ಅಧಿಕಾರ ದುರ್ಬಳಕೆ: ದಿನಗೂಲಿ ನೌಕರನ ವಜಾ ಮಾಡಿ

| Published : Dec 08 2024, 01:16 AM IST

ಸಾರಾಂಶ

ಪಟ್ಟಣ ಪಂಚಾಯಿತಿ ದಿನಗೂಲಿ ನೌಕರನೊಬ್ಬನಿಂದ ಅಧಿಕಾರ ದುರ್ಬಳಕೆಯಾಗುತ್ತಿದ್ದು, ಆತನನ್ನು ಕೆಲಸದಿಂದ ತೆಗೆದುಹಾಕಬೇಕು ಎಂದು ಠರಾವು ಹೊರಡಿಸುವಂತೆ ಮುಂಡಗೋಡ ಪಪಂ ಸದಸ್ಯರು ಸಾಮಾನ್ಯ ಸಭೆಯಲ್ಲಿ ಒತ್ತಾಯಿಸಿದರು.

ಮುಂಡಗೋಡ: ಪಟ್ಟಣ ಪಂಚಾಯಿತಿ ದಿನಗೂಲಿ ನೌಕರನೊಬ್ಬನಿಂದ ಅಧಿಕಾರ ದುರ್ಬಳಕೆಯಾಗುತ್ತಿದ್ದು, ಆತನನ್ನು ಕೆಲಸದಿಂದ ತೆಗೆದುಹಾಕಬೇಕು ಎಂದು ಠರಾವು ಹೊರಡಿಸುವಂತೆ ಪಟ್ಟಣ ಪಂಚಾಯಿತಿ ಸದಸ್ಯರು ಒತ್ತಾಯಿಸಿದರು.

ಶನಿವಾರ ನಡೆದ ಪಪಂ ಸಾಮಾನ್ಯ ಸಭೆಯಲ್ಲಿ ಈ ಬಗ್ಗೆ ಧ್ವನಿ ಎತ್ತಿದ ಕೆಲವು ಸದಸ್ಯರು, ದಿನಗೂಲಿ ನೌಕರ ಕುಟುಂಬಸ್ಥರ ಹೆಸರಲ್ಲಿ ಕಾಂಟ್ರಾಕ್ಟರ್ ಕೆಲಸ ಮಾಡಿಸುತ್ತಿದ್ದು, ಪಪಂ ಕಾರ್ಯಾಲಯದ ಆಂತರಿಕ ಮಾಹಿತಿ ಕಲೆ ಹಾಕಿ ತನಗೆ ಅನುಕೂಲವಾಗುವ ರೀತಿ ಟೆಂಡರ್ ಪಡೆಯುತ್ತಿದ್ದು, ಪಪಂನ ಬಹುತೇಕ ಕಾಮಗಾರಿಯನ್ನು ತಾನೇ ಮಾಡುತ್ತಾನೆ ಎಂದು ಆರೋಪಿಸಿದ ಕೆಲವಷ್ಟು ಸದಸ್ಯರು, ತಕ್ಷಣ ಆತನನ್ನು ಕೆಲಸದಿಂದ ತೆಗೆದು ಹಾಕಬೇಕೆಂದು ಪಟ್ಟುಹಿಡಿದರು. ಅಲ್ಲದೇ ಸಿವಿಲ್ ಕಾಮಗಾರಿಯಲ್ಲಿ ಶೇ. ೨೦ಕ್ಕಿಂತ ಕಡಿಮೆ ಹಾಗೂ ಸಿಂಗಲ್ ಟೆಂಡರ್ ಆಗಿದ್ದನ್ನು ರದ್ದುಪಡಿಸಿ ಮತ್ತೊಮ್ಮೆ ಟೆಂಡರ್ ಕರೆಯುವಂತೆ ಬಹುತೇಕ ಸದಸ್ಯರು ಒತ್ತಾಯಿಸಿದರು. ಈ ಬಗ್ಗೆ ಪ್ರತಿಕ್ರಿಯಿಸಿದ ಮುಖ್ಯಾಧಿಕಾರಿ ಚಂದ್ರಶೇಖರ, ಜಿಲ್ಲಾಧಿಕಾರಿಗೆ ಪತ್ರ ಬರೆದು ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.

ಪಟ್ಟಣದ ಶುದ್ಧ ಕುಡಿಯುವ ನೀರಿನ ಘಟಕ ನಿರ್ವಹಣೆಯಲ್ಲಿ ಲಾಭಕ್ಕಿಂತ ಹೆಚ್ಚು ನಷ್ಟ ತೋರಿಸಲಾಗುತ್ತಿದ್ದು, ಇದರಲ್ಲಿ ಭಾರಿ ಗೋಲ್‌ಮಾಲ್ ನಡೆಯುತ್ತಿದೆ ಎಂದು ಪಪಂ ಸದಸ್ಯ ಮಂಜುನಾಥ ಹರ್ಮಲಕರ ಆರೋಪಿಸಿದರು. ಹಿಂದೆ ಖಾಸಗಿಯವರು ಟೆಂಡರ್ ಪಡೆದು ಶುದ್ಧ ಕುಡಿಯುವ ನೀರಿನ ಘಟಕ ನಿರ್ವಹಣೆ ಮಾಡುತ್ತಿದ್ದಾಗ ಲಕ್ಷಾಂತರ ರುಪಾಯಿ ಲಾಭವಾಗುತ್ತಿತ್ತು. ಆದರೆ ಈಗ ಪಪಂನಿಂದ ನಿರ್ವಹಿಸಲಾಗುತ್ತಿದ್ದು, ಲಾಭಕ್ಕಿಂತ ಹೆಚ್ಚು ನಷ್ಟ ತೋರಿಸಲಾಗುತ್ತಿದೆ. ಹಾಗಾಗಿ ಈ ಬಗ್ಗೆ ತನಿಖೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಪಟ್ಟಣದ ಅಲಂಕೃತ ಬೀದಿದೀಪಗಳು ಹಾಳಾಗಿದ್ದು, ಕತ್ತಲು ಆವರಿಸಿದೆ. ಇದಕ್ಕೆ ಯಾರು ಹೊಣೆ ಎಂದು ಸದಸ್ಯರು ಪ್ರಶ್ನಿಸಿದರು. ಕೋಟ್ಯಂತರ ರುಪಾಯಿ ವೆಚ್ಚದಲ್ಲಿ ಅಳವಡಿಸಲಾದ ಅಲಂಕೃತ ಬೀದಿದೀಪಗಳು ಕೆಟ್ಟು ಹೋಗಿದ್ದು, ಸಂಜೆಯಾಗುತ್ತಲೇ ಕತ್ತಲು ಆವರಿಸುತ್ತದೆ. ಇದರಿಂದ ಸಾರ್ವಜನಿಕರು ತೊಂದರೆ ಅನುಭವಿಸುವಂತಾಗಿದೆ. ತಕ್ಷಣ ವಿದ್ಯುತ್ ದೀಪ ಅಳವಡಿಸಬೇಕು ಎಂದು ಒತ್ತಾಯಿಸಲಾಯಿತು.

ಪಟ್ಟಣದಲ್ಲಿ ಬೀದಿನಾಯಿಗಳ ಹಾವಳಿ ಹೆಚ್ಚಿದ್ದು, ಸಾಕಷ್ಟು ಜನರಿಗೆ ಕಚ್ಚಿ ಗಾಯಗೊಳಿಸಿವೆ. ಸಾರ್ವಜನಿಕರು ತಿರುಗಾಡುವುದು ಕಷ್ಟಸಾಧ್ಯವಾಗುತ್ತಿದೆ. ಪ್ರತಿ ಬಾರಿ ಸಭೆಯಲ್ಲಿ ಈ ಬಗ್ಗೆ ಚರ್ಚೆ ನಡೆಯುತ್ತದೆ. ಕ್ರಮ ಮಾತ್ರ ಕೈಗೊಳ್ಳುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ ಸದಸ್ಯರು, ತಕ್ಷಣ ನಾಯಿಗಳ ನಿಯಂತ್ರಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಶೌಚವನ್ನು ಸ್ವಚ್ಛಗೊಳಿಸುವ ಗಲ್ಲಿ ಮ್ಯಾನ್ ಹಾಳಾಗಿ ಹಲವು ದಿನಗಳು ಕಳೆದಿದ್ದು, ಸಾರ್ವಜನಿಕರು ಬೇರೆ ಕಡೆಯಿಂದ ವಾಹನ ತರಿಸುವುದು ವೆಚ್ಚ ಜಾಸ್ತಿಯಾಗುತ್ತಿದೆ. ತಕ್ಷಣ ವಾಹನವನ್ನು ದುರಸ್ತಿಗೊಳಿಸಬೇಕು. ಝೆರಾಕ್ಸ್ ಮಷಿನ್‌ ಹಾಳಾಗಿದು, ಪದೇ ಪದೇ ದುರಸ್ತಿ ಮಾಡಿ ಹಣ ಖರ್ಚು ಮಾಡುವ ಬದಲು ಹೊಸ ಯಂತ್ರ ಖರೀದಿಸುವಂತೆ ಸದಸ್ಯರು ಆಗ್ರಹಿಸಿದರು.

ಸ್ಥಾಯಿ ಸಮಿತಿ ಸದಸ್ಯರನ್ನು ಆಯ್ಕೆ ಮಾಡಿ ಎರಡು ತಿಂಗಳಾದರೂ ಇನ್ನೂ ಸ್ಥಾಯಿ ಸಮಿತಿಯ ಅಧ್ಯಕ್ಷರ ಆಯ್ಕೆ ಮಾಡಿಲ್ಲ. ಬೇಗನೆ ಆಯ್ಕೆ ಮಾಡಿ ಎಂದು ಕೆಲವು ಸದಸ್ಯರು ಒತ್ತಾಯಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಪಪಂ ಅಧ್ಯಕ್ಷೆ ಜಯಸುಧಾ ಭೋವಿ, ಡಿ ೧೦ಕ್ಕೆ ಸಭೆ ಕರೆದು ಆಯ್ಕೆ ಮಾಡೋಣ ಎಂದು ತಿಳಿಸಿದರು.

ಪಪಂ ಉಪಾಧ್ಯಕ್ಷೆ ರಹಿಮಾಬಾನು ಕುಂಕೂರ, ಸದಸ್ಯ ಫಣಿರಾಜ ಹದಳಗಿ, ಮಂಜುನಾಥ ಹರ್ಮಲಕರ, ವಿಶ್ವನಾಥ ಪವಾಡಶೆಟ್ಟರ, ಶೇಖರ ಲಮಾಣಿ, ರಜಾ ಪಠಾಣ, ಮಹ್ಮದಗೌಸ ಮಖಾಂದಾರ, ನಿರ್ಮಲಾ ಬೆಂಡ್ಲಗಟ್ಟಿ, ಕುಸುಮಾ ಹಾವಣಗಿ, ಜಾಪರ್ ಹಂಡಿ, ಬೀಬಿಜಾನ್ ಮುಲ್ಲಾನವರ, ಶಕುಂತಲಾ ನಾಯಕ, ನಾಗರಾಜ ಹಂಚಿನಮನಿ, ಜೈನು ಬೆಂಡಿಗೇರಿ ಮುಂತಾದವರು ಉಪಸ್ಥಿತರಿದ್ದರು.