ಸಾರಾಂಶ
ಸಂಡೂರು: ತಾಲೂಕಿನ ಜೆಎಸ್‌ಡಬ್ಲೂ ಕಾರ್ಖಾನೆಯಲ್ಲಿನ ಅಪಘಾತಗಳ ನ್ಯಾಯಾಂಗ ತನಿಖೆ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಸಿಪಿಎಂ ತಾಲೂಕು ಸಮಿತಿ ಮುಖಂಡರು ಶುಕ್ರವಾರ ಪಟ್ಟಣದ ತಾಲೂಕು ಕಚೇರಿಯ ಮುಂಭಾಗ ಧರಣಿ ನಡೆಸಿದರು.
ನಂತರ ಮುಖಂಡರು ತಹಸೀಲ್ದಾರ್ ಜಿ. ಅನಿಲಕುಮಾರ್‌ಗೆ ಮನವಿ ಸಲ್ಲಿಸಿದರು.ಮನವಿ ಸಲ್ಲಿಸಿ ಮಾತನಾಡಿದ ಸಿಪಿಎಂ ಸಂಘಟನೆಯ ಜಿಲ್ಲಾ ಕಾರ್ಯದರ್ಶಿ ಜೆ. ಸತ್ಯಬಾಬು, ಮೇ ೯ರಂದು ಜೆಎಸ್‌ಡಬ್ಲೂ ಸ್ಟೀಲ್ ಕಾರ್ಖಾನೆಯ ಎಚ್.ಎಸ್‌ಎಂ. ೩ ಘಟಕದಲ್ಲಿ ನಡೆದ ದುರ್ಘಟನೆಯಲ್ಲಿ ಮೂವರು ಎಂಜಿನಿಯರ್‌ಗಳು ಮೃತಪಟ್ಟರು. ಅಪಘಾತ ನಡೆದು ೪೫ ದಿನಗಳಾದರೂ ಅಪಘಾತಕ್ಕೆ ಕಾರಣರಾದವರ ವಿರುದ್ಧ ಕೇಸ್ ದಾಖಲಿಸಿ ಬಂಧಿಸುವ ಪ್ರಕ್ರಿಯೆ ನಡೆದಿಲ್ಲ. ಮೃತ ಕಾರ್ಮಿಕರ ಪಾಲಕರು ಇತ್ತೀಚೆಗೆ ದುರ್ಘಟನೆಗೆ ಕಾರಣ ತಿಳಿಯಲು ಮತ್ತು ನ್ಯಾಯಕ್ಕಾಗಿ ಒತ್ತಾಯಿಸಿ ಕಾರ್ಖಾನೆಯ ಮುಂಭಾಗ ಧರಣಿ ನಡೆಸಿದರು. ಆಡಳಿತ ಮಂಡಳಿಯ ನಿರ್ಲಕ್ಷದಿಂದ ಈ ಅಪಘಾತ ಸಂಭವಿಸಿದರೂ ಮೃತರ ಮೇಲೆ ಇಲ್ಲಸಲ್ಲದ ಆರೋಪಗಳನ್ನು ಹೊರಿಸಿ, ಅಪಪ್ರಚಾರ ಮಾಡುತ್ತಿರುವುದು ಮೃತ ಕಾರ್ಮಿಕರ ಪಾಲಕರಿಗೆ ತುಂಬ ನೋವನ್ನುಂಟು ಮಾಡಿದೆ ಎಂದರು.
ಈ ಹಿಂದೆ ಕಾರ್ಖಾನೆಯಲ್ಲಿ ನಡೆದ ಹಲವು ಅಪಘಾತಗಳಲ್ಲಿ ಗಾಯಗೊಂಡವರಿಗೆ, ಮೃತಪಟ್ಟ ಕಾರ್ಮಿಕರಿಗೆ ಪರಿಹಾರ ಸಿಕ್ಕಿಲ್ಲ. ೨೦೧೮ರಲ್ಲಿ ಐಟಿಪಿಎಸ್ ಕಂಪನಿಯ ಕೋಕೋ ಫೋರ್ ನಲ್ಲಿ ಕೆಲಸ ಮಾಡುತ್ತಿದ್ದ ದೇವಲಾಪುರದ ಕಾರ್ಮಿಕ ಶ್ರೀಧರ ಒಡೆಯರ್ ಕಾರ್ಖಾನೆಯಲ್ಲಿನ ಅಪಘಾತದಿಂದಾಗಿ ಅಂಗವಿಕಲನಾಗಿದ್ದಾನೆ. ಯು. ರಾಜಾಪುರ ಗ್ರಾಮದ ಹೊನ್ನೂರ್‌ಸ್ವಾಮಿ ತ್ಯಾಜ್ಯ ಸಂಗ್ರಹ ಪ್ರದೇಶದಲ್ಲಿ ಕಬ್ಬಿಣ ಹುಡುಕುವಾಗ ಗುಡ್ಡ ಕುಸಿದು ಮೃತಪಟ್ಟಿದ್ದ. ಈ ಕಾರ್ಮಿಕ ಕುಟುಂಬಗಳಿಗೆ ನ್ಯಾಯಯುತ ಪರಿಹಾರ ಸಿಕ್ಕಿಲ್ಲ. ಇಂತಹ ಸಮಸ್ಯೆಗಳ ಕುರಿತು ಚರ್ಚಿಸಲು ತಾಲೂಕು ಮ್ಯಾಜಿಸ್ಟ್ರೇಟ್ ನೇತೃತ್ವದಲ್ಲಿ ಕಂಪನಿ ಆಡಳಿತ ಮಂಡಳಿ ಸಭೆ ಕರೆಯಬೇಕೆಂದು ಒತ್ತಾಯಿಸಿದರು.ಅಪಘಾತಕ್ಕೆ ಕಾರಣರಾದ ಕಾರ್ಖಾನೆಯ ಮುಖ್ಯಸ್ಥರನ್ನು ಬಂಧಿಸಬೇಕು. ಅಪಘಾತ ಕುರಿತಂತೆ ಸರ್ಕಾರದ ಅಧಿಕಾರಿಗಳು ಹಾಗೂ ಸಂಘಟನೆಗಳ ಮೇಲೆ ಸುಳ್ಳು ಪ್ರಚಾರ ಮಾಡುವುದನ್ನು ತಡೆಯಬೇಕು. ಕೈಗಾರಿಕಾ ಅಪಘಾತಗಳನ್ನು ತಡೆಯಲು ಕಠಿಣ ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಸಿಪಿಎಂ ಸಂಘಟನೆ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜೆ.ಎಂ. ಚನ್ನಬಸಯ್ಯ, ತಾಲೂಕು ಕಾರ್ಯದರ್ಶಿ ಎ.ಸ್ವಾಮಿ, ಸದಸ್ಯರಾದ ತಿಪ್ಪೇಸ್ವಾಮಿ ಕುಡುತಿನಿ, ಎನ್.ಸಂಕಣ್ಣ, ಡಿವೈಎಫ್‌ಐ ಕಾರ್ಯದರ್ಶಿ ಕಾಲುಬಾ, ದೇವದಾಸಿ ಮಹಿಳೆಯರ ವಿಮೋಚನಾ ಸಂಘದ ತಾಲೂಕು ಘಟಕದ ಕಾರ್ಯದರ್ಶಿ ಎಚ್.ದುರ್ಗಮ್ಮ, ಶ್ರೀಧರ್ ಒಡೆಯರ್, ರೋಹಿತ್ ಒಡೆಯರ್, ರತ್ನಮ್ಮ, ಮರಿಯಮ್ಮ, ಮಂಜಮ್ಮ, ಗಂಗಮ್ಮ, ಓಬಳಸಪ್ಪ, ಮಾರಪ್ಪ, ರಾಜ, ಗಂಗಪ್ಪ, ಗವಿಸಿದ್ಧ, ಭೀಮಣ್ಣ ಉಪಸ್ಥಿತರಿದ್ದರು.