾರ್ ಭೇಟಿ ಪರಿಶೀಲನೆ ನಡೆಸಿದರು.

ಸಮೀಪದ ಕಾರಿಗಾನಹಳ್ಳಿ, ಹೆಗ್ಗಡಹಳ್ಳಿ ಮತ್ತಿತರ ಗ್ರಾಮಗಳಲ್ಲಿ ಬಡತನದಿಂದ ಬದುಕು ಸಾಗಿಸುತ್ತಿರುವ ಕುಟುಂಬಸ್ಥರ ಮನೆಗಳ ಮಣ್ಣಿನಗೋಡೆ ಕುಸಿದು ಸಾಕಷ್ಟು ಹಾನಿಯಾಗಿವೆ.

ಕಾರಿಗನಹಳ್ಳಿಯ ಲೀಲಾವತಿ ಕಾಂತರಾಜು, ಪುಟ್ಟಮ್ಮ ಲೇಟ್‌ ರಾಜೇಗೌಡ, ಸುನಂದ ಸುರೇಶ್, ಹೆಗ್ಗಡಹಳ್ಳಿ ಶಿವಕುಮಾರ್ ಅವರ ಮನೆಗಳು ಮಳೆಗೆ ಸಂಪೂರ್ಣ ಹಾನಿಯಾಗಿವೆ.

ಹಾನಿಗೊಳಗಾದ ಮನೆಗಳನ್ನು ವೀಕ್ಷಣೆ ಮಾಡಲು ಘಟನಾ ಸ್ಥಳಕ್ಕೆ ತಹಸೀಲ್ದಾರ್ ಎಸ್.ಯು.ಅಶೋಕ್ ತೆರಳಿ ಪರಿಶೀಲನೆ ಮಾಡಿದರು. ಸರ್ಕಾರದಿಂದ ಹಾನಿಗೊಳಗಾದ ಮನೆಗಳಿಗೆ ಸರ್ಕಾರದ ನಿಯಮಾವಳಿಯಂತೆ ಪ್ರಾಕೃತಿಕ ವಿಕೋಪದಡಿ ಸೂಕ್ತ ಪರಿಹಾರ ನೆರವು ಕೊಡಿಸಲಾಗುವುದು ಎಂದರು.

ತಾಲೂಕು ರೈತ ಸಂಘ ಅಧ್ಯಕ್ಷ ಕಾರಿಗನಹಳ್ಳಿ ಪುಟ್ಟೇಗೌಡ ಮಾತನಾಡಿ, ಕೇವಲ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಪರಿಹಾರ ನೀಡುವ ಭರವಸೆ ನೀಡಬಾರದು. ಸರ್ಕಾರದಿಂದ ನೀಡುವ ಪರಿಹಾರದಿಂದ ಬಡವರಿಗೆ, ನಿರಾಶ್ರಿತರಿಗೆ ಯಾವುದೇ ಲಾಭವಾಗದು. ಕಣ್ಣು ಒರೆಸುವ ನೆಪ ನೀಡಬಾರದು. ಹೆಚ್ಚು ಪರಿಹಾರವನ್ನು ತ್ವರಿತವಾಗಿ ನೀಡಬೇಕು ಎಂದು ಅಧಿಕಾರಿಗಳಲ್ಲಿ ಒತ್ತಾಯಿಸಿದರು.

ಈ ವೇಳೆ ರಾಜಸ್ವ ನಿರೀಕ್ಷಕ ಜ್ಞಾನೇಶ್, ಗ್ರಾಮ ಲೆಕ್ಕಾಧಿಕಾರಿ ರಘು, ಗ್ರಾಪಂ ಮಾಜಿ ಅಧ್ಯಕ್ಷ ಜಯರಾಮ್, ಮುಖಂಡ ಬಸವರಾಜಪ್ಪ, ರವಿಕುಮಾರ್, ನಾಗರಾಜ್, ಗಂಗಾಧರ್, ಸುರೇಶ್ ಮತ್ತಿತರರಿದ್ದರು.