ಅಂಗನವಾಡಿ ಕಾರ್ಯಕರ್ತೆಯರ ಬೇಡಿಕೆ ಈಡೇರಿಕೆಗೆ ಆಗ್ರಹ

| Published : Dec 29 2024, 01:18 AM IST

ಸಾರಾಂಶ

ಅಂಗವಾಡಿ ಕಾರ್ಯಕರ್ತೆ ಮತ್ತು ಸಹಾಯಕಿಯರಿಗೆ ಗುಣಮಟ್ಟದ ಸಮವಸ್ತ್ರ ನೀಡಿಲ್ಲ, ಕಳಪೆ ಸೀರೆಗಳನ್ನು ಪ್ರತಿದಿನ ಕೇಂದ್ರದಲ್ಲಿ ಮತ್ತು ಮಾಸಿಕ ಸಭೆಗಳಲ್ಲಿ ಕಡ್ಡಾಯವಾಗಿ ಧರಿಸಬೇಕೆಂದು ತಿಳಿಸಿದ್ದಾರೆ, ಗ್ಯಾಸ್ ಒಲೆ ಹಾಗೂ ಸಿಲಿಂಡರ್ ನೀಡಿ ಸುಮಾರು ವರ್ಷವಾಗಿದ್ದು ಎಲ್ಲಾ ಹಾಳಾಗಿವೆ. ಮಕ್ಕಳಿಗೆ ಅನಾಹುತವಾದಲ್ಲಿ ಜವಾಬ್ದಾರರಾರು ಎಂದು ಪ್ರಶ್ನಿಸಿದರು.

ಕನ್ನಡಪ್ರಭ ವಾರ್ತೆ ಕೋಲಾರ

ಗುಜರಾತ್ ಹೈಕೋರ್ಟ್ ತೀರ್ಪಿನಂತೆ ಅಂಗನವಾಡಿ ಕಾರ್ಯಕರ್ತೆಯರು, ಸಹಾಯಕಿಯರನ್ನು ವರ್ಗ ೩ ಮತ್ತು ೪ ಎಂದು ಪರಿಗಣಿಸಿ ಕಾಯಂ ಮಾಡಬೇಕು, ಕೂಡಲೇ ಗ್ರಾಚ್ಯುಟಿ ಹಣ ಬಿಡುಗಡೆ ಮಾಡಬೇಕು ಎಂದು ಕರ್ನಾಟಕ ರಾಜ್ಯ ಅಂಗನವಾಡಿ ಕಾರ್ಯಕರ್ತೆಯರ ಮಹಾಮಂಡಳಿ ರಾಜ್ಯಾಧ್ಯಕ್ಷ ಜಿ.ಆರ್.ಶಿವಶಂಕರ್ ಆಗ್ರಹಿಸಿದರು.

ನಗರದ ಪತ್ರಕರ್ತರ ಭವನದಲ್ಲಿ ಕರ್ನಾಟಕ ರಾಜ್ಯ ಅಂಗನವಾಡಿ ಕಾರ್ಯಕರ್ತೆಯರ ಮಹಾಮಂಡಳಿ ಜಿಲ್ಲಾಮಟ್ಟದ ಸಭೆಯಲ್ಲಿ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಿ, ಅವರು ಮಾತನಾಡಿದರು.

೨೦೧೮ರಿಂದ ಕೇಂದ್ರ ಸರ್ಕಾರ ಯಾವುದೇ ಗೌರವಧನ ಹೆಚ್ಚಳ ಮಾಡಿಲ್ಲವಾದ್ದರಿಂದ ಸರ್ಕಾರವು ೨೬ ಸಾವಿರ ರು.ಗಳಿಗೆ ಅಂಗನವಾಡಿ ಕಾರ್ಯಕರ್ತೆಯರ ಗೌರವಧನ ಹೆಚ್ಚಿಸಬೇಕು. ಜಿಲ್ಲೆಯಲ್ಲಿ ಅಂಗನವಾಡಿ ಕಾರ್ಯಕರ್ತೆ ಮತ್ತು ಸಹಾಯಕಿಯರು ಮರಣ ಹೊಂದಿದಾಗ ಅಂತ್ಯಸಂಸ್ಕಾರಕ್ಕೆ ೧೦ ಸಾವಿರ ರು.ಗಳನ್ನು ನೀಡಬೇಕೆಂದು ಸರ್ಕಾರಕ್ಕೆ ಸುಮಾರು ಬಾರಿ ಮನವಿ ಸಲ್ಲಿಸಿದರೂ ಇದುವರೆಗೆ ನೀಡಿರುವುದಿಲ್ಲ, ಜಿಲ್ಲೆಯಲ್ಲಿ ಅಂಗನವಾಡಿ ಸಹಾಯಕಿ ಸ್ಥಾನಗಳು ತೆರವಾಗಿದ್ದು, ಒಂದೂವರೆ ವರ್ಷವಾದರೂ ಇನ್ನು ಆಯ್ಕೆಯಾಗಿರುವುದಿಲ್ಲ, ಕಾರ್ಯಕರ್ತೆಯರಿಗೆ ಹೆಚ್ಚಿನ ಹೊರೆಯಾಗಿದೆ, ಜಿಲ್ಲೆಯಲ್ಲಿ ಒಂದು ವರ್ಷದಿಂದ ಅಂಗನವಾಡಿ ಕೇಂದ್ರಗಳಿಗೆ ಅಡುಗೆ ಅನಿಲದ ಹಣವನ್ನೂ ಬಿಡುಗಡೆ ಮಾಡಿರುವುದಿಲ್ಲ ಎಂದು ಬೇಸರ ಹೊರಹಾಕಿದರು.

ರಾಜ್ಯ ಕಾರ್ಯದರ್ಶಿ ನಾಗರತ್ನಮ್ಮ ಮಾತನಾಡಿ, ಕಾರ್ಯಕರ್ತೆಯರ ಸ್ವಂತ ಖರ್ಚಿನಿಂದ ಅಂಗನವಾಡಿ ಕೇಂದ್ರ ನಡೆಸಬೇಕಾದ ಪರಿಸ್ಥಿತಿ ಬಂದಿದೆ, ಕೇಂದ್ರದ ಸ್ವಚ್ಛತೆ ಹಾಗೂ ಶಿಕ್ಷಣಕ್ಕೆ ಬಳಸುವ ಹಣವನ್ನೂ ಎರಡು ವರ್ಷಗಳಿಂದ ಸರ್ಕಾರ ನೀಡಿಲ್ಲ, ಕೂಡಲೇ ಕ್ರಮ ವಹಿಸಬೇಕು, ಎಲ್ಲಾ ಅಂಗನವಾಡಿ ಕೇಂದ್ರಗಳಿಗೆ ಶುದ್ಧ ಕುಡಿಯುವ ನೀರಿನ ವಾಟರ್ ಫಿಲ್ಟರ್ ಮಂಜೂರು ಮಾಡಬೇಕೆಂದು ಆಗ್ರಹಿಸಿದರು.

ಅಂಗವಾಡಿ ಕಾರ್ಯಕರ್ತೆ ಮತ್ತು ಸಹಾಯಕಿಯರಿಗೆ ಗುಣಮಟ್ಟದ ಸಮವಸ್ತ್ರ ನೀಡಿಲ್ಲ, ಕಳಪೆ ಸೀರೆಗಳನ್ನು ಪ್ರತಿದಿನ ಕೇಂದ್ರದಲ್ಲಿ ಮತ್ತು ಮಾಸಿಕ ಸಭೆಗಳಲ್ಲಿ ಕಡ್ಡಾಯವಾಗಿ ಧರಿಸಬೇಕೆಂದು ತಿಳಿಸಿದ್ದಾರೆ, ಗ್ಯಾಸ್ ಒಲೆ ಹಾಗೂ ಸಿಲಿಂಡರ್ ನೀಡಿ ಸುಮಾರು ವರ್ಷವಾಗಿದ್ದು ಎಲ್ಲಾ ಹಾಳಾಗಿವೆ. ಮಕ್ಕಳಿಗೆ ಅನಾಹುತವಾದಲ್ಲಿ ಜವಾಬ್ದಾರರಾರು ಎಂದು ಪ್ರಶ್ನಿಸಿದರು.

ಸಭೆಯಲ್ಲಿ ರಾಜ್ಯ ಪ್ರಧಾನ ಕಾರ್ಯದರ್ಶಿ ಆಲಿ, ಜಿಲ್ಲಾಧ್ಯಕ್ಷೆ ಸರಸ್ಪತಮ್ಮ, ಜಿಲ್ಲಾ ಉಪಾಧ್ಯಕ್ಷೆ ಬಿ.ಎಚ್.ಗೀತಾ, ಜಿಲ್ಲಾ ಕಾರ್ಯದರ್ಶಿ ಚಿನ್ನಮ್ಮ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜಿ.ಟಿ.ಪ್ರಭಾವತಿ, ತಾಲೂಕು ಪದಾಧಿಕಾರಿಗಳಾದ ಮಾಲೂರು ಲೀಲಾವತಿ, ಮಧುರ, ಎನ್.ಭಾಗ್ಯಲಕ್ಷ್ಮೀ, ಪ್ರಮೀಳ, ಬಂಗಾರಪೇಟೆ ಕಲಾವತಿ, ಎಂ.ಎನ್.ಪುಷ್ಪ, ಸುನಂದಮ್ಮ, ಮಂಜುಳ ಇದ್ದರು.