ಬಸ್ ನಿಲ್ದಾಣ ಕಾಮಗಾರಿ ಶೀಘ್ರ ಪೂರ್ಣಗೊಳಿಸಲು ಆಗ್ರಹ

| Published : Jun 09 2024, 01:30 AM IST

ಸಾರಾಂಶ

ದಾಬಸ್‌ಪೇಟೆ: ಪಟ್ಟಣದಲ್ಲಿರುವ ಸರ್ಕಾರಿ ಬಸ್ ನಿಲ್ದಾಣದ ಕಾಮಗಾರಿಯನ್ನು ಶೀಘ್ರವಾಗಿ ಪೂರ್ಣಗೊಳಿಸಬೇಕು. ಅಲ್ಲಿಯವರೆಗೂ ಪ್ರಯಾಣಿಕರಿಗೆ, ಸಾರ್ವಜನಿಕರಿಗೆ ತಾತ್ಕಾಲಿಕ ವ್ಯವಸ್ಥೆ ಕಲ್ಪಿಸಿಕೊಡಬೇಕೆಂದು ಆಗ್ರಹಿಸಿ ಬಿಜೆಪಿ ಹಾಗೂ ಜೆಡಿಎಸ್ ಕಾರ್ಯಕರ್ತರು ಬಸ್ ನಿಲ್ದಾಣದಲ್ಲಿ ಕೆಎಸ್‌ಆರ್‌ಟಿಸಿ ನಿಗಮದ ವಿರುದ್ಧ ಘೋಷಣೆ ಕೂಗಿ ಪ್ರತಿಭಟನೆ ನಡೆಸಿದರು.

ದಾಬಸ್‌ಪೇಟೆ: ಪಟ್ಟಣದಲ್ಲಿರುವ ಸರ್ಕಾರಿ ಬಸ್ ನಿಲ್ದಾಣದ ಕಾಮಗಾರಿಯನ್ನು ಶೀಘ್ರವಾಗಿ ಪೂರ್ಣಗೊಳಿಸಬೇಕು. ಅಲ್ಲಿಯವರೆಗೂ ಪ್ರಯಾಣಿಕರಿಗೆ, ಸಾರ್ವಜನಿಕರಿಗೆ ತಾತ್ಕಾಲಿಕ ವ್ಯವಸ್ಥೆ ಕಲ್ಪಿಸಿಕೊಡಬೇಕೆಂದು ಆಗ್ರಹಿಸಿ ಬಿಜೆಪಿ ಹಾಗೂ ಜೆಡಿಎಸ್ ಕಾರ್ಯಕರ್ತರು ಬಸ್ ನಿಲ್ದಾಣದಲ್ಲಿ ಕೆಎಸ್‌ಆರ್‌ಟಿಸಿ ನಿಗಮದ ವಿರುದ್ಧ ಘೋಷಣೆ ಕೂಗಿ ಪ್ರತಿಭಟನೆ ನಡೆಸಿದರು.

ಪ್ರತಿಭಟನೆಯ ನೇತೃತ್ವ ವಹಿಸಿದ್ದ ಬಿಜೆಪಿ ತಾಲೂಕು ಅಧ್ಯಕ್ಷ ಜಗದೀಶ್ ಚೌಧರಿ ಮಾತನಾಡಿ, ಬಹು ದಿನಗಳಿಂದ ಬಸ್ ನಿಲ್ದಾಣದ ಕಾಮಗಾರಿ ನಡೆಸದೇ ಸ್ಥಗಿತಗೊಳಿಸಿರುವುದರಿಂದ ಬಸ್ ನಿಲ್ದಾಣದಲ್ಲಿ ಮಳೆ ಬಂದರೆ ನೀರು ನಿಂತು ಕೆರೆಯಂತಾಗುತ್ತದೆ. ನಿಲ್ದಾಣದಲ್ಲಿ ಕಾಲಿಡಲಾಗದಷ್ಟು ನೈಮರ್ಲದಿಂದ ಕೂಡಿದೆ. ಸ್ವಚ್ಛತೆ ಇಲ್ಲದೆ, ಪ್ರಯಾಣಿಕರು ನಿಂತುಕೊಳ್ಳಲು ಸಾಧ್ಯವಾಗುತ್ತಿಲ್ಲ. ಎಲ್ಲೆಂದರಲ್ಲಿ ಕಸ ಚೆಲ್ಲಿದ್ದರೂ ಸಂಬಂಧಪಟ್ಟವರು ಗಮನಹರಿಸಿಲ್ಲ. ವಿಶೇಷವಾಗಿ ಹೆಣ್ಣು ಮಕ್ಕಳಿಗೆ ಶೌಚಾಲಯ ಇಲ್ಲದೇ ಪರದಾಡುವಂತಾಗಿದೆ. ಶಾಲಾ ಕಾಲೇಜುಗಳಿಗೆ ದುರದೂರುಗಳಿಂದ ಬರುವ ಹೆಣ್ಣುಮಕ್ಕಳು, ಪ್ರಯಾಣಿಕರು ಶೌಚಾಲಯವಿಲ್ಲದೆ ಸಮಸ್ಯೆಯಾಗಿದೆ. ಶೀಘ್ರವೇ ತಾತ್ಕಾಲಿಕ ವ್ಯವಸ್ಥೆ ಮಾಡಿ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಬೇಕೆಂದು ಒತ್ತಾಯಿಸಿದರು.

ತುಮಕೂರು ಡಿಪೋ ವಿಭಾಗೀಯ ಅಧಿಕಾರಿಗೆ ತರಾಟೆ: ಈ ಬಗ್ಗೆ ತುಮಕೂರು ಸಂಚಾರ ನಿಗಮದ ವಿಭಾಗೀಯ ಅಧಿಕಾರಿಗೆ ಪೋನ್ ಮಾಡಿ ತರಾಟೆಗೆ ತೆಗೆದುಕೊಂಡಾಗ ಅವರು ಚುನಾವಣಾ ನೀತಿ ಸಂಹಿತೆ ಹಿನ್ನೆಲೆಯಲ್ಲಿ ಕಾಮಗಾರಿ ಪೂರ್ಣಗೊಳಿಸಲು ಸಾಧ್ಯವಾಗಿಲ್ಲ ಎಂದು ಉತ್ತರಿಸಿದರು. ಇದರಿಂದ ಆಕ್ರೋಶಗೊಂಡು ಏಕವಚನದಲ್ಲೇ ವಾಗ್ದಾಳಿ ನಡೆಸಿದ ಜಗದೀಶ್ ಚೌಧರಿ, ಶೀಘ್ರದಲ್ಲೇ ಕೆಲಸ ಆರಂಭಿಸದಿದ್ದರೆ ಬಸ್ ನಿಲ್ದಾಣದಲ್ಲಿ ಪ್ರತಿಭಟನೆ ಮಾಡುತ್ತೇವೆ ಎಂದೂ ಎಚ್ಚರಿಕೆ ನೀಡಿದರು.

ಜೆಡಿಎಸ್ ಹೋಬಳಿ ಅಧ್ಯಕ್ಷ ಮೋಹನ್ ಕುಮಾರ್ ಮಾತನಾಡಿ, ಶೀಘ್ರವೇ ಕಾಮಗಾರಿ ಪುನರಾರಂಭಿಸಿ ಪೂರ್ಣಗೊಳಿಸಿ ಬಸ್‌ ನಿಲ್ದಾಣವನ್ನು ಸಾರ್ವಜನಿಕರ ಅನುಕೂಲಕ್ಕೆ ಅನುವು ಮಾಡಿಕೊಡಬೇಕು. ಇಲ್ಲದಿದ್ದಲ್ಲಿ ನೂತನ ಸಂಸದ ಡಾ.ಕೆ.ಸುಧಾಕರ್ ಅವರ ಗಮನಕ್ಕೆ ತರುತ್ತೇವೆ. ಅವರ ನಿರ್ದೇಶನದಂತೆ ಹೋರಾಟಕ್ಕೆ ರೂಪುರೇಷೆ ಸಿದ್ದಪಡಿಸಿ ಅವರ ನೇತೃತ್ವದಲ್ಲೇ ಹೋರಾಟ ಮಾಡುತ್ತೇವೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಜೆಡಿಎಸ್ ಯುವಘಟಕದ ಹೋಬಳಿ ಅಧ್ಯಕ್ಷ ವೀರಸಾಗರ ಮಂಜುನಾಥ್, ನಿರ್ಮಾಪಕ ಬಿಲ್ಲಿನಕೋಟೆ ನಾಗರಾಜು, ಬಿಜೆಪಿ ತಾಲೂಕು ಯುವಘಟಕದ ಅಧ್ಯಕ್ಷ ರಾಯರಪಾಳ್ಯ ಮಂಜುನಾಥ್, ಮಹಿಳಾ ಮುಖಂಡರಾದ ಮಂಜುಳ, ನಳಿನಾ, ಬಿಜೆಪಿ-ಜೆಡಿಎಸ್‌ ಕಾರ್ಯಕರ್ತರು ಹಾಜರಿದ್ದರು.ಪೋಟೋ 5 : ದಾಬಸ್‌ಪೇಟೆಯಲ್ಲಿರುವ ಸರ್ಕಾರಿ ಬಸ್ ನಿಲ್ದಾಣದ ಕಾಮಗಾರಿಯನ್ನು ಶೀಘ್ರವಾಗಿ ಪೂರ್ಣಗೊಳಿಸಬೇಕು ಎಂದು ಆಗ್ರಹಿಸಿ ಬಿಜೆಪಿ ಹಾಗೂ ಜೆಡಿಎಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.