ಸಾರಾಂಶ
ವೈದ್ಯಕೀಯ ಶಿಕ್ಷಣಕ್ಕೆ ತೀವ್ರ ಸ್ಪರ್ಧೆ ನಡೆಯುತ್ತಿದ್ದು, ಇದರ ದುರ್ಲಾಭವನ್ನು ಎನ್‌ಟಿಎ ಮತ್ತು ಕೋಚಿಂಗ್ ಸಂಸ್ಥೆಗಳು ಪಡೆಯುತ್ತಿವೆ. ನೀಟ್ ಯುಜಿಯಲ್ಲಿನ ಭ್ರಷ್ಟಾಚಾರವು ಹೊರ ಬಿದ್ದಿರುವ ಬೆನ್ನಲ್ಲೇ, ಎನ್‌ಟಿಎಯಿಂದ ಆಯೋಜಿಸಲ್ಪಟ್ಟ ನೆಟ್ ಪರೀಕ್ಷೆಯನ್ನು ಶಿಕ್ಷಣ ಸಚಿವಾಲಯವು ರದ್ದುಗೊಳಿಸಿದೆ.
ಧಾರವಾಡ:
ನೀಟ್ ಹಾಗೂ ಎನ್‌ಇಟಿ ಹಗರಣ ವಿರೋಧಿಸಿ ಎನ್‌ಟಿಎ ರದ್ದುಪಡಿಸಬೇಕೆಂದು ಆಗ್ರಹಿಸಿ ನಗರದ ವಿವೇಕಾನಂದ ವೃತ್ತದಲ್ಲಿ ಎಐಡಿಎಸ್‌ಒ ನೇತೃತ್ವದಲ್ಲಿ ನೂರಾರು ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದರು.ಸಂಘಟಕ ರವಿಕಿರಣ್ ಜೆ.ಪಿ. ಮಾತನಾಡಿ, ವೈದ್ಯಕೀಯ ಶಿಕ್ಷಣಕ್ಕೆ ತೀವ್ರ ಸ್ಪರ್ಧೆ ನಡೆಯುತ್ತಿದ್ದು, ಇದರ ದುರ್ಲಾಭವನ್ನು ಎನ್‌ಟಿಎ ಮತ್ತು ಕೋಚಿಂಗ್ ಸಂಸ್ಥೆಗಳು ಪಡೆಯುತ್ತಿವೆ. ನೀಟ್ ಯುಜಿಯಲ್ಲಿನ ಭ್ರಷ್ಟಾಚಾರವು ಹೊರ ಬಿದ್ದಿರುವ ಬೆನ್ನಲ್ಲೇ, ಎನ್‌ಟಿಎಯಿಂದ ಆಯೋಜಿಸಲ್ಪಟ್ಟ ನೆಟ್ ಪರೀಕ್ಷೆಯನ್ನು ಶಿಕ್ಷಣ ಸಚಿವಾಲಯವು ರದ್ದುಗೊಳಿಸಿದೆ. ಇದರ ಅರ್ಥ ಏನು ಎಂದು ಪ್ರಶ್ನಿಸಿದರು. ಎನ್‌ಟಿಎ ಪ್ರದರ್ಶಿಸುತ್ತಿರುವ ಬೇಜವಾಬ್ದಾರಿ, ಅಸಮರ್ಥತೆ ಮತ್ತು ಪಾರದರ್ಶಕತೆಯ ಕೊರತೆಯು ಮಿಲಿಯಾಂತರ ಅಭ್ಯರ್ಥಿಗಳ ಭವಿಷ್ಯವನ್ನು ಅತಂತ್ರಕ್ಕೆ ದೂಡಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸಂಘಟನೆ ಜಿಲ್ಲಾ ಕಾರ್ಯದರ್ಶಿ ಶಶಿಕಲಾ ಮೇಟಿ ಮಾತನಾಡಿ, ವ್ಯಾಪಾರೀಕರಣ, ಅನಾರೋಗ್ಯ ಪೀಡಿತ ಸ್ಪರ್ಧೆ ಮತ್ತು ವ್ಯಾಪಕ ಭ್ರಷ್ಟಾಚಾರವು ಜಾರಿಯಲ್ಲಿರುವಾಗ ಒಂದು ಕೇಂದ್ರೀಕೃತ ಪರೀಕ್ಷೆಯು ಭ್ರಷ್ಟಾಚಾರದ ಏಕಸ್ವಾಮ್ಯಾಧಿಕಾರವನ್ನುಂಟು ಮಾಡಬಲ್ಲದೆ ಹೊರತು, ಈ ಯಾವ ಸಮಸ್ಯೆಯನ್ನೂ ಪರಿಹರಿಸುವುದಿಲ್ಲ. ಈ ಹಿನ್ನೆಲೆಯಲ್ಲಿ ನೀಟ್ ಮತ್ತು ನೆಟ್ ಪರೀಕ್ಷೆಗಳಲ್ಲಿ ನಡೆದಿರುವ ಅಕ್ರಮದ ಕುರಿತು ನ್ಯಾಯಾಂಗ ತನಿಖೆ ನಡೆಸಬೇಕು. ಪ್ರಕರಣವು ತಾರ್ಕಿಕ ಅಂತ್ಯ ತಲುಪುವ ವರೆಗೂ ನೀಟ್ ಕೌನ್ಸೆಲಿಂಗ್ ತಡೆಹಿಡಿಯಬೇಕು. ನೆಟ್ ಮರುಪರೀಕ್ಷೆಯ ದಿನಾಂಕವನ್ನು ಕೂಡಲೇ ಪ್ರಕಟಿಸಿ, ನೇರವಾಗಿ ಯುಜಿಸಿಯೇ ಪರೀಕ್ಷೆ ನಡೆಸಬೇಕು ಹಾಗೂ ರಾಜ್ಯಮಟ್ಟದಲ್ಲಿಯೇ ವೈದ್ಯಕೀಯ ಪ್ರವೇಶ ಪರೀಕ್ಷೆ ನಡೆಸಬೇಕೆಂದು ಎಂದು ಆಗ್ರಹಿಸಿದರು.ಜಿಲ್ಲಾಧ್ಯಕ್ಷರಾದ ಸಿಂಧೂ ಕೌದಿ, ಸ್ಫೂರ್ತಿ ಚಿಕ್ಕಮಠ ಹಾಗೂ ನೂರಾರು ವಿದ್ಯಾರ್ಥಿಗಳು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.