ಎಸ್‌ಸಿಪಿ, ಎಸ್‌ಪಿ ಹಣ ಬೇರೆ ಯೋಜನೆ ಗಳಿಗೆ ಬಳಸಬಾರದು. ಬಳಸಿರುವ ಹಣ ವಾಪಸ್ ದಲಿತರ ಅಭಿವೃದ್ಧಿಗೆ ಮೀಸಲಿಡಬೇಕು

ಕನ್ನಡಪ್ರಭ ವಾರ್ತೆ ಚಿಕ್ಕಮಗಳೂರು

ದಲಿತ ಸಮುದಾಯಕ್ಕೆ ರಾಜ್ಯ ಬಜೆಟ್‌ನಲ್ಲಿ ಅನ್ಯಾಯಗವಾಗದೇ ಶೇ.4.1ರಷ್ಟು ಜನಸಂಖ್ಯಾನುಸಾರವಾಗಿ ತಕ್ಕ ನ್ಯಾಯ ಒದಗಿಸಬೇಕು ಎಂದು ಒತ್ತಾಯಿಸಿ ದಲಿತ ಸಂಘರ್ಷ ಸಮಿತಿ ಮುಖಂಡರು ನಗರದ ಆಜಾದ್‌ಪಾರ್ಕ್ ವೃತ್ತದಲ್ಲಿ ಬುಧವಾರ ಪ್ರತಿಭಟನೆ ನಡೆಸಿದರು.

ಈ ಕುರಿತು ದಸಂಸ ಮೈಸೂರು ವಿಭಾಗೀಯ ಸಂಘಟನಾ ಸಂಚಾಲಕ ಪಿ.ಟಿ.ಚಂದ್ರಶೇಖರ್ ಮಾತನಾಡಿ, ಎಸ್‌ಸಿ, ಎಸ್ಟಿ ಮೀಸಲಾತಿಗೆ ನಿಗಧಿಪಡಿಸಿದ ಆದಾಯ ಮಿತಿ ವಾರ್ಷಿಕ ₹15 ಲಕ್ಷಕ್ಕೆ ಏರಿಸಬೇಕು. ಎಸ್‌ಸಿಪಿ, ಎಸ್‌ಪಿ ಹಣ ಬೇರೆ ಯೋಜನೆ ಗಳಿಗೆ ಬಳಸಬಾರದು. ಬಳಸಿರುವ ಹಣ ವಾಪಸ್ ದಲಿತರ ಅಭಿವೃದ್ಧಿಗೆ ಮೀಸಲಿಡಬೇಕು ಎಂದು ಹೇಳಿದರು.

ಕೆಎಸ್‌ಎಫ್‌ಸಿ ಮತ್ತು ಬ್ಯಾಂಕ್‌ಗಳಿಂದ ದಲಿತರಿಗೆ ಶೇ.4 ಬಡ್ಡಿಯಂತೆ ₹10 ಕೋಟಿ ಉದ್ಯಮ ನಡೆಸಲು ಸಾಲ ಸೌಲಭ್ಯ ನೀಡುವ ಯೋಜನೆಗಳಲ್ಲಿರುವ ಷರತ್ತು ಸಡಿಲಪಡಿಸಿ ನಗರ ಪ್ರದೇಶದಲ್ಲಿ ನಿವೇಶನ, ಮನೆ ಇತರೆ ಚರಾಸ್ತಿಗಳ ಕೋಲ್ಯಾಟ ರಲ್ ಇರಬೇಕು ಎಂಬ ನಿಯಮ ರೂಪಿಸಬೇಕು ಎಂದು ಆಗ್ರಹಿಸಿದರು.


ಎಸ್ಸಿ,ಎಸ್ಟಿ ಹಾಸ್ಟೆಲ್‌ಗಳಿಗೆ ಪೀಠೋಪಕರಣ, ಪಾಠೋಪಕರಣಗಳು ಸಮರ್ಪಕವಾಗಿ ಪೂರೈಕೆ ಮಾಡಬೇಕು. ಹಾಸ್ಟೆಲ್ ಬಯಸಿ ಅರ್ಜಿ ಸಲ್ಲಿಸುವ ಎಲ್ಲಾ ಎಸ್ಸಿ, ಎಸ್ಟಿ ವಿದ್ಯಾರ್ಥಿಗಳಿಗೆ ಪ್ರವೇಶ ನೀಡಬೇಕು. ಪ್ರತಿ ಗ್ರಾಮದಲ್ಲಿ ದಲಿತರಿಗೆ ಸ್ಮಶಾನ ಭೂಮಿ ಇರಿಸಬೇಕು. ಸಮಾಜ ಕಲ್ಯಾಣ ಇಲಾಖೆ ಅಧೀನದಲ್ಲಿ ಎಲ್ಲಾ ನಿಗಮ ಮಂಡಳಿಗೆ ಸಾಲಕ್ಕಾಗಿ ಅರ್ಜಿ ಸಲ್ಲಿಸಲು ಅರ್ಹ ಫಲಾನುಭವಿಗೆ ಸಾಲ ಮಂಜೂರು ಮಾಡಬೇಕು ಎಂದು ಹೇಳಿದರು.

ರಾಜ್ಯದಲ್ಲಿ ನಾಗರಿಕ ಹಕ್ಕುಗಳ ರಕ್ಷಣೆ ಕಾಯಿದೆ ಮತ್ತು ದೌರ್ಜನ್ಯ ತಡೆಕಾಯ್ದೆಗಳ ಅನುಷ್ಟಾನ ಸಮರ್ಪಕವಾಗಿಲ್ಲ. ಅಪರಾಧ ಗಳ ಪತ್ತೆ ಮತ್ತು ವಿಚಾರಣೆ ಸರಿಯಾಗಿ ನಡೆದು ರಕ್ಷಣೆಯಾಗುವ ಪ್ರಮಾಣ ಸರಿಯಾಗಿ ಆಗುವಂತೆ ನಿಗಾವಹಿಸಲು ಪ್ರತ್ಯೇಕ ಸಮಿತಿ ಸ್ಥಾಪಿಸಬೇಕು ಎಂದರು.

ಅರ್ಚಕ ಮತ್ತು ಪೌರಕಾರ್ಮಿಕ ವೃತ್ತಿ ಸಾರ್ವತ್ರಿಕಗೊಳಿಸಬೇಕು. ಈ 2 ವೃತ್ತಿಗಳಲ್ಲಿ ಮೀ ಸಲಾತಿ ನೀತಿ ಅನುಷ್ಟಾನಕ್ಕೆ ತರ ಬೇಕು. ಹಂಗಾಮಿ ಪೌರಕಾರ್ಮಿಕರನ್ನು ಖಾಯಂಗೊಳಿಸಬೇಕು. ಖಾಸಗೀ ಕ್ಷೇತ್ರಗಳಲ್ಲಿ ಸಾಮಾಜಿಕ ನ್ಯಾಯದ ಹಿನ್ನೆಲೆ ಮೀಸಲಾತಿ ಜಾರಿಗೊಳಿಸಬೇಕು. ಎಸ್ಸಿ, ಎಸ್ಟಿ ಸಮುದಾಯ ಬ್ಯಾಕ್ ಲಾಗ್ ಹುದ್ದೆ ಭರ್ತಿ ಮಾಡಬೇಕು ಎಂದು ತಿಳಿಸಿದರು.

ಆ ನಿಟ್ಟಿನಲ್ಲಿ ರಾಜ್ಯಾದ್ಯಂತ ಇಂದು ಪ್ರತಿ ಜಿಲ್ಲಾ ಕೇಂದ್ರದಲ್ಲಿ ದಸಂಸ ಪ್ರತಿಭಟನೆ ನಡೆಸುತ್ತಿದ್ದು, ರಾಜ್ಯ ಸರ್ಕಾರ ಈ ಬಾರಿ ಬಜೆಟ್‌ನಲ್ಲಿ ದಲಿತರ ಅಭಿವೃದ್ಧಿಗೆ ಅನುದಾನ ಮೀಸಲಿರಿಸಿ, ದಲಿತರಿಗೆ ಬಳಸಬೇಕು ಎಂದು ಒತ್ತಾಯಿಸಿದರು.

ಈ ವೇಳೆ ದಸಂಸ ಮುಖಂಡರಾದ ಅಶೋಕ್ ರಾಜರತ್ನಂ, ಸುರೇಶ್, ರವೀಂದ್ರ, ಪುಟ್ಟಸ್ವಾ ಮಿ, ದಿವಾಕರ್, ಮರ್ಲೆ ಅಣ್ಣಯ್ಯ, ಶ್ರೀನಿವಾಸ್, ಸಣ್ಣಯ್ಯ, ಕೃಷ್ಣಮೂರ್ತಿ, ಮಂಜಯ್ಯ, ಸ್ಪಂದನ, ಸುಜಾತ, ಗಿರಿಜ, ಶಾರದ, ಭೀಮಯ್ಯ ಮೊದಲಾದವರಿದ್ದರು.