ಬೀದಿಯಲ್ಲಿ ಮಾರುವವರ ಕಲ್ಯಾಣ ಮಂಡಳಿ ಸ್ಥಾಪನೆಗೆ ಒತ್ತಾಯ

| Published : Apr 28 2025, 12:49 AM IST

ಸಾರಾಂಶ

ಕಟ್ಟಡ ಕಾರ್ಮಿಕರ ಮಾದರಿಯಲ್ಲಿ ರಾಜ್ಯದ ಬೀದಿಬದಿ ವ್ಯಾಪಾರಸ್ಥರ ಕಲ್ಯಾಣ ಮಂಡಳಿ ಸ್ಥಾಪಿಸುವುದೂ ಸೇರಿದಂತೆ ಅನೇಕ ಹಕ್ಕೊತ್ತಾಯಗಳನ್ನು ಕರ್ನಾಟಕ ರಾಜ್ಯ ಬೀದಿಬದಿ ವ್ಯಾಪಾರಸ್ಥರ ಸಂಘದ ವಿಭಾಗೀಯ ಮಟ್ಟದ ಆಗ್ರಹ ಸಮಾವೇಶದಲ್ಲಿ ಸರ್ಕಾರಕ್ಕೆ ಒತ್ತಾಯಿಸಲಾಯಿತು.

ರಾಜ್ಯ ಬೀದಿಬದಿ ವ್ಯಾಪಾರಸ್ಥರ ಸಂಘದಿಂದ ಆಯೋಜನೆ । ಕೇಂದ್ರದ ಕಾಯ್ದೆ ಬಲಗೊಳಿಸಿ, ಜಾರಿಗೆ ಒತ್ತಾಯ

ಕನ್ನಡಪ್ರಭ ವಾರ್ತೆ ದಾವಣಗೆರೆ

ಕಟ್ಟಡ ಕಾರ್ಮಿಕರ ಮಾದರಿಯಲ್ಲಿ ರಾಜ್ಯದ ಬೀದಿಬದಿ ವ್ಯಾಪಾರಸ್ಥರ ಕಲ್ಯಾಣ ಮಂಡಳಿ ಸ್ಥಾಪಿಸುವುದೂ ಸೇರಿದಂತೆ ಅನೇಕ ಹಕ್ಕೊತ್ತಾಯಗಳನ್ನು ಕರ್ನಾಟಕ ರಾಜ್ಯ ಬೀದಿಬದಿ ವ್ಯಾಪಾರಸ್ಥರ ಸಂಘದ ವಿಭಾಗೀಯ ಮಟ್ಟದ ಆಗ್ರಹ ಸಮಾವೇಶದಲ್ಲಿ ಸರ್ಕಾರಕ್ಕೆ ಒತ್ತಾಯಿಸಲಾಯಿತು.

ನಗರದ ಕೆಆರ್ ಮಾರುಕಟ್ಟೆಯಲ್ಲಿ ಶನಿವಾರ ಸಂಘದ ಆಗ್ರಹ ಸಮಾವೇಶದಲ್ಲಿ ಬೀದಿಬದಿ ವ್ಯಾಪಾರಸ್ಥರ ಕಲ್ಯಾಣ ಮಂಡಳಿ ಸ್ಥಾಪಿಸಬೇಕು, ಬೀದಿಬದಿ ವ್ಯಾಪಾರಸ್ಥರ ಜೀವನೋಪಾಯ ಸಂರಕ್ಷಣೆ, ನಿಯಂತ್ರಣ ಹಾಗೂ ಪರವಾನಗಿ ಕಾಯ್ದೆ ರದ್ಧುಪಡಿಸಿ, 2014ರಲ್ಲಿ ಕೇಂದ್ರ ಸರ್ಕಾರ ಜಾರಿಗೊಳಿಸಿದ್ದ ಬೀದಿಬದಿ ವ್ಯಾಪಾರಸ್ಥರ ಜೀವನೋಪಾಯ ಸಂರಕ್ಷಣೆ ಹಾಗೂ ನಿಯಂತ್ರಣ ಕಾಯ್ದೆಯನ್ನು ಬೀದಿಬದಿ ವ್ಯಾಪಾರಸ್ಥರ ಪರವಾಗಿ ಬಲಗೊಳಿಸಿ, ಜಾರಿಗೊಳಿಸುವಂತೆ ಆಗ್ರಹಿಸಲಾಯಿತು.

ಸಮಾವೇಶ ಉದ್ಘಾಟಿಸಿದ ವಿಪ ಸದಸ್ಯ ಕೆ.ಅಬ್ದುಲ್ ಜಬ್ಬಾರ್ ಮಾತನಾಡಿ, ಕಷ್ಟ ಜೀವಿಗಳಾದ ಬೀದಿಬದಿ ವ್ಯಾಪಾರಸ್ಥರ ನ್ಯಾಯಯುತ ಬೇಡಿಕೆಗಳನ್ನು ಸರ್ಕಾರದ ಗಮನಕ್ಕೆ ತರಲಾಗುವುದು. ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಸಂಬಂಧಿಸಿದ ಸಚಿವರೊಂದಿಗೆ ಚರ್ಚಿಸಿ, ವ್ಯಾಪಾರಿಗಳ ಬೇಡಿಕೆಗಳ ಈಡೇರಿಕೆಗೆ ಸರ್ಕಾರದ ಮಟ್ಟದಲ್ಲಿ ಪ್ರಾಮಾಣಿಕವಾಗಿ ಶ್ರಮಿಸುವೆ ಎಂದು ಭರವಸೆ ನೀಡಿದರು.

ಸಂಘದ ಅಧ್ಯಕ್ಷ ಎಸ್.ಇಸ್ಮಾಯಿಲ್ ಮಾತನಾಡಿ, ಮಳೆ, ಗಾಳಿ, ಬಿಸಿಲಿ, ಚಳಿಯನ್ನೂ ಲೆಕ್ಕಿಸದೇ ಜನರ ಮನೆ ಬಾಗಿಲಿಗೆ ಹಣ್ಣು, ಸೊಪ್ಪು, ತರರಾರಿ ತಲುಪಿಸುವ ಕಾಯಕ ಮಾಡುವ ಬೀದಿಬದಿ ವ್ಯಾಪಾರಸ್ಥರು ಹೊಟ್ಟೆಪಾಡಿನ ಜೊತೆಗೆ ಸಮಾಜ ಸೇವೆಯನ್ನೂ ಮಾಡುತ್ತಿದ್ದಾರೆ. ಆಳುವ ಸರ್ಕಾರಗಳು ಬೀದಿ ಬದಿ ವ್ಯಾಪಾರಸ್ಥರನ್ನು ನಿರ್ಲಕ್ಷಿಸಿಕೊಂಡೇ ಬಂದಿವೆ. ವ್ಯಾಪಾರಸ್ಥರಿಗೆ ಯಾವುದೇ ಸೌಲಭ್ಯ ಕಲ್ಪಿಸಿಲ್ಲ. ದುಡಿಯುವ ನಾಲ್ಕಾರು ಕಾಸಿಗೆ ಸಂಬಂಧಿಸಿದ ಅಧಿಕಾರಿಗಳು, ಸಿಬ್ಬಂದಿಯಿಂದಲೂ ಎಲ್ಲಿಲ್ಲದ ತೊಂದರೆ ಅನುಭವಿಸುವ ಸ್ಥಿತಿ ಇದೆ ಎಂದು ಅಳಲು ತೋಡಿಕೊಂಡರು.

ಕಾಂಗ್ರೆಸ್ ಹಿರಿಯ ಮುಖಂಡ ಎಂ.ಟಿ.ಸುಭಾಶ್ಚಂದ್ರ ಮಾತನಾಡಿ, ಸರ್ಕಾರಗಳು ಬರುತ್ತವೆ, ಹೋಗುತ್ತವೆ. ಆದರೆ, ಎಲ್ಲಾ ಸಮಸ್ಯೆಗಳನ್ನೂ ಸರ್ಕಾರವೇ ಪರಿಹರಿಸುತ್ತದೆಂಬ ಭ್ರಮೆಯೂ ಬೇಡ. ಸಾಲ ಮಾಡಿ, ಆಡಳಿತ ನಡೆಸುವ ಸರ್ಕಾರಗಳೇ ಬೀದಿಗೆ ಬಿದ್ದಿವೆ. ಸಮಸ್ಯೆಗಳು ಪರಿಹಾರವಾಗಬೇಕೆಂದರೆ ಹೋರಾಟ ಅಗತ್ಯ ಎಂದರು.

ಸಂಘದ ಸಲಹೆಗಾರ ಮಂಜುನಾಥ ಕೈದಾಳೆ ಮಾತನಾಡಿ, ಬೀದಿಬದಿ ವ್ಯಾಪಾರಸ್ಥರಿಗೆ ಸ್ಮಾರ್ಟ್ ಕಾರ್ಡ್ ಗುರುತಿನ ಚೀಟಿಗಳನ್ನು ಒದಗಿಸಬೇಕು. ಇಎಸ್ಐ ಮಾದರಿಯ ಆರೋಗ್ಯ ವಿಮೆ, 60 ವರ್ಷ ಪೂರೈಸಿದ ವ್ಯಾಪಾರಸ್ಥರಿಗೆ ಪಿಂಚಣಿ ಸೌಲಭ್ಯ ಕಲ್ಪಿಸಬೇಕು. ವ್ಯಾಪಾರಸ್ಥರಿಗೆ ಅನುಕೂಲವಾಗುವಂತೆ ಶಾಶ್ವತ ಮೇಲಾವಣಿಯ ವ್ಯವಸ್ಥೆ, ಮೂಲಭೂತ ಸೌಕರ್ಯವನ್ನು ಒದಗಿಸಬೇಕು ಎಂದು ಒತ್ತಾಯಿಸಿದರು.

ಮಾನವ ಬಂಧುತ್ವ ವೇದಿಕೆ ರಾಜ್ಯ ಸಂಚಾಲಕ ಪ್ರೊ.ಎ.ಬಿ.ರಾಮಚಂದ್ರಪ್ಪ, ಜಿಲ್ಲಾ ಕಾರ್ಮಿಕ ಅಧಿಕಾರಿ ಇಬ್ರಾಹಿಂ ಸಾಬ್, ಪಾಲಿಕೆಯ ವಿರೂಪಾಕ್ಷ ಗೌಡ್ರು, ವೇಣುಗೋಪಾಲ, ಮುಖಂಡರಾದ ಬಾಬುರಾವ್ ಸಾಳಂಕಿ, ಮಹಮದ್ ಸಿರಾಜ್, ಕೆ.ಸಿ.ಗುರುರಾಜ, ಜಾವೀದ್, ಅನ್ವರ್, ಮಹಮದ್ ಗೌಸ್ ಇತರರು ಇದ್ದರು. ಎಸ್.ಕೆ.ರೆಹಮತ್‌ವುಲ್ಲಾ, ಪಿ.ಶಂಕರ, ಕೆ.ಭಾರತಿ ಕಾರ್ಯಕ್ರಮ ನಡೆಸಿಕೊಟ್ಟರು.