ಸಾರಾಂಶ
-ಯಾದಗಿರಿ-ಆಲಮಟ್ಟಿ ರೈಲ್ವೆ ಹೋರಾಟ ಸಮಿತಿಯಿಂದ ಸಂಸದರಿಗೆ ಮನವಿ
-----ಕನ್ನಡಪ್ರಭ ವಾರ್ತೆ ಹುಣಸಗಿ
ಕಲ್ಯಾಣ ಕರ್ನಾಟಕದಲ್ಲಿ ರೈಲ್ವೆ ಜಾಲ ಬಹಳ ಕಡಿಮೆ ಇದೆ. ಸ್ವಾತ್ಯಂತ್ರ ಪೂರ್ವದಲ್ಲಿಯ ಆಲಮಟ್ಟಿ-ಯಾದಗಿರಿ ರೈಲು ಮಾರ್ಗ ಕಾಮಗಾರಿ ಆರಂಭಗೊಂಡು ಮತ್ತೆ ಸ್ಥಗಿತಗೊಂಡಿದೆ. ಕೃಷ್ಣಾ-ಭಿಮೇಯರ ಸಂಗಮ ಪ್ರದೇಶದ ಭತ್ತದ ಕಣಜ, ಅನೇಕ ಪ್ರವಾಸಿ ಕೇಂದ್ರ ಹೊಂದಿದ ಗೋವಾದಿಂದ ವಿಜಯವಾಡಕ್ಕೆ ನೇರ ಸಂಪರ್ಕ ನೀಡುವ ಈ ಮಾರ್ಗ ಶೀಘ್ರ ಅನುಷ್ಠಾನಗೊಳಿಸವಂತೆ ಒತ್ತಾಯಿಸಲಾಗಿದೆ. ಕಲ್ಯಾಣ ಕರ್ನಾಟಕದ ವಿಜಯಪುರ-ಯಾದಗಿರಿ ಜಿಲ್ಲೆಯ ಎಲ್ಲಾ ನಾಗರಿಕರಿಂದ ನಿರಂತರ ಹೋರಾಟ ಮಾಡಬೇಕಾಗಿದೆ ಎಂದು ಯಾದಗಿರಿ-ಆಲಮಟ್ಟಿ ರೈಲ್ವೆ ಹೋರಾಟ ಸಮಿತಿಯ ಹುಣಸಗಿ ತಾಲೂಕು ಅಧ್ಯಕ್ಷ ಚಂದ್ರಶೇಖರ ದಂಡಿನ್ ಹೇಳಿದರು.ಈ ಕುರಿತು ಹುಣಸಗಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಾದಗಿರಿಗೆ ಆಗಮಿಸಿದ್ದ ಸಂದರ್ಭದಲ್ಲಿ ರಾಯಚೂರು ಲೋಕಸಭಾ ಸಂಸದ ಜಿ. ಕುಮಾರ್ ನಾಯಕ ಹಾಗೂ ಯಾದಗಿರಿ ಜಿಲ್ಲಾ ಉಸ್ತುವಾರಿ ಸಚಿವ ಶರಣಬಸಪ್ಪಗೌಡ ದರ್ಶನಾಪುರ, ಯಾದಗಿರಿ ಶಾಸಕ ಚೆನ್ನಾರೆಡ್ಡಿ ಪಾಟೀಲ್ ತುನ್ನೂರು, ಸುರಪುರ ರಾಜಾ ವೇಣುಗೋಪಾಲ ನಾಯಕ ಅವರಿಗೆ ಆಲಮಟ್ಟಿ-ಯಾದಗಿರಿ ರೈಲು ಮಾರ್ಗ ಜಾರಿಗೆ ತರುವಂತೆ ಸಂಬಂಧಿಸಿದ ಕೇಂದ್ರ ರೈಲ್ವೆ ಮಂತ್ರಿಗಳಿಗೆ ಒತ್ತಡ ಹೇರುವಂತೆ ಮನವಿಯಲ್ಲಿ ಒತ್ತಾಯಿಸಲಾಗಿದೆ ಎಂದರು.
ಸದ್ಯದ ಲೋಕಸಭಾ ಅಧಿವೇಶನದಲ್ಲಿ ಈ ರೈಲು ಮಾರ್ಗದ ಕುರಿತು ವಿಷಯ ಪ್ರಸ್ತಾಪ ಮಾಡುವುದಾಗಿ ಭರವಸೆ ನೀಡಿದ ರಾಯಚೂರು ಲೋಕಸಭಾ ಸಂಸದ ಜಿ. ಕುಮಾರ್ ನಾಯಕ, ಪಕ್ಷಾತೀತವಾಗಿ ಎರಡು ಜಿಲ್ಲೆಗಳ ನಾಗರಿಕರ ನಿರಂತರ ಆಗ್ರಹ, ಹೋರಾಟದ ಅವಶ್ಯಕತೆ ಇದೆ. ಆಗ ಮಾತ್ರ ಯೋಜನೆ ಕಾರ್ಯಗತವಾಗಲು ಸಾಧ್ಯವೆಂದರು.ವಿಜಯಪುರ-ಯಾದಗಿರಿ ಜಿಲ್ಲೆಗಳ ಆಲಮಟ್ಟಿ-ಯಾದಗಿರಿ ರೈಲು ಹೋರಾಟ ಸಮಿತಿಯನ್ನು ನವದೆಹಲಿಗೆ ಆಹ್ವಾನಿಸಿದರು. ನಿಯೋಗದೊಂದಿಗೆ ತಾವುಗಳು ನವದೆಹಲಿಗೆ ಬಂದರೆ, ರೈಲ್ವೆ ಸಚಿವರಾದ ಅಶ್ವಿನಿ ವೈಷ್ಣವ, ರಾಜ್ಯ ರೈಲ್ವೆ ಸಚಿವರಾದ ಸೋಮಣ್ಣ ಅವರನ್ನು ಭೇಟಿ ಮಾಡಿ ಮನವಿ ನೀಡೋಣ ಎಂದ ಸಂಸದರು, ಯೋಜನೆ ಜಾರಿಗೆ ಆಗಾಗ ಸಚಿವರನ್ನು ಭೇಟಿ ಮಾಡಿ ಮನವರಿಕೆ ಮಾಡುವುದಾಗಿ ತಿಳಿಸಿದರು.
ನಂತರ ಸದ್ಯ ಅಧಿವೇಶನ ನಡೆದಿರುವುದರಿಂದ ಡಿಸೆಂಬರ್ 9,10 ಮತ್ತು 10 ರಂದು ನವದೆಹಲಿಗೆ ಬರುವಂತೆ ಸೂಚಿಸಿದರು.ರೈಲ್ವೆ ಹೋರಾಟ ಸಮಿತಿಯ ಅಧ್ಯಕ್ಷ ಚಂದ್ರಶೇಖರ ದಂಡಿನ್, ಶರಣಗೌಡ ಪಾಟೀಲ್ ವಜ್ಜಲ್, ರಾಜಕುಮಾರ ಬಿರಾದಾರ್, ಚನ್ನಕುಮಾರ ಬಿರಾದಾರ್ ಸೇರಿದಂತೆ ಇದ್ದರು.
------ಫೋಟೋ: ಆಲಮಟ್ಟಿ-ಯಾದಗಿರಿ ರೈಲು ಮಾರ್ಗ ಜಾರಿಗೆ ತರುವಂತೆ ಒತ್ತಾಯಿಸಿ ಯಾದಗಿರಿ-ಆಲಮಟ್ಟಿ ರೈಲ್ವೆ ಹೋರಾಟ ಸಮಿತಿಯ ತಾಲೂಕು ಒಕ್ಕೂಟದಿಂದ ರಾಯಚೂರು ಲೋಕಸಭಾ ಸಂಸದ ಜಿ. ಕುಮಾರ್ ನಾಯಕ ಅವರಿಗೆ ಮನವಿ ಸಲ್ಲಿಸಲಾಯಿತು.
2ವೈಡಿಆರ್13