ಸಾಗುವಳಿ ಪತ್ರ ನೀಡುವಂತೆ ಆಗ್ರಹಿಸಿ ಪ್ರತಿಭಟನೆ

| Published : Jul 09 2024, 12:51 AM IST

ಸಾಗುವಳಿ ಪತ್ರ ನೀಡುವಂತೆ ಆಗ್ರಹಿಸಿ ಪ್ರತಿಭಟನೆ
Share this Article
  • FB
  • TW
  • Linkdin
  • Email

ಸಾರಾಂಶ

ಯಾವುದೇ ಸರ್ಕಾರ ಬಂದರೂ ಬಡ ಬಗರ್ ಹುಕುಂ ಸಾಗುವಳಿದಾರರನ್ನು ಮರೆತಿವೆ.

ಕನ್ನಡಪ್ರಭ ವಾರ್ತೆ ಮೈಸೂರು

ಸರ್ಕಾರಿ ಜಮೀನನ್ನು ಖಾಸಗೀಯವರಿಗೆ ನೀಡುವ ತೀರ್ಮಾನ ವಿರೋಧಿಸಿ ಬಗರ್ ಹುಕುಂ ಸಾಗುವಳಿದಾರರಿಗೆ ಸಾಗುವಳಿ ಪತ್ರ ನೀಡುವಂತೆ, ಹಾಲಿಗೆ ಪ್ರೋತ್ಸಾಹ ಧನ ಹೆಚ್ಚಿಸಲು ಒತ್ತಾಯಿಸಿ ಕರ್ನಾಟಕ ಪ್ರಾಂತ ರೈತ ಸಂಘದ ಪದಾಧಿಕಾರಿಗಳು ಪ್ರತಿಭಟಿಸಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.

ಹಳೇ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಸಮಾವೇಶಗೊಂಡ ರೈತರು ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಯಾವುದೇ ಸರ್ಕಾರ ಬಂದರೂ ಬಡ ಬಗರ್ ಹುಕುಂ ಸಾಗುವಳಿದಾರರನ್ನು ಮರೆತಿವೆ. ಸಾಗುವಳಿ ಪತ್ರ ಇಲ್ಲದೇ ರೈತರು ಸರ್ಕಾರಿ ಸವಲತ್ತು ಪಡೆಯಲು, ಬರ ಪರಿಹಾರ ಪಡೆಯಲು ಸಾಧ್ಯವಾಗಿಲ್ಲ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜಗದೀಶ್ ಸೂರ್ಯ ಮಾತನಾಡಿ, ರಾಜ್ಯ ಸರ್ಕಾರ ಮುಂದಿನ 8 ತಿಂಗಳ ಒಳಗೆ ಅರ್ಜಿ ವಿಲೇವಾರಿ ಮಾಡುವುದಾಗಿ ಹೇಳಿರುವುದು ಸ್ವಾಗತಾರ್ಹ. ಜತೆಗೆ ಜಿಲ್ಲೆಯ ಎಲ್ಲಾ ತಾಲೂಕುಗಳ ಸಾವಿರಾರು ಎಕರೆ ಜಮೀನು ಪಕ್ಕ ಪೋಡಿಯಾಗದೆ ಹಾಗೆಯೇ ಉಳಿದಿದೆ. ಇದರಿಂದ ರೈತರಿಗೆ ತಮ್ಮ ಮಕ್ಕಳಿಗೆ ಜಮೀನು ವರ್ಗಾಹಿಸಲು, ಅಭಿವೃದ್ಧಿ ಮಾಡಲು ಕಷ್ಟಕರವಾಗಿದೆ. ಆದ್ದರಿಂದ ಜಮೀನುಗಳ ಪೋಡು ಮಾಡಲು ಜಿಲ್ಲಾಡಳಿತಕ್ಕೆ ಸೂಚಿಸಿದರು.

ಬಗರ್ ಹುಕುಂ ಸಾಗುವಳಿದಾರರು ಈಗಾಗಲೇ ಹಕ್ಕು ಪತ್ರಕ್ಕಾಗಿ ಫಾರಂ 51, 53 ಹಾಗೂ 57 ಸಲ್ಲಿಸಿರುವ ಅರ್ಜಿಯನ್ನು ಕೂಡಲೇ ವಿಲೇವಾರಿ ಮಾಡಲು ತಾಲೂಕು ಮಟ್ಟದಲ್ಲಿ ಸಮಿತಿ ನೇಮಿಸಬೇಕು. ಸರ್ಕಾರಿ ಜಮೀನು ಖಾಸಗಿಯವರಿಗೆ ಗುತ್ತಿಗೆ ನೀಡಬಾರದು ಎಂದು ಅವರು ಒತ್ತಾಯಿಸಿದರು.

ನಗರದ 10 ಕಿಮೀ ವ್ಯಾಪ್ತಿಯ ಹಾಗೂ ಅರಣ್ಯ ಭೂಮಿಯಲ್ಲಿನ ಬಡ ಬಗರ್ ಹುಕುಂ ಸಾಗುವಳಿದಾರರ ಭೂ ಕಬಳಿಕೆ ತಕ್ಷಣ ನಿಲ್ಲಿಸಬೇಕು. ಹಕ್ಕುಪತ್ರ ವಿತರಣೆಗೆ ಅಡ್ಡಿಯಾಗಿರುವ ಕಾಯಿದೆ ತಿದ್ದುಪಡಿ ಮಾಡಬೇಕು. ಗೋವುಗಳ ಸಮೀಕ್ಷೆ ಮಾಡಿ ಹಸುಗಳಿಗೆ ಅಗತ್ಯ ಭೂಮಿ ಬಿಟ್ಟು ಉಳಿದ ಜಮೀನನ್ನು ರೈತರಿಗೆ ಹಂಚಲು ಕ್ರಮವಹಿಸಬೇಕು ಎಂದು ಅವರು ಹೇಳಿದರು.

ಜಿಎಸ್ ಟಿ ತೆರಿಗೆ ಜಾರಿಯಿಂದ ದೇಶದಲ್ಲಿ ಸುಮರು 9 ಕೋಟಿ ಹಾಲು ಉತ್ಪಾದಕರ ಕುಟುಂಬಗಳೂ ಎರಡು ರೀತಿಯ ತೆರಿಗೆಗಳು ಸೇರಿ ಶೇ. 17ರಿಂದ 30ರಷ್ಟು ತೆರಿಗೆ ಪಾವತಿಸುತ್ತಿದ್ದಾರೆ. ಹಾಲಿಗೆ ಜಿಎಸ್ ಟಿ ವಿಧಿಸಿರುವುದರಿಂದ ರೈತ ಕುಟುಂಬ ಮತ್ತಷ್ಟು ಸಂಕಷ್ಟಕ್ಕೆ ಸಿಲುಕಿದ್ದು, ಹಾಲಿ ಉತ್ಪನ್ನಗಳ ಮೇಲಿನ ಜಿಎಸ್ ಟಿ ಹಿಂದಕ್ಕೆ ಪಡೆಯಬೇಕು ಎಂದು ಒತ್ತಾಯಿಸಿದರು.

ಜಿಲ್ಲಾಧ್ಯಕ್ಷ ಗೌರಿಪುರ ಚಿಕ್ಕಣ್ಣೇಗೌಡ, ಉಪಾಧ್ಯಕ್ಷ ಕೆ.ಬಸವರಾಜ್, ಬಿ.ಎಂ. ಶಿವಣ್ಣ, ವೀರಭದ್ರಪ್ಪ, ಹಳ್ಳದಕೊಪ್ಪಲು ಪುಟ್ಟರಾಜು, ಸಿದ್ದಯ್ಯ, ಸಹ ಕಾರ್ಯದರ್ಶಿಗಳಾದ ಪುಟ್ಟರಾಚ, ಕೆಂಪಣ್ಣ, ಸಣ್ಣನಾಯ್ಕ, ಚೌಡಮ್ಮ, ಕೆಂಪಮ್ಮ, ಸಾಕಮ್ಮ, ಮೂರ್ತಿ, ರಾಜೇಶ್, ತೋಟಪ್ಪ, ಚಂದರಾಜ್, ಗೋಪಾಲ್ ಮೊದಲಾದವರು ಇದ್ದರು.