ಯಕ್ಷಗಾನ, ತಾಳಮದ್ದಲೆ ವಿಶೇಷ ಕಲೆ

| Published : Jul 09 2024, 12:51 AM IST

ಸಾರಾಂಶ

ಯಕ್ಷಗಾನ, ತಾಳಮದ್ದಲೆ ವಿಶೇಷವಾದದ್ದು. ಈಗ ಭಾವ ಹಾಗೂ ಭಾಷೆ ಸಂಕರ ಆಗುತ್ತಿದೆ. ಭಾಷೆ ಜತೆ ಸಂಸ್ಕಾರ ಕೂಡ ಇರಬೇಕು. ಭಾಷೆಯೊಳಗೆ ಅನ್ಯ ಭಾಷೆ ಸೇರಿ ಹೋದರೆ ಆ ಸಂಸ್ಕಾರ ಕೂಡ ಮಿಶ್ರ ಆಗುತ್ತದೆ. ಸಮಾಜದಲ್ಲಿ ಮೌಲ್ಯ ಹಂಚುವಲ್ಲಿ ತಾಳಮದ್ದಲೆಯ ಮೂಲಕ ನಾಟ್ಯಶ್ರೀ ಒಳ್ಳೆ ಕೆಲಸ ಮಾಡುತ್ತಿದೆ.

ಗೋಕರ್ಣ: ಯಾವತ್ತೂ ಸಂಬಂಧಕ್ಕೆ ಸಂಪತ್ತಿನ ತ್ಯಾಗ ಆಗಬೇಕು. ಸಂಪತ್ತಿಗೆ ಸಂಬಂಧದ ಬಗ್ಗೆ ತ್ಯಾಗ ಆಗಬಾರದು ಎಂದು ರಾಘವೇಶ್ವರ ಭಾರತೀ ಸ್ವಾಮೀಜಿ ನುಡಿದರು.

ಸೋಮವಾರ ಗೋಕರ್ಣದ ಅಶೋಕೆಯ ಸೇವಾ ಸೌಧದಲ್ಲಿ ಹೊನ್ನಾವರದ ನಾಟ್ಯಶ್ರೀ ಯಕ್ಷಕಲಾ ಪ್ರತಿಷ್ಠಾನದ ಬೆಳ್ಳಿ ಹಬ್ಬದ ಸಂಭ್ರಮದಲ್ಲಿ ಹಮ್ಮಿಕೊಂಡ ಭಾವ ಭಾಷಾ ವಿಲಾಸ ಸರಣಿಯಾಗಿ ಶ್ರೀರಾಮ ಚರಿತೆ ತಾಳಮದ್ದಲೆಯ ಮೂರನೇ ದಿನದ ಕಾರ್ಯಕ್ರಮದಲ್ಲಿ ಅಷ್ಟೂ ದಿನ ಶ್ರೀರಾಮನ ಪಾತ್ರ ಮಾಡುತ್ತಿರುವ ಹವ್ಯಕ ಮಹಾ ಮಂಡಲ ಅಧ್ಯಕ್ಷ ಸೆಲ್ಕೋ ಸಿಇಒ ಮೋಹನ ಭಾಸ್ಕರ ಹೆಗಡೆ ಹೆರವಟ್ಟ(ಕರ್ಕಿ) ಅವರಿಗೆ ಜೀವನ ಭಾಸ್ಕರ ಎಂಬ ಬಿರುದು ನೀಡಿ ಗೌರವಿಸಿ ಆಶೀರ್ವಚನ ನೀಡಿದರು.

ಯಕ್ಷಗಾನ, ತಾಳಮದ್ದಲೆ ವಿಶೇಷವಾದದ್ದು. ಈಗ ಭಾವ ಹಾಗೂ ಭಾಷೆ ಸಂಕರ ಆಗುತ್ತಿದೆ. ಭಾಷೆ ಜತೆ ಸಂಸ್ಕಾರ ಕೂಡ ಇರಬೇಕು. ಭಾಷೆಯೊಳಗೆ ಅನ್ಯ ಭಾಷೆ ಸೇರಿ ಹೋದರೆ ಆ ಸಂಸ್ಕಾರ ಕೂಡ ಮಿಶ್ರ ಆಗುತ್ತದೆ. ಸಮಾಜದಲ್ಲಿ ಮೌಲ್ಯ ಹಂಚುವಲ್ಲಿ ತಾಳಮದ್ದಲೆಯ ಮೂಲಕ ನಾಟ್ಯಶ್ರೀ ಒಳ್ಳೆ ಕೆಲಸ ಮಾಡುತ್ತಿದೆ ಎಂದರು.

ಬಿರುದು, ಸನ್ಮಾನ ಸ್ವೀಕರಿಸಿದ ಮೋಹನ ಭಾಸ್ಕರ ಹೆಗಡೆ ಮಾತನಾಡಿ, ಸಾಧನೆ ಮಾಡಿದ್ದೇನು ಇಲ್ಲ. ಹೀಗೊಂದು ಸಾಧನೆ ದಾರಿ ಇದೆ ಅಂತ ದೇವರೇ ಒತ್ತಿ ಕಳಿಸಿದ್ದು, ಗುರುಗಳ ಆಶೀರ್ವಾದ, ಸ್ನೇಹಿತರ ಬಲ ಇಲ್ಲಿಯವರೆಗೆ ತಂದಿದೆ. ಅಪ್ರಾಮಣಿಕತೆ ಇಲ್ಲದಂತೆ ಬದುಕು ಕೆಲಸ ಮಾಡುತ್ತಿರುವೆ ಎಂದರು.

ಈ ವೇಳೆ ಮಾತೋಶ್ರೀ ಪಾರ್ವತಿ ಭಾಸ್ಕರ ಹೆಗಡೆ, ನಾಟ್ಯ ವಿನಾಯಕ ದೇವಸ್ಥಾನದ ಪ್ರಧಾನ ವಿಶ್ವಸ್ಥ ವಿನಾಯಕ ಹೆಗಡೆ ಕಲಗದ್ದೆ, ವಿ. ದತ್ತಮೂರ್ತಿ ಭಟ್ಟ ಶಿವಮೊಗ್ಗ, ರಾಘವೇಂದ್ರ ಮಯ್ಯ, ಪ್ರತಿಷ್ಠಾನದ ಸಹಕಾರ್ಯದರ್ಶಿ ಪ್ರಸನ್ನ ಹೆಗಡೆ, ಉಪಾಧ್ಯಕ್ಷರಾದ ಸುಬ್ರಾಯ ಭಟ್ಟ ಮೂರೂರು, ಐರೋಡಿ ರಾಜಶೇಖರ ಹೆಬ್ಬಾರ,ಜಗದೀಶ ಪೈ ಮಣಿಪಾಲ, ಸುಧೀರ ಕುಲಕರ್ಣಿ ಬೆಂಗಳೂರು, ಸುರೇಶ ಸಾವಳಗಿ ಧಾರವಾಡ, ಗುರುಪ್ರಕಾಶ ಶೆಟ್ಟಿ ಉಡುಪಿ, ಆರ್.ಜಿ. ಹೆಗಡೆ ಹೊಸಾಕುಳಿ ಉಷಾ ಮೋಹನ ಹೆಗಡೆ, ವಿ.ಎಸ್. ಹೆಗಡೆ ಶಿರಸಿ ಉಪಸ್ಥಿತರಿದ್ದರು. ಇದೇ ವೇಳೆ ಶ್ರೀಗಳು ಯಕ್ಷಗಾನ ನೃತ್ಯ ರೂಪಕದ ಮೂಲಕ ವಿಶ್ವದಾಖಲೆ ಮಾಡಿದ ಕು. ತುಳಸಿ ಹೆಗಡೆ ಅವರನ್ನು ಪ್ರತಿಷ್ಠಾನದ ಪರವಾಗಿ ರಜತ ಗೌರವ ನೀಡಿ ಪುರಸ್ಕಾರ ನೀಡಿದರು. ಪ್ರತಿಷ್ಠಾನದ ಗೌರವಾಧ್ಯಕ್ಷ ಎಸ್, ಶಂಭು ಭಟ್ಟ ಫಲ ಸಮರ್ಪಣೆ ಮಾಡಿದರು. ಅಧ್ಯಕ್ಷ ಎಸ್.ಜಿ. ಭಟ್ಟ ಕಬ್ಬಿನಗದ್ದೆ ಸನ್ಮಾನ ಪತ್ರ ವಾಚಿಸಿದರು.

ರಾಘವೇಂದ್ರ ಮಧ್ಯಸ್ಥ ನಿರ್ವಹಿಸಿದರು. ಹಿರಿಯ ಕಲಾವಿದ ಕೊಂಡದಕುಳಿ ರಾಮಚಂದ್ರ ಹೆಗಡೆ ವಂದಿಸಿದರು. ಇದಕ್ಕೂ ಮುನ್ನ ನಡೆದ ಚಿತ್ರಕೂಟ ತಾಳಮದ್ದಲೆಯಲ್ಲಿ ವನವಾಸ ಬದುಕು, ಭರತ ರಾಮನ ಸಂಭಾಷಣೆ ಗಮನ ಸೆಳೆಯಿತು. ಹಿಮ್ಮೇಳದಲ್ಲಿ ಪ್ರಸಿದ್ಧ ಭಾಗವತರಾದ ರಾಮಕೃಷ್ಣ ಹಿಲ್ಲೂರು, ಮದ್ದಲೆಯಲ್ಲಿ ಎನ್.ಜಿ. ಹೆಗಡೆ ಯಲ್ಲಾಪುರ ಭಾಗವಹಿಸಿದ್ದರು. ಅರ್ಥಧಾರಿಗಳಾದ ಮೋಹನ ಭಾಸ್ಕರ ಹೆಗಡೆ ರಾಮನಾಗಿ, ಭರತನಾಗಿ ಪವನ್ ಕಿರಣಕೆರೆ, ಜಿ.ವಿ. ಹೆಗಡೆ ಮೂರೂರು ವಸಿಷ್ಠ, ಅಂಬಾಪ್ರಸಾದ್ ಪಾತಾಳ ಸೀತೆಯಾಗಿ, ಲಕ್ಷ್ಮಣನಾಗಿ ಮಂಗಳಾ ಟಿ.ಎಸ್. ಭಾಗವಹಿಸಿದ್ದರು.

ಇಂದು ಕೋಣಾರೆಯಲ್ಲಿ ತಾಳಮದ್ದಳೆ

ಜು. 9ರಂದು ಸಂಜೆ 5ಕ್ಕೆ ಮೂರೂರು ಕೋಣಾರೆ ಮಹಾವಿಷ್ಣು ದೇವಸ್ಥಾನದಲ್ಲಿ ಪಂಚವಟಿ ತಾಳಮದ್ದಳೆ ನಡೆಯಲಿದೆ. ಹಿಮ್ಮೇಳದಲ್ಲಿ ಸೃಜನ್ ಹೆಗಡೆ ಗುಂಡೂಮನೆ, ನೃಸಿಂಹ ಮುರೂರು ಭಾಗವಹಿಸುವರು. ಅರ್ಥಧಾರಿಗಳಾಗಿ ಡಾ. ಜಿ.ಎಲ್. ಹೆಗಡೆ, ಸವಿತಾ ಶಾಂತಾರಾಮ ಹಿರೇಮನೆ, ಸುಬ್ರಹ್ಮಣ್ಯ ಮೂರೂರು, ಇಡಗುಂಡಿ ಚಂದ್ರಕಲಾ ಭಟ್ಟ ಭಾಗವಹಿಸುವರು.