ಸಾರಾಂಶ
ಬಳ್ಳಾರಿ: ಬಗರ್ ಹುಕುಂ ಸಾಗುವಳಿದಾರರಿಗೆ ಹಕ್ಕುಪತ್ರ ವಿತರಿಸಬೇಕು ಎಂದು ಒತ್ತಾಯಿಸಿ ಅಖಿಲ ಭಾರತ ರೈತ ಕೃಷಿ ಕಾರ್ಮಿಕರ ಸಂಘಟನೆ (ಎಐಕೆಕೆಎಂಎಸ್) ನಗರದ ತಾಲೂಕು ಕಚೇರಿ ಎದುರು ಪ್ರತಿಭಟನೆ ನಡೆಸಿ, ಮನವಿ ಸಲ್ಲಿಸಿತು.
ಬಳ್ಳಾರಿ ಸೇರಿದಂತೆ ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಕಳೆದ ಆರೇಳು ದಶಕಗಳಿಂದ ಸರ್ಕಾರಿ ಜಮೀನಿನಲ್ಲಿ ಉಳುಮೆ ಮಾಡಿಕೊಂಡು ಜೀವನ ನಿರ್ವಹಣೆ ಮಾಡುತ್ತಿದ್ದಾರೆ. ಇವರ ಕೃಷಿ ಉತ್ಪನ್ನದಿಂದ ಸಮಾಜದ ಹಸಿವು ನೀಗಿದೆ. ಆದರೆ, ಇವರಿಗೆ ಪಟ್ಟಾ ನೀಡುವ ಯಾವುದೇ ಕ್ರಮವನ್ನು ರಾಜ್ಯ ಸರ್ಕಾರ ಈ ವರೆಗೆ ಕೈಗೊಂಡಿಲ್ಲ. ಇದರಿಂದ ಆತಂಕದಲ್ಲಿಯೇ ಕೃಷಿ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವಂತಾಗಿದೆ ಎಂದು ಸಂಘಟನೆಯ ಜಿಲ್ಲಾಧ್ಯಕ್ಷ ಗೋವಿಂದ್ ತಿಳಿಸಿದರು.ರಾಜ್ಯ ಸಮಿತಿ ಸದಸ್ಯ ಈ. ಹನುಮಂತಪ್ಪ ಮಾತನಾಡಿ, ಸಾಗುವಳಿದಾರರ ಅವಶ್ಯಕತೆಯನ್ನು ಗ್ರಹಿಸಿದ ಸರ್ಕಾರಗಳು ಅವರಿಗೆ ಹಕ್ಕು ಪತ್ರ ನೀಡುವುದಾಗಿ ಭರವಸೆ ನೀಡಿ ಹಲವಾರು ವರ್ಷಗಳೇ ಕಳೆದಿದ್ದರೂ ಇಂದಿಗೂ ಹಕ್ಕುಪತ್ರಗಳು ಅವರ ಕೈಸೇರಿಲ್ಲ. ಇನ್ನೊಂದೆಡೆ, ಇತ್ತೀಚೆಗೆ ಹಕ್ಕುಪತ್ರ ವಿತರಿಸುವ ಸಲುವಾಗಿ ಉಪಗ್ರಹದ ಮೂಲಕ ಸಮೀಕ್ಷೆ ಮಾಡುತ್ತಿರುವುದು, ಕೆಲವು ಕಡೆ ಈ ಸಾಗುವಳಿದಾರರ ಅರ್ಜಿಗಳನ್ನು ವಿನಾ ಕಾರಣ ತಿರಸ್ಕರಿಸುತ್ತಿರುವುದು ಕಂಡು ಬಂದಿದೆ. ಇದರಿಂದ ಸಾಗುವಳಿದಾರರಿಗೆ ಅನ್ಯಾಯವಾಗಿದೆ. ಹೀಗಾಗಿ, ಸರ್ಕಾರ ನ್ಯಾಯಬದ್ಧವಾಗಿ ಉಳುಮೆ ಮಾಡುತ್ತಿರುವ ರೈತರಿಗೆ ಭೂಮಿಯ ಹಕ್ಕುಪತ್ರಗಳನ್ನು ವಿತರಿಸುವ ಕಾಳಜಿ ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿದರು.
ಜಿಲ್ಲಾ ಕಾರ್ಯದರ್ಶಿ ಗುರಳ್ಳಿ ರಾಜ, ಬಗರ್ ಹುಕುಂ ಸಾಗುವಳಿದಾರರಿಗೆ ಕೂಡಲೇ ಹಕ್ಕುಪತ್ರ ವಿತರಣೆಗೆ ಸರ್ಕಾರ ಮುಂದಾಗಬೇಕು. ಉಪಗ್ರಹದ ಮೂಲಕ ಸಮೀಕ್ಷೆ ಬದಲಾಗಿ, ನೇರವಾಗಿ ಸಮೀಕ್ಷೆ ಮಾಡಬೇಕು. ಇವರು ಸಲ್ಲಿಸಿದ ಅರ್ಜಿಗಳನ್ನು ವಿನಾ ಕಾರಣ ತಿರಸ್ಕಾರ ಮಾಡುವುದು ನಿಲ್ಲಿಸಬೇಕು. ಈಗಾಗಲೇ ತಿರಸ್ಕಾರ ಮಾಡಿದ ಅರ್ಜಿಗಳನ್ನು ಪುನಃ ಪರಿಶೀಲಿಸಬೇಕು ಎಂದು ಆಗ್ರಹಿಸಿದರು.ರೈತ ಮುಖಂಡರಾದ ರಾಮದಾಸ್, ಮಲ್ಲಪ್ಪ, ತಿಪ್ಪಯ್ಯ ಮತ್ತಿತರರಿದ್ದರು. ತಹಸೀಲ್ದಾರ್ ಅವರಿಗೆ ಸಂಘದ ಜಿಲ್ಲಾ ಪ್ರಮುಖರು ಮನವಿಪತ್ರ ಸಲ್ಲಿಸಿದರು.
;Resize=(128,128))
;Resize=(128,128))
;Resize=(128,128))
;Resize=(128,128))