ಸಾರಾಂಶ
ಕನ್ನಡ ಪ್ರಭ ವಾರ್ತೆ ಮುಧೋಳ
ರಾಜ್ಯದಲ್ಲಿ ಅತೀ ಹಿಂದುಳಿದ ವರ್ಗಗಳ ಕಲ್ಯಾಣ ಮತ್ತು ರಾಜಕೀಯ, ಆರ್ಥಿಕ ಮತ್ತು ಶೈಕ್ಷಣಿಕ ಸಬಲೀಕರಣಕ್ಕಾಗಿ ಯಾವುದೇ ಒತ್ತಡಕ್ಕೆ ಮಣಿಯದೆ ಜಾತಿ ಗಣತಿ ಜಾರಿಗೆ ತರಬೇಕು ಎಂದು ಅಹಿಂದ ಸಂಘಟನೆಗಳ ಅಧ್ಯಕ್ಷ ಗೋವಿಂದ ಕೌಲಗಿ ಆಗ್ರಹಿಸಿದರು.ಹಿಂದುಳಿದ ವರ್ಗಗಳ ಸಬಲೀಕರಣಕ್ಕಾಗಿ ಕಾಂತರಾಜ ಆಯೋಗದ ವರದಿ ಜಾರಿಗೆ ಒತ್ತಾಯಿಸಿ ಅಹಿಂದ ಸಂಘಟನೆ ಕಾರ್ಯಕರ್ತರು ರನ್ನ ಸರ್ಕಲ್‌ದಿಂದ ಪಾದಯಾತ್ರೆ ಹೊರಟು ತಹಸೀಲ್ದಾರರ ಕಚೇರಿಗೆ ತೆರಳಿ ಮನವಿ ಪತ್ರ ಸಲ್ಲಿಸಿದರು. ಈ ವೇಳೆ ಮಾತನಾಡಿದ ಅವರು, ಹಿಂದುಳಿದ ವರ್ಗಗಳ ಕಲ್ಯಾಣ ಕಾರ್ಯಗಳಿಗೆ ಸದಾ ನಾವು ಬೆಂಬಲಸುತ್ತಾ ಬಂದಿದ್ದೇವೆ. ಮುಂದೆಯೂ ನಿಮ್ಮ ಬೆಂಬಲಕ್ಕೆ ಗಟ್ಟಿಯಾಗಿ ನಿಲ್ಲುತ್ತೇವೆ. ಜತೆಗೆ ಹೋರಾಡುತ್ತೇವೆ ಎಂದರು.ಈ ವೇಳೆ ಕಾಂಗ್ರೆಸ್ ಹಿಂದುಳಿದ ಘಟಕದ ಜಿಲ್ಲಾಧ್ಯಕ್ಷ ಮುದಕಣ್ಣ ಅಂಬಿಗೇರ ಮಾತನಾಡಿ, ಜಾತಿ ಜನಾಂಗದ ಸಬಲೀಕರಣದ ಗುರಿ ಹೊಂದಲು ಮತ್ತು ಸರ್ಕಾರದ ಕಾರ್ಯಕ್ರಮಗಳ ಪರಿಣಾಮಕಾರಿ ಅನುಷ್ಠಾನಗೊಳಿಸಲು ಕಾಂತರಾಜ ಆಯೋಗದ ವರದಿ ಜಾರಿ ತರಬೇಕು ಎಂದು ಒತ್ತಾಯಿಸಿದರು. ವಿಜಾಪುರ ಮತ್ತು ಬಾಗಲಕೋಟೆ ಹಾಲು ಒಕ್ಕೂಟದ ನಿರ್ದೇಶಕ ಲಕ್ಷ್ಮಣ ಮಾಲಗಿ ಮಾತನಾಡಿ, ಸಮಾಜದಲ್ಲಿ ಹಿಂದುಳಿದ ವರ್ಗಗಳು ರಾಜಕೀಯವಾಗಿ, ಆರ್ಥಿಕವಾಗಿ ಧ್ವನಿ ಹೊಂದಲು ಕಾಂತರಾಜ ಆಯೋಗದ ವರದಿ ಜಾರಿಗೆ ಬರಬೇಕು. ಈ ಮೂಲಕ ಸಮಾನತೆ ಮತ್ತು ನ್ಯಾಯವನ್ನು ಸಾಧಿಸಲು ಸಾಧ್ಯ ಎಂದು ಪ್ರತಿಪಾದಿಸಿದರು.
ಕಾಂಗ್ರೆಸ್ ಮುಖಂಡ ಸಂಗಪ್ಪ ಇಮ್ಮನವರ ಮಾತನಾಡಿ, ಹಿಂದುಳಿದ ವರ್ಗಗಳ ಸಬಲೀಕರಣಕ್ಕೆ ನಿಮ್ಮ ಬದ್ಧತೆಗೆ ಹಿಂದುಳಿದ ಜನರು ತಮ್ಮನ್ನು ಬೆಂಬಲಿಸುತ್ತಾ ಬಂದಿದೆ. ಸದಾ ನಿತ್ಯವೂ ನಿಮ್ಮ ಜೊತೆಗೆ ನಿಲ್ಲುತ್ತೇವೆ. ಯಾವುದೇ ಕಾರಣದಿಂದ ಜಾತಿ ಜನಗಣತಿಯಿಂದ ಹಿಂದೆ ಸರಿಯದೆ ಜಾರಿ ಮಾಡಿ. ಸಿಎಂ ಸಿದ್ದರಾಮಯ್ಯನವರ ಮೇಲೆ ನಮ್ಮದು ಅಚಲವಾದ ನಂಬಿಕೆಯಿದೆ ಎಂದು ತಿಳಿಸಿದರು.ಈ ಸಂದರ್ಭದಲ್ಲಿ ಕಾಂಗ್ರೆಸ್ ಅಲ್ಪಸಂಖ್ಯಾತ ಜಿಲ್ಲಾಧ್ಯಕ್ಷ ಶೇಪಿಕ ಬೇಪಾರಿ, ಗಣೇಶ ಮೇತ್ರಿ, ಅಹಿಂದ ಉಪಾಧ್ಯಕ್ಷ ಜಾವೇದ ಹವಾಲ್ದಾರ, ರವಿ ರೊಡ್ಡಪ್ಪನವರ, ಲಕ್ಕಪ್ಪ ಕರೊಲಿ, ಶಿವಾನಂದ ಮ್ಯಾಗೇರಿ, ಸಿದ್ದಣ್ಣ ಬಾಡಿಗಿ, ಯಲ್ಲಪ್ಪ ಗಳಕಣ್ಣವರ, ಮಲ್ಲಿಕಾರ್ಜುನ ಬಡಿಗೇರ, ಶಿವಪ್ಪ ಡೊಳ್ಳಿ, ನೂರಲಿ ಶೇಖ, ಸಂಗಪ್ಪ ಅಮೋತಿ, ಲಕ್ಷ್ಮಣ ಮರಡಿ, ಸುರೇಶ ಸಿದ್ದಾಪುರ ಭಾಗವಹಿಸಿದ್ದರು.