ಹಾನಗಲ್ಲ ಪಟ್ಟಣದಲ್ಲಿ ನಡೆದ ಪ್ರಜಾಸೇವೆ ಆಂದೋಲನದಲ್ಲಿ ಪ್ರಸಕ್ತ ಸಕ್ಕರೆ ದರದ ಆಧಾರದ ಮೇಲೆ ಕಬ್ಬಿಗೆ ದರ ನಿಗದಿ ಮಾಡುವಂತೆ ಒತ್ತಾಯಿಸಿ ಸಚಿವ ರುದ್ರಪ್ಪ ಲಮಾಣಿಗೆ ಜಿಲ್ಲಾ ಕಬ್ಬು ಬೆಳೆಗಾರರ ಸಂಘದ ರೈತ ಮುಖಂಡರು ಮನವಿ ಸಲ್ಲಿಸಿದರು.
ಹಾನಗಲ್ಲ: ಮಾರುಕಟ್ಟೆಯಲ್ಲಿನ ಸಕ್ಕರೆ ಬೆಲೆ ಆಧಾರದ ಮೇಲೆ ಕಬ್ಬಿಗೆ ದರ ನಿಗದಿ ಮಾಡುವಂತೆ ಒತ್ತಾಯಿಸಿ ಜಿಲ್ಲಾ ಕಬ್ಬು ಬೆಳೆಗಾರರ ಸಂಘದ ರೈತ ಮುಖಂಡರು ಶನಿವಾರ ಸಕ್ಕರೆ, ಜವಳಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ರುದ್ರಪ್ಪ ಲಮಾಣಿ ಅವರಿಗೆ ಮನವಿ ಸಲ್ಲಿಸಿದರು.
ಜಿಲ್ಲೆಯ ಹಾನಗಲ್ಲ ಪಟ್ಟಣದ ಕುಮಾರೇಶ್ವರ ಮಠದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಪ್ರಜಾಸೇವೆ ಆಂದೋಲನ ಕಾರ್ಯಕ್ರಮದಲ್ಲಿ ಸಚಿವರಿಗೆ ಮನವಿ ಸಲ್ಲಿಸಿ ಮಾತನಾಡಿದ ಜಿಲ್ಲಾ ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ರಾಜಶೇಖರ ಬೆಟಗೇರಿ, 2026-27ನೇ ಸಾಲಿನಲ್ಲಿ ಸಕ್ಕರೆ ದರ ದುಪ್ಪಟ್ಟಾಗಿದ್ದು, ಸಕ್ಕರೆ ದರದ ಆಧಾರದ ಮೇಲೆ ಕಬ್ಬಿಗೆ ದರ ನಿಗದಿ ಮಾಡಬೇಕು. 2025-26ನೇ ಸಾಲಿನಲ್ಲಿ ಬಾಕಿ ಇರುವ ಕಬ್ಬಿನ ಬಿಲ್‌ನ್ನು ಒಂದೇ ಕಂತಿನಲ್ಲಿ ಸಂಪೂರ್ಣವಾಗಿ ಹಣ ಜಮೆ ಮಾಡುವಂತೆ ಸಕ್ಕರೆ ಕಾರ್ಖಾನೆಗಳಿಗೆ ನಿರ್ದೇಶನ ನೀಡಬೇಕೆಂದು ಒತ್ತಾಯಿಸಿದರು.ಪ್ರಸ್ತುತ ಸಕ್ಕರೆ ದರದ ಆಧಾರದ ಮೇಲೆ ಕಬ್ಬಿಗೆ ದರ ನಿಗದಿ ಮಾಡಿಯೇ ಸಂಗೂರು ಸಕ್ಕರೆ ಕಾರ್ಖಾನೆಯನ್ನು ಪ್ರಾರಂಭಿಸಬೇಕು. ಕಾರ್ಖಾನೆ ಆರಂಭಕ್ಕೂ ಮುನ್ನ ಜಿಲ್ಲೆಯಲ್ಲಿರುವ ಎಲ್ಲಾ ರೈತ ಸಂಘಟನೆಗಳ ಸಭೆ ಕರೆದು, ಚರ್ಚೆ ನಡೆಸುವ ಮೂಲಕ ದರ ನಿಗದಿ ಮಾಡಿ ಖಾತರಿಪಡಿಸಬೇಕು. ಈಗ ಸಕ್ಕರೆ ದರ ಹೆಚ್ಚಿರುವ ಕಾರಣ ಪ್ರತಿ ಟನ್ ಕಬ್ಬಿಗೆ ಕನಿಷ್ಠ 5,500 ರು. ದರವನ್ನು ನಿಗದಿ ಮಾಡಬೇಕು. ಕಾರ್ಖಾನೆಯವರು ರಿಕವರಿಯಲ್ಲಿ ಕಡಿಮೆ ತೋರಿಸಿ ರೈತರಿಗೆ ಅನ್ಯಾಯ ಮಾಡುತ್ತಿದ್ದಾರೆ. ಇದನ್ನು ಸಂಪೂರ್ಣವಾಗಿ ತಡೆಗಟ್ಟುವ ಮೂಲಕ ರೈತರಿಗೆ ಆಗುತ್ತಿರುವ ಅನ್ಯಾಯ ಸರಿಪಡಿಸಬೇಕು ಎಂದು ಆಗ್ರಹಿಸಿದರು.
ಕಬ್ಬು ಬೆಳೆಗಾರರ ಸಂಘದ ಪ್ರಧಾನ ಕಾರ್ಯದರ್ಶಿ ಮಂಜುನಾಥ ಅಸುಂಡಿ ಮಾತನಾಡಿ, ಕಬ್ಬು ಬೆಳೆಗಾರರಿಗೆ ಆಗುತ್ತಿರುವ ಮೋಸವನ್ನು ತಡೆಯಬೇಕಾದರೆ ಸಂಗೂರು ಸಕ್ಕರೆ ಕಾರ್ಖಾನೆಯಲ್ಲಿ ಸರ್ಕಾರದಿಂದ ಒಂದು ರಿಕವರಿ ಲ್ಯಾಬ್‌ನ್ನು ಸ್ಥಾಪನೆ ಮಾಡಬೇಕು. ವಿಶೇಷವಾಗಿ ಸಂಗೂರು ಸಕ್ಕರೆ ಕಾರ್ಖಾನೆ ವ್ಯಾಪ್ತಿಯ ಕಬ್ಬನ್ನು ಭೈರನಪಾದದಲ್ಲಿರುವ ಜಿಎಂ ಯೂನಿಟ್-2ಗೆ ಯಾವುದೇ ಕಾರಣಕ್ಕೂ ಸರಬರಾಜು ಮಾಡಬಾರದು. ಸಂಗೂರು ಕಾರ್ಖಾನೆ ವ್ಯಾಪ್ತಿಯ ಕಬ್ಬನ್ನು ಇದೆ ಕಾರ್ಖಾನೆಗೆ ಸರಬರಾಜು ಮಾಡಲು ಕ್ರಮಕೈಗೊಳ್ಳುವಂತೆ ಒತ್ತಾಯಿಸಿದರು.ಮನವಿ ಸ್ವೀಕರಿಸಿದ ಬಳಿಕ ಪ್ರತಿಕ್ರಿಯಿಸಿದ ಸಚಿವ ರುದ್ರಪ್ಪ ಲಮಾಣಿ, ಶಾಸಕ ಶ್ರೀನಿವಾಸ ಮಾನೆ, ಜಿಲ್ಲಾಧಿಕಾರಿ ಡಾ.ವಿಜಯಮಹಾಂತೇಶ ದಾನಮ್ಮನವರ, ರೈತರಿಗೆ ಅನುಕೂಲವಾಗುವಂತೆ ಕಾರ್ಖಾನೆ ಗುತ್ತಿಗೆದಾರರ ಸಮಕ್ಷಮ ಸಭೆಯನ್ನು ನಡೆಸಿ, ಸೂಕ್ತ ನಿರ್ಧಾರಗಳನ್ನು ತೆಗೆದುಕೊಳ್ಳಲಾಗುವುದು ಎಂದು ಭರವಸೆ ನೀಡಿದರು.
ಈ ವೇಳೆ ಕಬ್ಬು ಬೆಳೆಗಾರ ರೈತ ಮುಖಂಡರಾದ ಚಂದ್ರಗೌಡ ಗಡಿಯಪ್ಪಗೌಡ್ರö, ಪ್ರಕಾಶ ಭಾಗಣ್ಣನವರ, ಮಲ್ಲಪ್ಪ ಬೆಣಗೇರಿ ಸೇರಿದಂತೆ ಇತರರು ಇದ್ದರು.