ಬೇಡ್ತಿ ವರದಾ ನದಿ ಜೋಡಣೆಗೆ ಸಂಬಂಧಿಸಿದಂತೆ ಕೆಲವರು ಪರಿಸರ ಮತ್ತು ಜೀವ ವೈವಿಧ್ಯದ ಬಗ್ಗೆ ಪ್ರಶ್ನೆಗಳನ್ನು ಎತ್ತಿದ್ದು

​ಹಾವೇರಿ: ಬೇಡ್ತಿ ವರದಾ ನದಿ ಜೋಡಣೆ ಮಹತ್ವದ ಯೋಜನೆಯಾಗಿದೆ. ಆದಷ್ಟು ಬೇಗ ರಾಜ್ಯ ಸರ್ಕಾರ ಡಿಪಿಆರ್‌ ಮಾಡಿ ಯೋಜನೆ ಕಾರ್ಯಗತಗೊಳಿಸಬೇಕು ಎಂದು ಮಾಜಿ ಸಿಎಂ, ಸಂಸದ ಬಸವರಾಜ ಬೊಮ್ಮಾಯಿ ಆಗ್ರಹಿಸಿದರು.

ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಕುರಿತು ಚರ್ಚಿಸಲು ಸಮಯ ಕೋರಿ ಮುಖ್ಯಮಂತ್ರಿಗೆ ಪತ್ರ ಬರೆಯಲಾಗಿದೆ. ಆದರೆ ಈ ವರೆಗೆ ಸರ್ಕಾರದಿಂದ ಯಾವುದೇ ಸ್ಪಂದನೆ ಸಿಕ್ಕಿಲ್ಲ. ಸಿಎಂ ಡಿ.ಕೆ. ಶಿವಕುಮಾರ ಅವರಿಗೆ ಡಿಪಿಆರ್ ಮಾಡಿ ಯೋಜನೆ ಕಾರ್ಯಗತ ಮಾಡಲು ಅವಕಾಶವಿದ್ದು, ಅದು ಆಗದಿದ್ದರೆ ಹೋರಾಟ ಮಾಡಲು ನಾವು ಸಿದ್ಧ ಎಂದು ಹೇಳಿದರು.

ಬೇಡ್ತಿ ವರದಾ ನದಿ ಜೋಡಣೆಗೆ ಸಂಬಂಧಿಸಿದಂತೆ ಕೆಲವರು ಪರಿಸರ ಮತ್ತು ಜೀವ ವೈವಿಧ್ಯದ ಬಗ್ಗೆ ಪ್ರಶ್ನೆಗಳನ್ನು ಎತ್ತಿದ್ದು, ಅದಕ್ಕೆ ಸೀಮಿತವಾಗಿ ಉತ್ತರ ನೀಡಲಾಗಿದೆ. ಈ ಭಾಗದ ಜನರ ಬೇಡಿಕೆಗಳು, ಪರಿಸರ ಅಧ್ಯಯನ ಮತ್ತು ಬರ ಮುಂತಾದ ಎಲ್ಲ ಅಂಶಗಳನ್ನು ಅಧ್ಯಯನ ಮಾಡಿ ಡಿಪಿಆರ್ ಸಿದ್ಧಪಡಿಸಲಾಗುತ್ತಿದೆ ಎಂದು ಹೇಳಿದರು.

ಸಂಸದ ವಿಶ್ವೇಶ್ವರ ಹೆಗೆಡೆ ಕಾಗೇರಿ ಅವರಿಗೆ ಕೇಂದ್ರ ಜಲ ಶಕ್ತಿ ಸಚಿವ ಸಿ.ಆರ್. ಪಾಟೀಲ್ ಪತ್ರ ಬರೆದಿದ್ದು, ಪರಿಸರ ಹಾನಿ ಬಗ್ಗೆ ಅದರಲ್ಲಿ ಕೆಲವೊಂದಿಷ್ಟು ಪ್ರಶ್ನೆಗಳನ್ನು ಎತ್ತಿದ್ದಾರೆ. ಇದು ಇವತ್ತಿನ ಹೊಸ ಯೋಜನೆಯಲ್ಲ, 1980ರಲ್ಲೇ ನದಿ ಜೋಡಣೆಯ ಮೊದಲ ರಾಷ್ಟ್ರೀಯ ದೃಷ್ಟಿಕೋನದ ಯೋಜನೆ ಮಾಡಲಾಗಿತ್ತು. ಇದರಲ್ಲಿ ಹಿಮಾಲಯನ್ ಹಾಗೂ ಪೆನಿನ್ಸುಲರ್ ನದಿ ಬೇಸಿನ್ ಎಂದು ಎರಡು ವಿಭಾಗಗಳನ್ನು ಮಾಡಲಾಗಿದ್ದು, ಪೆನಿನ್ಸುಲರ್ ನದಿಗಳಲ್ಲಿ ಗೋದಾವರಿ, ಮಹಾನದಿ, ಕೃಷ್ಣಾ ಮತ್ತು ಕಾವೇರಿ ನದಿಗಳ ಜೋಡಣೆ ಬರುತ್ತದೆ. ಈ ನದಿ ಜೋಡಣೆಯ ಮೊದಲ ಹಂತದಲ್ಲೇ ವರದಾ ಬೇಡ್ತಿ ಜೋಡಣೆ ಬರುತ್ತದೆ ಎಂದು ಬಸವರಾಜ ಬೊಮ್ಮಾಯಿ ಸ್ಪಷ್ಟಪಡಿಸಿದರು.

ಡಿಪಿಆರ್ ಸಿದ್ಧಪಡಿಸುವಲ್ಲಿ ವಿಳಂಬ: ಈ ಯೋಜನೆಯ ಕಾರ್ಯ ಸಾಧ್ಯತೆ ವರದಿಯನ್ನು ಸಿಡಬ್ಲ್ಯುಸಿ ಒಪ್ಪಿಕೊಂಡಿದ್ದು, ಕಳೆದ ವರ್ಷವೇ ಕೇಂದ್ರ ಸರ್ಕಾರದೊಂದಿಗೆ ಎಂಒಯು ಮಾಡಿಕೊಳ್ಳಲಾಗಿದೆ. ಇಂದಿನ ಮುಖ್ಯಮಂತ್ರಿ ಹಾಗೂ ಆಗ ಡಿಸಿಎಂ ಮತ್ತು ನೀರಾವರಿ ಸಚಿವರಾಗಿದ ಡಿ.ಕೆ. ಶಿವಕುಮಾರ ನೇತೃತ್ವದಲ್ಲಿ, ಮ್ಯಾನೇಜಿಂಗ್ ಡೈರೆಕ್ಟರ್ ಕೆಎನ್‌ಎನ್‌ಎಲ್ ಚೀಫ್ ಎಂಜಿನಿಯರ್ ಎನ್‌ಡಬ್ಲ್ಯುಡಿಎ ಸೇರಿದಂತೆ ಇತರ ಅಧಿಕಾರಿಗಳ ಜತೆ ಡಿಪಿಆರ್ ಮಾಡಲು ಒಪ್ಪಂದ ಮಾಡಿಕೊಳ್ಳಲಾಗಿದೆ. ​ಡಿಪಿಆರ್‌ನಲ್ಲಿ ಕುಡಿಯುವ ನೀರು, ಕೃಷಿ ಬಳಕೆ ಮತ್ತು ನದಿ ನೀರಿನ ಪರಿಸರ ಮೇಲಿನ ಪರಿಣಾಮ, ನದಿಯಲ್ಲಿ ಎಷ್ಟು ನೀರಿದೆ, ಎಷ್ಟು ಅರಣ್ಯ ಪ್ರದೇಶ ಮುಳುಗಡೆಯಾಗುತ್ತದೆ ಎಂಬ ಸಂಪೂರ್ಣ ಅಂಶಗಳು ಇರಬೇಕು ಎಂದು ಹೇಳಿದರು.

​ಮಳೆಗಾಲದ ನೀರಿನ ಸಂಗ್ರಹ: ಬೇಡ್ತಿ ನದಿಯಲ್ಲಿ ನದಿಯಲ್ಲಿ ಕೇವಲ ಮಳೆಗಾಲದಲ್ಲಿ ಹಾಗೂ ಪ್ರವಾಹ ಸಂದರ್ಭದಲ್ಲಿ ಮಾತ್ರ ಶೇ. 10ರಷ್ಟು ನೀರನ್ನು ನಾವು ತೆಗೆದುಕೊಳ್ಳುತ್ತೇವೆ. ಶೇ. 90ರಷ್ಟು ನೀರು ಹಾಗೆಯೇ ಹರಿದುಹೋಗುತ್ತದೆ. ಪಂಪ್ ಹೌಸ್ ಮತ್ತು ಪೈಪ್‌ಗಳಿಗೆ ಮಾತ್ರ ಅಲ್ಲಿ ಭೂಮಿ ಬೇಕಿದೆ. ಡಿಪಿಆರ್ ಬಗ್ಗೆ ನಮ್ಮ ರಾಜ್ಯ ಸರ್ಕಾರ ಬಹಳಷ್ಟು ಆಸಕ್ತಿವಹಿಸಿದೆ. ಸಿಎಂ ಡಿ.ಕೆ. ಶಿವಕುಮಾರ ಅವರಿಗೆ ಒತ್ತಾಯ ಮಾಡುತ್ತೇನೆ. ಇದು ಬಹಳ ಪ್ರಮುಖವಾದ ಯೋಜನೆ. ತಮ್ಮ ಕಾಲದಲ್ಲಿ ಡಿಪಿಆರ್ ಆಗಿ ಕೆಲಸ ಶುರುವಾಗುವ ಅವಕಾಶವಿದೆ.‌ ಹೊಸ ತಂತ್ರಜ್ಞಾನ ಬಳಸಿ ಸರ್ವೇ ಮಾಡಿ, ಎಂಒಯು ಸಹಿ ಮಾಡಿದ್ದನ್ನು ಕಾರ್ಯಗತ ಮಾಡಬೇಕು. ಇದರಲ್ಲಿ ಬರಪೀಡಿತ ಉತ್ತರ ಕರ್ನಾಟಕ ಭಾಗದ ಜಿಲ್ಲೆಗಳ ಜನರ ಭವಿಷ್ಯ ಅಡಗಿದೆ. ನಮ್ಮ ಜಿಲ್ಲೆಗೆ ಬೇಕಾಗುವ ನೀರನ್ನು ಸಂಗ್ರಹಿಸಲು ಜಿಲ್ಲೆಯಲ್ಲೇ ಜಲಾಶಯ ನಿರ್ಮಿಸುವುದನ್ನು ಡಿಪಿಆರ್‌ನಲ್ಲಿ ಸೇರಿಸಬೇಕಿದೆ. ಅದಕ್ಕಾಗಿ ಆದಷ್ಟು ಬೇಗ ಡಿಪಿಆರ್‌ ಮಾಡಬೇಕು. ಆಗದಿದ್ದರೆ ಹೋರಾಟ ಮಾಡಲು ನಾವು ಸಿದ್ದ. ಹಾವೇರಿಯ ಹುಕ್ಕೇರಿ ಮಠದ ಶ್ರೀಗಳ ನೇತೃತ್ವದಲ್ಲಿ ಒಂದು ಸಮಿತಿ ರಚನೆಯಾಗಿದೆ. ಅದಕ್ಕಾಗಿ ಎಲ್ಲರೂ ಸೇರಿ ಒಂದೇ ಹೋರಾಟ ಸಮಿತಿ ಮಾಡೋಣ. ಮುಂದಿನ ದಿನಗಳಲ್ಲಿ ದೊಡ್ಡ ಪ್ರಮಾಣದಲ್ಲಿ ಆಂದೋಲನ ಮಾಡುತ್ತೇವೆ. ಯಾರೇ ನೇತೃತ್ವ ವಹಿಸಿದರೂ ನಾನು ಭಾಗಿಯಾಗುತ್ತೇನೆ ಎಂದು ಹೇಳಿದರು.

ಯೋಜನೆಯ ಡಿಪಿಆರ್ ಮಾಡಲು ತಡವಾಗುತ್ತಿರುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿರುವ ಅವರು, ಸರ್ವೇ ಮಾಡಲು ಸ್ಥಳೀಯರಿಂದ ವಿರೋಧ ವ್ಯಕ್ತವಾಗುತ್ತಿದೆ. ಆದರೆ, ಈಗ ಡ್ರೋನ್ ಸೇರಿದಂತೆ ಹೊಸ ತಂತ್ರಜ್ಞಾನವನ್ನು ಬಳಸಿ ಸರ್ವೆ ನಡೆಸಿ, ಅತಿ ಬೇಗದಲ್ಲಿ ಡಿಪಿಆರ್ ಅನ್ನು ಮಾಡಬೇಕು ಎಂದು ಒತ್ತಾಯಿಸಿದರು.