ಸಾರಾಂಶ
ಹೊಸಪೇಟೆ: ಪದವಿ ಮತ್ತು ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳ ಅಂಕಪಟ್ಟಿ ವಿತರಿಸಬೇಕು ಎಂದು ಒತ್ತಾಯಿಸಿ ಎಸ್ಎಫ್‌ಐ ಜಿಲ್ಲಾ ಸಮಿತಿಯ ನೇತೃತ್ವದಲ್ಲಿ ಜಿಲ್ಲಾಧಿಕಾರಿ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಗುರುವಾರ ಮನವಿ ರವಾನಿಸಲಾಯಿತು.
ಎಸ್‌ಎಫ್‌ಐನ ಜಿಲ್ಲಾ ಕಾರ್ಯದರ್ಶಿ ಶಿವರೆಡ್ಡಿ ಮಾತನಾಡಿ, ರಾಜ್ಯದಲ್ಲಿ ಎನ್‌ಇಪಿ ಜಾರಿಯಾದ ಆನಂತರ 22ಕ್ಕೂ ಹೆಚ್ಚು ವಿಶ್ವವಿದ್ಯಾನಿಲಯಗಳು 51 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳ ಅಂಕಪಟ್ಟಿ ವಿತರಣೆ ಮಾಡಿಲ್ಲ. ರಾಜ್ಯ ಸರ್ಕಾರ ರಾಜ್ಯದಲ್ಲಿ ಎನ್ಇಪಿ ರದ್ದುಗೊಳಿಸಿ ಎಸ್‌ಇಪಿ ಜಾರಿಗೊಳಿಸಿದೆ. ಆದರೆ ಎಸ್‌ಇಪಿ ವಿದ್ಯಾರ್ಥಿಗಳಿಗೂ ಅಂಕಪಟ್ಟಿ ಸಿಗುತ್ತಿಲ್ಲ. ಉನ್ನತ ವಿದ್ಯಾಭ್ಯಾಸಕ್ಕೆ ಅಂಕಪಟ್ಟಿ ಬೇಕಾಗಿರುವ ಕಾರಣ ವಿದ್ಯಾರ್ಥಿಗಳು ವಿಶ್ವವಿದ್ಯಾನಿಲಯಗಳ ಹತ್ತಿರ ಹೋಗಿ ಅಲೆದಾಡುವ ಪರಿಸ್ಥಿತಿ ಎದುರಾಗಿದೆ ಎಂದು ದೂರಿದರು.ವಿಶ್ವವಿದ್ಯಾನಿಲಯದ ಬಳಿ ವಿದ್ಯಾರ್ಥಿಗಳು ಅಂಕಪಟ್ಟಿ ಕೇಳಿಕೊಂಡು ಹೋದರೆ ಡಿಜಿ ಲಾಕರ್ (Digi Locker) ನಲ್ಲಿ ಅಂಕಪಟ್ಟಿ ತೆಗೆದುಕೊಳ್ಳಿ ಎಂದು ತಿಳಿಸುತ್ತಿದ್ದಾರೆ. ಆದರೆ ಡಿಜಿ ಲಾಕರ್‌ನಲ್ಲಿಯೂ ಅಂಕಪಟ್ಟಿ ಸಿಗುತ್ತಿಲ್ಲ. ವಿದ್ಯಾರ್ಥಿಗಳು ಕೇಳಿದರೆ ತಾಂತ್ರಿಕ ಸಮಸ್ಯೆ ಇದೆ ಎಂದು ವಿದ್ಯಾರ್ಥಿಗಳಿಗೆ ತಿಳಿಸುತ್ತಾರೆ. ಯುಸಿಸಿಎಂಎಸ್ ಜಾರಿಗೆ ಬಂದ ದಿನದಿಂದ ಉನ್ನತ ವಿದ್ಯಾಭ್ಯಾಸಕ್ಕೆ ಹೋಗುತ್ತಿರುವ ವಿದ್ಯಾರ್ಥಿಗಳಿಗೆ ಸಮಸ್ಯೆ ಉಂಟಾಗುತ್ತಿದೆ. ವಿದ್ಯಾರ್ಥಿಗಳು ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸಲು ಮತ್ತು ವಿದ್ಯಾರ್ಥಿ ನಿಲಯಗಳಿಗೆ ಅರ್ಜಿ ಸಲ್ಲಿಸಲು ಸಹ ತೊಂದರೆ ಉಂಟಾಗುತ್ತಿದೆ ಎಂದು ಹೇಳಿದರು.
ಎಸ್‌ಎಫ್‌ಐನ ಜಿಲ್ಲಾ ಸಹಕಾರ್ಯದರ್ಶಿ ಕೆ.ಎ. ಪವನ್ ಕುಮಾರ್ ಮಾತನಾಡಿ, ಎನ್‌ಇಪಿಯಲ್ಲಿ ಆನ್‌ಲೈನ್ ಅಂಕಪಟ್ಟಿ ಜತೆಗೆ ಮುದ್ರಿತ ಅಂಕಪಟ್ಟಿ ನೀಡಬೇಕು ಎಂದಿದೆ. ಈ ಕುರಿತು ರಾಜ್ಯಪಾಲರು 2022ರ ಡಿಸೆಂಬರ್ 22ರಂದು ಎಲ್ಲ ವಿಶ್ವವಿದ್ಯಾನಿಲಯಗಳು ಮುದ್ರಿತ ಅಂಕಪಟ್ಟಿ ವಿತರಿಸಬೇಕೆಂದು ಆದೇಶ ನೀಡಿದ್ದರೂ ವಿಶ್ವವಿದ್ಯಾನಿಲಯಗಳು ಪಾಲಿಸುತ್ತಿಲ್ಲ. ಆದರಿಂದ ತಕ್ಷಣ ರಾಜ್ಯ ಸರ್ಕಾರ ಮಧ್ಯಪ್ರವೇಶ ಮಾಡಿ ಅಂಕಪಟ್ಟಿ ವಿತರಣೆ ಮಾಡಲು ಸೂಕ್ತ ಕ್ರಮ ತೆಗೆದುಕೊಳ್ಳಬೇಕು. ಅಂಕಪಟ್ಟಿ ವಿತರಣೆಯಲ್ಲಿ ಸುಮಾರು ₹200 ಕೋಟಿ ದುರ್ಬಳಕೆ ಆಗಿರುವುದು ಮೇಲ್ನೋಟಕ್ಕೆ ಕಾಣುತ್ತದೆ. ಆದರಿಂದ ಅಂಕಪಟ್ಟಿ ವಿತರಣೆಗೆ ಸಂಬಂಧಿಸಿದಂತೆ ಉನ್ನತ ಮಟ್ಟದ ತನಿಖೆ ಮಾಡಬೇಕು ಎಂದು ಒತ್ತಾಯಿಸಿದರು.ಮುಖಂಡರಾದ ಲೋಕೇಶ್, ಸುಧಾಕರ್, ಲಕ್ಷ್ಮೀ, ಭೀಮಕ್ಕ, ಸ್ವಾತಿ, ಶಿವರಾಜ್ ಕುಮಾರ್ ಮತ್ತಿತರರಿದ್ದರು.ಹೊಸಪೇಟೆಯಲ್ಲಿ ಗುರುವಾರ ಎಸ್‌ಎಫ್‌ಐ ವತಿಯಿಂದ ಜಿಲ್ಲಾಧಿಕಾರಿ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ರವಾನಿಸಲಾಯಿತು.