ಸಾರಾಂಶ
ರೈತರ ಬೆಳೆಯುವ ಎಲ್ಲ ಕೃಷಿ ಉತ್ಪನ್ನಗಳನ್ನು ಕನಿಷ್ಠ ಬೆಂಬಲ ಬೆಲೆ ಖಾತರಿ ನೀಡುವ ಕಾನೂನು ಜಾರಿ ಮಾಡಬೇಕು ಎಂಬುದೂ ಸೇರಿದಂತೆ ವಿವಿಧ ಬೇಡಿಕೆ ಈಡೇರಿಸಲು ಆಗ್ರಹಿಸಿ ಸೋಮವಾರ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯಿಂದ ಗದಗ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಾಯಿತು.
ಗದಗ: ರೈತರ ಬೆಳೆಯುವ ಎಲ್ಲ ಕೃಷಿ ಉತ್ಪನ್ನಗಳನ್ನು ಕನಿಷ್ಠ ಬೆಂಬಲ ಬೆಲೆ ಖಾತರಿ ನೀಡುವ ಕಾನೂನು ಜಾರಿ ಮಾಡಬೇಕು ಎಂಬುದೂ ಸೇರಿದಂತೆ ವಿವಿಧ ಬೇಡಿಕೆ ಈಡೇರಿಸಲು ಆಗ್ರಹಿಸಿ ಸೋಮವಾರ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯಿಂದ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಾಯಿತು.
ರೈತರ ಎಲ್ಲ ರೀತಿಯ ಕೃಷಿ ಸಾಲಗಳನ್ನು ಮನ್ನಾ ಮಾಡಬೇಕು. ವಿದ್ಯುತ್ ಖಾಸಗೀಕರಣ ಮಾಡಬಾರದು. ವಿವಿಧ ಕಡೆ ನಡೆಯುತ್ತಿರುವ ಖಾಸಗೀಕರಣ ಕೂಡಲೇ ನಿಲ್ಲಿಸಬೇಕು. ಐತಿಹಾಸಿಕ ದೆಹಲಿ ರೈತ ಹೋರಾಟ ಮುಂದಿಟ್ಟಿದ್ದ ಎಲ್ಲ ಹಕ್ಕೊತ್ತಾಯಗಳನ್ನು ಈಡೇರಿಸಬೇಕು. 60 ವರ್ಷ ದಾಟಿರುವ ಎಲ್ಲ ಕೃಷಿಕರಿಗೆ ₹5000 ಮಾಸಿಕ ಪಿಂಚಣಿ ನೀಡಬೇಕು. ರೈತ ವಿರೋಧಿ, ಕರಾಳ ಕೃಷಿ ಕಾಯ್ದೆಯ ತದ್ರೂಪಿಯಾಗಿರುವ ಕೃಷಿ ಮಾರುಕಟ್ಟೆ ರಾಷ್ಟ್ರೀಯ ಚೌಕಟ್ಟು ಧೋರಣೆ ವಾಪಸ್ ಪಡೆಯಬೇಕು ಎಂದು ಒತ್ತಾಯಿಸಿದರು.ರೈತರ ಕೃಷಿ ಉತ್ಪನ್ನಗಳಿಗೆ ಕನಿಷ್ಠ ಬೆಂಬಲ ಬೆಲೆ ಖಾತರಿಗೆ ಕಾನೂನು ಜಾರಿ, ಸಾಲ ಮನ್ನಾ ಮುಂತಾದ ಆಗ್ರಹಗಳನ್ನು ಈಡೇರಿಸುವಂತೆ ಒತ್ತಾಯಿಸಿ ಅಮರಣಾಂತ ಉಪವಾಸ ಕುಳಿತಿರುವ ಹಿರಿಯ ರೈತ ನಾಯಕ ಜಗಜಿತ್‌ಸಿಂಗ್ ದಲ್ಲೆವಾಲ ಅವರ ಪ್ರಾಣ ಉಳಿಸಲು ತಕ್ಷಣ ಮಧ್ಯಪ್ರವೇಶಕ್ಕೆ ಆಗ್ರಹಿಸಿದರು.
ಕರಾಳ ಕೃಷಿ ಕಾಯ್ದೆಗಳನ್ನು ಹಿಂಬಾಗಿಲ ಮೂಲಕ ಜಾರಿ ಮಾಡಲಾಗುತ್ತಿದೆ. ಕೃಷಿ ಉತ್ಪನ್ನ ಮಾರುಕಟ್ಟಿ ನಿಯಂತ್ರಣವನ್ನು ರದ್ದುಪಡಿಸುವ ಕರಾಳ ಕೃಷಿ ಮಾರುಕಟ್ಟೆ ರಾಷ್ಟ್ರೀಯ ಚೌಕಟ್ಟು ಧೋರಣೆಯನ್ನು ಜಾರಿ ಮಾಡುವ ಪ್ರಯತ್ನ ನಡೆಸುತ್ತದೆ. ದೇಶಾದ್ಯಂತ ಎಲ್ಲ ರೈತರ ಪಂಪಸೆಟ್‌ಗಳಿಗೆ ಮೀಟರ್ ಆಳವಡಿಸಿ ವಿದ್ಯುತ್ ಪಾವತಿ ಮಾಡುವಂತೆ ರೈತರನ್ನು ಬಲವಂತಕ್ಕೆ ಒಳಪಡಿಸಲು ಆಧಾರ್ ಕಾರ್ಡ್ ಜೋಡಣೆ ಕಾರ್ಯ ಪೂರ್ಣಗೊಳಿಸಿದೆ. ಯಾವುದೇ ರೈತರ ಬೆಳೆಗಳನ್ನು ಸಕಾಲದಲ್ಲಿ ಬೆಂಬಲ ಬೆಲೆಯಲ್ಲಿ ಖರೀದಿಸುತ್ತಿಲ್ಲ. ಇಂತಹ ಹಲವು ರೈತ ವಿರೋಧಿ ಧೋರಣೆಗಳು ಹಾಗೂ ರೈತರ ಆಗ್ರಹಗಳನ್ನು ನಿರ್ಲಕ್ಷ್ಯ ಮಾಡಿದ್ದರೆ ಫಲವಾಗಿ ರೈತ ನಾಯಕರ ಪ್ರಾಣ ಹೋಗುವಂತಹ ಪರಿಸ್ಥಿತಿ ಉಂಟಾಗಿದೆ. ಈ ತಕ್ಷಣವೇ ರಾಷ್ಟ್ರಪತಿಗಳು, ಪ್ರಧಾನ ಮಂತ್ರಿಗಳು ಹಾಗೂ ಕೇಂದ್ರ ಸರ್ಕಾರ ಮಧ್ಯಪ್ರವೇಶ ಮಾಡಬೇಕು ಎಂದು ಮನವಿ ಮೂಲಕ ಒತ್ತಾಯಿಸಿದರು.ರೈತ ಸಂಘದ ಜಿಲ್ಲಾಧ್ಯಕ್ಷ ಮುತ್ತನಗೌಡ ಚೌಡರಡ್ಡಿ, ಜಿಲ್ಲಾ ಗೌರವಾಧ್ಯಕ್ಷ ಮಾಹದೇವಗೌಡ ಪಾಟೀಲ, ರಾಮಪ್ಪ ಸವಡಿ, ಬಾಳಪ್ಪ ಮೊರಬದ, ಗೋವಿಂದಪ್ಪ ತಳವಾರ, ಶರಣಪ್ಪ ಕೊಪ್ಪದ, ಶರಣಪ್ಪ ಜೋರಗತ್ತಿ, ಅಲಾಸಾಬ್ ಕಣಗಿನಾಳ ಇದ್ದರು.