ಪರಿಶಿಷ್ಟರ ಒಳ ಮೀಸಲಾತಿ ಅನುಷ್ಟಾನಕ್ಕೆ ಆಗ್ರಹ

| Published : Sep 10 2024, 01:43 AM IST

ಸಾರಾಂಶ

ಪರಿಶಿಷ್ಟರಿಗೆ ಒಳ ಮೀಸಲಾತಿ ಕಲ್ಪಿಸುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ದಸಂಸ ಕಾರ್ಯಕರ್ತರು ಸೋಮವಾರ ಚಿತ್ರದುರ್ಗದಲ್ಲಿ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿ ಟಿ. ವೆಂಕಟೇಶ್ ಅವರಿಗೆ ಮನವಿ ಸಲ್ಲಿಸಿದರು.

ಕನ್ನಡಪ್ರಭವಾರ್ತೆ ಚಿತ್ರದುರ್ಗಪರಿಶಿಷ್ಟರಿಗೆ ಒಳ ಮೀಸಲಾತಿ ಕಲ್ಪಿಸುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ದಸಂಸ ಕಾರ್ಯಕರ್ತರು ಸೋಮವಾರ ಚಿತ್ರದುರ್ಗದಲ್ಲಿ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿ ಟಿ. ವೆಂಕಟೇಶ್ ಅವರಿಗೆ ಮನವಿ ಸಲ್ಲಿಸಿದರು.ಪ್ರವಾಸಿ ಮಂದಿರದಿಂದ ಮೆರವಣಿಗೆ ಮೂಲಕ ಜಿಲ್ಲಾಧಿಕಾರಿ ಕಚೇರಿಗೆ ಆಗಮಿಸಿದ ಪ್ರತಿಭಟನಾಕಾರರು ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ಸುಪ್ರೀಂಕೋರ್ಟ್‍ನ ಏಳು ನ್ಯಾಯಾಧೀಶರ ಪೀಠದ ತೀರ್ಪಿನನ್ವಯ ಪರಿಶಿಷ್ಟ ಜಾತಿಯಲ್ಲಿನ ಒಳಪಂಗಡಗಳಿಗೆ ಮೀಸಲಾತಿಯನ್ನು ಅನುಷ್ಟಾನಗೊಳಿಸಲು ಆಗ್ರಹಿಸಿದರು.ಒಳ ಮೀಸಲಾತಿ ಜಾರಿಗಾಗಿ ಮೂವತ್ತು ವರ್ಷಗಳಿಂದಲೂ ನಿರಂತರವಾಗಿ ಹೋರಾಟ ಮಾಡಿಕೊಂಡು ಬರಲಾಗುತ್ತಿದೆ. ಪರಿಶಿಷ್ಟ ಜನಾಂಗದ 101 ಜಾತಿಗಳಲ್ಲಿ ಮೀಸಲು ಸಮನಾಗಿ ಹಂಚಿಕೆಯಾಗಿಲ್ಲ ಎಂಬ ಆತಂಕ ಹಾಗೂ ಅಸಹನೆಯಿಂದ ಮೂರು ದಶಕಗಳಿಂದ ರಾಜ್ಯಾದ್ಯಂತ ನಿರಂತರವಾಗಿ ಹೋರಾಟಗಳು ನಡೆಯುತ್ತಿವೆ. ಈ ಹೋರಾಟದಲ್ಲಿ ಹಲವಾರು ಹೋರಾಟಗಾರರು ಜೀವ, ಜೀವನ ಹಾಗೂ ಬದುಕನ್ನೇ ಕಳೆದುಕೊಂಡಿದ್ದಾರೆ ಎಂದು ಪ್ರತಿಭಟನಾಕಾರರು ನೋವು ವ್ಯಕ್ತಪಡಿಸಿದರು.

ಪರಿಶಿಷ್ಟರ ಒಳಮೀಸಲಾತಿ ವರ್ಗೀಕರಣ ಮಾಡಲು ಕರ್ನಾಟಕ, ಆಂಧ್ರ ಮತ್ತು ಪಂಜಾಬ್ ಸೇರಿದಂತೆ ಹಲವು ರಾಜ್ಯಗಳಲ್ಲಿ ನಡೆದ ಹೋರಾಟಗಳ ಹಿನ್ನಲೆಯಲ್ಲಿ ಹಲವಾರು ಆಯೋಗಗಳು ನೀಡಿದ ವರದಿಗಳನ್ನು ಪರಿಶೀಲಿಸಿದ ನಂತರ ಸುಪ್ರೀಂ ಕೋರ್ಟ್ ಐತಿಹಾಸಿಕ ತೀರ್ಪು ನೀಡಿ ಈ ವಿವಾದಕ್ಕೆ ತೆರೆ ಎಳೆದಿದೆ. ಪರಿಶಿಷ್ಟರ ಮೀಸಲಾತಿ ವರ್ಗೀಕರಣ ಮಾಡಲು ರಾಜ್ಯಕ್ಕೆ ಸಂವಿಧಾನದತ್ತ ಅಧಿಕಾರವಿದೆ ಎಂದು ಸುಪ್ರೀಂ ಕೋರ್ಟ್ ತನ್ನ ತೀರ್ಪಿನಲ್ಲಿ ತಿಳಿಸಿದೆ ಎಂದರು.

ಈ ಹಿಂದೆ ಕರ್ನಾಟಕದ ಮುಖ್ಯಮಂತ್ರಿಗಳಾಗಿದ್ದ ಬಸವರಾಜ ಬೊಮ್ಮಯಿರವರ ನೇತೃತ್ವದಲ್ಲಿ ಸಚಿವ ಸಂಪುಟ ಸಭೆ ತೀರ್ಮಾನಿಸಿದಂತೆ ಪರಿಶಿಷ್ಟರ ಮೀಸಲಾತಿ ವರ್ಗೀಕರಣ ಮಾಡಲು ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡಲಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ ನೇತೃತ್ವದ ಸಚಿವ ಸಂಪುಟ ಸಭೆ ಕರೆದು ಪರಿಶಿಷ್ಟ ಜಾತಿ ಮೀಸಲಾತಿಯ ವರ್ಗೀಕರಣ ಮಾಡಲು ಅವರೂ ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡಿದ್ದಾರೆ. ಸುಪ್ರಿಂ ಕೋರ್ಟ್ ತೀರ್ಪಿನ ಅನ್ವಯ ರಾಜ್ಯ ಸರ್ಕಾರ ತಕ್ಷಣವೇ ಒಳ ಮೀಸಲು ಕಲ್ಪಿಸಲಿ ಎಂದು ಆಗ್ರಹಿಸಿದರು.ಸುಪ್ರೀಂ ಕೋರ್ಟ್ ತೀರ್ಪು ನೀಡಿ 40 ದಿನಗಳು ಕಳೆದಿದೆ. ಸರ್ಕಾರ ಈ ಬಗ್ಗೆ ದೃಢ ನಿಲುವು ತಾಳಿಲ್ಲ. ಕೂಡಲೇ ಮುಖ್ಯಮಂತ್ರಿಗಳು ಸಚಿವ ಸಂಪುಟದ ಸಭೆ ನಡೆಸಿ ನಿವೃತ್ತ ನ್ಯಾಯಮೂರ್ತಿ ಎ.ಜೆ ಸದಾಶಿವರವರ ಆಯೋಗದ ವರದಿಯಂತೆ ಪರಿಶಿಷ್ಟರ ಮೀಸಲಾತಿ ವರ್ಗೀಕರಣ ಮಾಡಬೇಕು. ಪರಿಶಿಷ್ಟರ ಮೀಸಲಾತಿ ವರ್ಗಿಕರಣಗೊಳ್ಳುವ ತನಕ ಸರ್ಕಾರ ಎಲ್ಲಾ ನೇಮಕಾತಿಗಳನ್ನು ಸ್ಥಗಿತಗೊಳಿಸಬೇಕು. ಖಾಸಗಿ ಹಾಗೂ ಗುತ್ತಿಗೆ ನೇಮಕಾತಿಯಲ್ಲಿ ಪರಿಶಿಷ್ಟ ಜಾತಿ ಪರಿಶಿಷ್ಟ ವರ್ಗಗಳಿಗೆ ಮೀಸಲಾತಿ ನೀಡಬೇಕು ಎಂದು ಒತ್ತಾಯಿಸಿದರು.

ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗಗಳ ಅಭಿವೃದ್ಧಿಗಾಗಿ ಬಳಸಬೇಕಾಗಿರುವ ಎಸ್ಸಿಪಿ, ಟಿಎಸ್ಪಿ. ಹಣವನ್ನು ರಾಜ್ಯ ಸರ್ಕಾರ ಅನ್ಯ ಉದ್ದೇಶಗಳಿಗೆ ಬಳಸಿಕೊಂಡಿದೆ. ಎಸ್ಸಿ, ಎಸ್ಟಿ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನವನ್ನು ಸಕಾಲಕ್ಕೆ ನೀಡುತ್ತಿಲ್ಲ. ಮೆರಿಟ್ ವಿದ್ಯಾರ್ಥಿ ವೇತನ ಹಾಗೂ ವಿದೇಶ ವ್ಯಾಸಂಗಕ್ಕೆ ನೀಡುತ್ತಿದ್ದ ನೆರವನ್ನು ರದ್ದುಪಡಿಸಿ ರಾಜ್ಯ ಸರ್ಕಾರ ದಲಿತ ವಿರೋಧಿ ಎನ್ನುವುದನ್ನು ಸಾಬೀತುಪಡಿಸಿದೆ ಎಂದು ಪ್ರತಿಭಟನಾಕಾರರು ದೂರಿದರು.

ಕರ್ನಾಟಕ ದಲಿತ ಸಂಘರ್ಷ ಸಮಿತಿ ಜಿಲ್ಲಾಧ್ಯಕ್ಷ ಎಸ್.ಎನ್. ವಿಶ್ವನಾರಾಯಣಮೂರ್ತಿ, ವಿಭಾಗೀಯ ಕಾರ್ಯಾಧ್ಯಕ್ಷ ನೇಹ ಮಲ್ಲೇಶ್, ಕೆ. ನಾಗಭೂಷಣ್, ಯುವ ಘಟಕ ಜಿಲ್ಲಾಧ್ಯಕ್ಷ ಪ್ರದೀಪ್, ಕಾನೂನು ಸಲಹೆಗಾರ ಜಿ.ಆರ್. ಪ್ರಭಾಕರ್, ಲೇಖಕ ಎಚ್. ಆನಂದಕುಮಾರ್, ಕಣಿವೆಮಾರಮ್ಮ ಸಂಘದ ಅಧ್ಯಕ್ಷ ಎಂ.ತಿಪ್ಪೇಸ್ವಾಮಿ, ಚನ್ನಬಸವ ಡಿ.ಕಣುಮೇಶ್, ಶ್ರೀಹರಿ, ಇಮ್ರಾನ್‍ಬೇಗ್ ಪ್ರತಿಭಟನೆಯಲ್ಲಿದ್ದರು.