ತೇಗನಹಳ್ಳಿ ಚಿಕ್ಕಕೆರೆ ಖಾಸಗಿ ವ್ಯಕ್ತಿಯಿಂದ ಅತಿಕ್ರಮಣ ತೆರವಿಗೆ ಆಗ್ರಹ

| Published : Oct 02 2024, 01:05 AM IST / Updated: Oct 02 2024, 01:06 AM IST

ಸಾರಾಂಶ

ಕೆ.ಆರ್.ಪೇಟೆ ತಾಲೂಕಿನ ಹಿರೀಕಳಲೆ ಗ್ರಾಪಂ ವ್ಯಾಪ್ತಿಗೆ ಸೇರಿದ ತೇಗನಹಳ್ಳಿ ಸರ್ವೆ ನಂ.77 ರ ಗೋಮಾಳದಲ್ಲಿ ಚಿಕ್ಕಕೆರೆ ನೀರಾವರಿ ಇಲಾಖೆ ವ್ಯಾಪ್ತಿಗೆ ಸೇರಿದೆ. ಈ ಕೆರೆಯನ್ನು ಗ್ರಾಮಸ್ಥರು ದನಕರುಗಳ ಕುಡಿಯುವ ನೀರಿಗೆ, ಬಟ್ಟೆ ತೊಳೆಯುವುದು ಮತ್ತಿತರ ದೈನಂದಿನ ಬಳಕೆಗೆ ಉಪಯೋಗಿಸುತ್ತಿದ್ದರು.

ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ

ಖಾಸಗಿ ವ್ಯಕ್ತಿ ಅತಿಕ್ರಮಿಸಿಕೊಂಡಿರುವ ತೇಗನಹಳ್ಳಿ ಚಿಕ್ಕಕೆರೆ (ಕಾಳೇಗೌಡನ ಕಟ್ಟೆ)ಯನ್ನು ತೆರವುಗೊಳಿಸಿ ಸಾರ್ವಜನಿಕರ ಮುಕ್ತ ಪ್ರವೇಶಕ್ಕೆ ಅವಕಾಶ ಕಲ್ಪಿಸಿವಂತೆ ತಾಲೂಕು ರೈತಸಂಘ ಒತ್ತಾಯಿಸಿದೆ.

ಜಿಲ್ಲಾ ರೈತ ಸಂಘದ ಮಾಜಿ ಅಧ್ಯಕ್ಷ ಎಂ.ವಿ.ರಾಜೇಗೌಡ ನೇತೃತ್ವದಲ್ಲಿ ಪಟ್ಟಣದ ತಾಲೂಕು ಆಡಳಿತ ಸೌಧಕ್ಕೆ ಆಗಮಿಸಿದ ರೈತ ಹೋರಾಟಗಾರರು ತಹಸೀಲ್ದಾರ್ ಎಸ್.ಯು.ಅಶೋಕ್ ಅವರಿಗೆ ನೀಡಿ ಕೆರೆ ಒತ್ತುವರಿ ತೆರವಿಗೆ ಒತ್ತಾಯಿಸಿದರು.

ಈ ವೇಳೆ ಎಂ.ವಿ.ರಾಜೇಗೌಡ ಮಾತನಾಡಿ, ತಾಲೂಕಿನ ಹಿರೀಕಳಲೆ ಗ್ರಾಪಂ ವ್ಯಾಪ್ತಿಗೆ ಸೇರಿದ ತೇಗನಹಳ್ಳಿ ಸರ್ವೆ ನಂ.77 ರ ಗೋಮಾಳದಲ್ಲಿ ಚಿಕ್ಕಕೆರೆ ನೀರಾವರಿ ಇಲಾಖೆ ವ್ಯಾಪ್ತಿಗೆ ಸೇರಿದೆ. ಈ ಕೆರೆಯನ್ನು ಗ್ರಾಮಸ್ಥರು ದನಕರುಗಳ ಕುಡಿಯುವ ನೀರಿಗೆ, ಬಟ್ಟೆ ತೊಳೆಯುವುದು ಮತ್ತಿತರ ದೈನಂದಿನ ಬಳಕೆಗೆ ಉಪಯೋಗಿಸುತ್ತಿದ್ದರು ಎಂದರು.

ಕಳೆದ ಒಂದು ದಶಕದಿಂದ ಸದರಿ ಕೆರೆಯನ್ನು ರಾಜ್ಯದ ಪ್ರಭಾವಿ ಗುತ್ತಿಗೆದಾರರಾದ ಪುರ ಗ್ರಾಮದ ಪಿ.ಕೆ.ಶಿವರಾಮು ಮತ್ತು ಅವರ ಸಹೋದರ ಪಿ.ಕೆ.ಜಯಕೃಷ್ಣ ಕುಟುಂಬದವರು ಅತಿಕ್ರಮಿಸಿ ಸಂಪೂರ್ಣ ಕೆರೆಯನ್ನು ತಮ್ಮ ಸುಪರ್ಧಿಗೆ ತೆಗೆದುಕೊಂಡು ಸದರಿ ಕೆರೆಗೆ ಗ್ರಾಮಸ್ಥರ ಪ್ರವೇಶವನ್ನು ನಿರ್ಬಂಧಿಸಿದ್ದಾರೆ. ಸದರಿ ಕೆರೆಯಲ್ಲಿ ರೆಸಾರ್ಟ್ ಮಾದರಿಯ ಕಟ್ಟಡ ನಿರ್ಮಿಸಿಕೊಂಡು ಬೋಟಿಂಗ್ ವ್ಯವಸ್ಥೆ ಹಾಗೂ ಮೀನುಗಾರಿಕೆ ಮತ್ತಿತರ ಚಟುವಟಿಕೆಗಳನ್ನು ನಡೆಸುತ್ತಿದ್ದಾರೆ ಎಂದು ದೂರಿದರು.

ಸಾರ್ವಜನಿಕರ ತೆರಿಗೆ ಹಣದಿಂದ ಅಭಿವೃದ್ದಿಪಡಿಸಿರುವ ಸಾರ್ವಜನಿಕ ಕೆರೆಯನ್ನು ಗುತ್ತಿಗೆದಾರನ ಕುಟುಂಬದವರು ಅತಿಕ್ರಮಿಸಿ ಕೊಂಡಿದ್ದಾರೆ. ಸಾರ್ವಜನಿಕ ಕೆರೆಗೆ ಸಾರ್ವಜನಿಕರು ಬರದಂತೆ ತಂತಿಬೇಲಿ ಹಾಕಿಕೊಂಡಿದ್ದರೂ ನೀರಾವರಿ ಇಲಾಖೆ ಅತಿಕ್ರಮಿತ ಕೆರೆಯನ್ನು ತೆರವುಗೊಳಿಸುವ ಕಾರ್ಯಕ್ಕೆ ಇದುವರೆಗೂ ಮುಂದಾಗಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ತಾಲೂಕು ಆಡಳಿತ ತಕ್ಷಣವೇ ಅತಿಕ್ರಮಿತ ಕೆರೆಯನ್ನು ಸಾರ್ವಜನಿಕರಿಗೆ ಮುಕ್ತಗೊಳಿಸದಿದ್ದರೆ ತಾಲೂಕು ಆಡಳಿತ ಸೌಧದ ಎದುರು ಆಹೋರಾತ್ರಿ ಚಳವಳಿ ಹಮ್ಮಿಕೊಳ್ಳುವುದಾಗಿ ಎಚ್ಚರಿಸಿ ಮನವಿ ಸಲ್ಲಿಸಿದರು. ಮನವಿ ಆಲಿಸಿದ ಎಸ್.ಯು.ಅಶೋಕ್ ನಾನು ಕಳೆದ 15 ದಿನಗಳ ಹಿಂದೆ ತಹಸೀಲ್ದಾರ್ ಆಗಿ ಇಲ್ಲಿಗೆ ಬಂದಿದ್ದೇನೆ. ಶೀಘ್ರ ಸ್ಥಳ ಪರಿಶೀಲನೆ ನಡೆಸಿ ಅತಿಕ್ರಮಿತ ಕೆರೆ ತೆರವಿಗೆ ಕ್ರಮ ವಹಿಸುವುದಾಗಿ ಭರವಸೆ ನೀಡಿದರು.

ಈ ವೇಳೆ ಜಿಲ್ಲಾ ರೈತಸಂಘದ ಉಪಾಧ್ಯಕ್ಷ ಮರುವನಹಳ್ಳಿ ಶಂಕರ್, ರೈತ ಮುಖಂಡರಾದ ಎಲ್.ಬಿ.ಜಗದೀಶ್, ಕರೋಟಿ ತಮ್ಮಯ್ಯ, ಕೃಷ್ಣಾಪುರ ರಾಜಣ್ಣ, ಸಮಾಜಿಕ ಹೋರಾಟಗಾರ ಜಯಣ್ಣ ಸೇರಿದಂತೆ ಹಲವರಿದ್ದರು.