ಬಾಗಲಕೋಟೆ : ಇಲ್ಲಿನ ರಾಯಚೂರ-ಬಾಚಿ ಹೆದ್ದಾರಿ ನಿಗದಿತ ಸಮಯದಲ್ಲಿ ಕಾಮಗಾರಿ ಪೂರ್ಣಗೊಳಿಸದೇ ಅಪೂರ್ಣವಾಗಿರುವುದರಿಂದ ನಾಗರಿಕರಿಗೆ ಸಾಕಷ್ಟು ತೊಂದರೆ ಆಗಿದ್ದು, ಹೆಚ್ಚಿನ ಅಪಘಾತಗಳು ಸಂಭವಿಸಿ ಪ್ರಾಣಾಪಾಯ ಉಂಟಾಗುತ್ತಿವೆ ಎಂದು ಆರೋಪಿಸಿ ನಗರದಲ್ಲಿ ಶನಿವಾರ ಯುನಿಯನ್ ಮರ್ಚಂಟ್ಸ್ ಆ್ಯಂಡ್ ಎಂಟರ್ ಪ್ರೈನರ್ಸ್ ಸಂಘಟನೆ ಪ್ರತಿಭಟನೆ ನಡೆಸಿತು.

ಕನ್ನಡಪ್ರಭ ವಾರ್ತೆ ಬಾಗಲಕೋಟೆ

ಇಲ್ಲಿನ ರಾಯಚೂರ-ಬಾಚಿ ಹೆದ್ದಾರಿ ನಿಗದಿತ ಸಮಯದಲ್ಲಿ ಕಾಮಗಾರಿ ಪೂರ್ಣಗೊಳಿಸದೇ ಅಪೂರ್ಣವಾಗಿರುವುದರಿಂದ ನಾಗರಿಕರಿಗೆ ಸಾಕಷ್ಟು ತೊಂದರೆ ಆಗಿದ್ದು, ಹೆಚ್ಚಿನ ಅಪಘಾತಗಳು ಸಂಭವಿಸಿ ಪ್ರಾಣಾಪಾಯ ಉಂಟಾಗುತ್ತಿವೆ ಎಂದು ಆರೋಪಿಸಿ ನಗರದಲ್ಲಿ ಶನಿವಾರ ಯುನಿಯನ್ ಮರ್ಚಂಟ್ಸ್ ಆ್ಯಂಡ್ ಎಂಟರ್ ಪ್ರೈನರ್ಸ್ ಸಂಘಟನೆ ಪ್ರತಿಭಟನೆ ನಡೆಸಿತು.

ನಗರದ ಬಸವೇಶ್ವರ ವೃತ್ತದಲ್ಲಿ ಸೇರಿದ ಸಂಘಟನೆ ಕಾರ್ಯಕರ್ತರು, ರಾಯಚೂರ-ಬಾಚಿ ಹೆದ್ದಾರಿ ಕಾಮಗಾರಿ ಪೂರ್ಣಗೊಳಿಸಿ ಜನರಿಗೆ ಅನುಕೂಲ ಕಲ್ಪಿಸಬೇಕು. ಹಾಗೆಯೇ ಅಪಘಾತ ತಡೆಗಟ್ಟಬೇಕು ಎಂದು ಆಗ್ರಹಿಸಿದರು.

ಈ ಹೆದ್ದಾರಿ ಕಾಮಗಾರಿ ಆರಂಭವಾಗಿ ವರ್ಷಗಳೇ ಕಳೆದರೂ ಇನ್ನೂ ಪೂರ್ಣಗೊಳ್ಳದೇ ಕಾಮಗಾರಿ ಆಮೆಗತಿಯಲ್ಲಿ ಸಾಗಿದೆ. ನಗರ ವ್ಯಾಪ್ತಿಯಲ್ಲಿನ ಕಾಮಗಾರಿ ಪೂರ್ಣಗೊಳ್ಳದೇ ಇರುವುದರಿಂದ ನಿತ್ಯ ಒಂದಿಲ್ಲೊಂದು ಅಪಘಾತಗಳು ಸಂಭವಿಸುತ್ತಲೇ ಇವೆ. ಇದರಿಂದ ವಾಹನ ಸವಾರರು ಗಾಯಗೊಂಡು ಆಸ್ಪತ್ರೆ ಸೇರುವುದು, ಕೆಲವರು ಪ್ರಾಣ ಕಳೆದುಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗಿದೆ. ಅತ್ಯಂತ ಜನದಟ್ಟನೆ ಹಾಗೂ ವಾಹನ ದಟ್ಟನೆಯಿಂದ ಕೂಡಿರುವ ಈ ಹೆದ್ದಾರಿ ಕಾಮಗಾರಿ ನಿಧಾನಗತಿಯಲ್ಲಿ ಸಾಗಿದೆ. ಇದರಿಂದ ಸಾಕಷ್ಟು ತೊಂದರೆ ಆಗುತ್ತಿದೆ ಎಂದು ಕಿಡಿಕಾರಿದರು.

ಪ್ರತಿನಿತ್ಯ ಶಾಲಾ ಮಕ್ಕಳು, ಹಿರಿಯ ನಾಗರಿಕರು, ನೌಕರರು, ವ್ಯಾಪಾರಸ್ಥರು ಸಂಚರಿಸುವ ರಸ್ತೆ ಇದಾಗಿದೆ. ಕಾಮಗಾರಿ ಅಲ್ಲಲ್ಲಿ ಅರೆಬರೆಯಾಗಿ ಮಾಡಿ, ಪೂರ್ಣಗೊಳಿಸದೇ ಇರುವುದರಿಂದಸಂಚಾರ ಮಾಡಲು ಭಯಪಡುವ ಪರಿಸ್ಥಿತಿ ನಿರ್ಮಾಣವಾಗಿದೆ. ವಿವಿಧ ನಗರ, ಪಟ್ಟಣ, ತಾಲೂಕು ಕೇಂದ್ರ ಸಂಪರ್ಕಿಸುವ ರಸ್ತೆ ಇದಾಗಿರುವುದರಿಂದ ವಾಹನಗಳ ಓಡಾಟ ಹೆಚ್ಚಾಗಿದೆ. ಆದರೆ, ಅಧಿಕಾರಿಗಳು ಕಾಮಗಾರಿಯನ್ನು ನಿಗದಿತ ಸಮಯಕ್ಕೆ ಮುಕ್ತಾಯಗೊಳಿಸಲು ಮುಂದಾಗದೇ ನಿರಾಸಕ್ತಿ ತೋರುತ್ತಿದ್ದಾರೆ. ಇದರಿಂದ ಇಲ್ಲಿ ಸಾವು-ನೋವು ಸಂಭವಿಸುತ್ತಲೇ ಇವೆ. ಈ ಹೆದ್ದಾರಿಯಲ್ಲಿ ವಾಹನ ಸವಾರರು, ಪಾದಚಾರಿಗಳಿಗೆ ಸುರಕ್ಷತೆ ಎನ್ನುವುದು ಇಲ್ಲವಾಗಿದೆ. ಹೀಗಾಗಿ ಕೂಡಲೇ ಸಂಬಂಧಪಟ್ಟವರು ಈ ಬಗ್ಗೆ ಗಮನ ಹರಿಸಿ, ಕಾಮಗಾರಿ ಪೂರ್ಣಗೊಳಿಸಬೇಕು. ಇಲ್ಲವಾದರೆ ಹೋರಾಟ ಇನ್ನಷ್ಟು ತೀವ್ರಗೊಳಿಸಬೇಕಾಗುತ್ತದೆ ಎಂದು ಪ್ರತಿಭಟನಾಕಾರರು ಎಚ್ಚರಿಸಿದರು.

ಪ್ರತಿಭಟನೆಯಲ್ಲಿ ಮುಖಂಡರಾದ ಕುತುಬುದ್ದೀನ್ ಖಾಜಿ, ಶ್ರೀನಿವಾಸ ಬಳ್ಳಾರಿ, ಡಾ.ಶೇಖರ ಮಾನೆ, ರವಿ ಕುಮಟಗಿ, ವಿರುಪಾಕ್ಷ ಅಮೃತಕರ, ಸಂಗನಗೌಡ ಗೌಡರ ಮತ್ತಿತರರು ಇದ್ದರು.ಮನವಿ ಸಲ್ಲಿಕೆ:

ಒಂದು ಗಂಟೆಗೂ ಹೆಚ್ಚು ಕಾಲ ಪ್ರತಿಭಟನಾ, ಬಹಿರಂಗ ಸಭೆ ನಡೆಸಿದ ಪ್ರತಿಭಟನಾಕಾರರು ಎನ್ಎಚ್ಎಐ ಅಧಿಕಾರಿಗಳಿಗೆ ಹಾಗೂ ಪರಿಷತ್ ಸದಸ್ಯ ಪಿ.ಎಚ್. ಪೂಜಾರ ಹಾಗೂ ಬಾಗಲಕೋಟೆ ಉಪ ವಿಭಾಗಾಕಾರಿ ಸಂತೋಷ ಜಗಲಾಸರ್ ಅವರಿಗೆ ಮನವಿ ಸಲ್ಲಿಸಿದರು.