ಹಳಿಯಾಳದಲ್ಲಿ ಆಶ್ರಯ ಯೋಜನೆಗಾಗಿ ಹಣದ ಬೇಡಿಕೆ?

| Published : Sep 13 2024, 01:39 AM IST

ಸಾರಾಂಶ

ಆಶ್ರಯ ಮನೆ ಯೋಜನೆಯಡಿ ಅರ್ಜಿ ಸಲ್ಲಿಸುವವರ ಸಂಖ್ಯೆಯು ಬೆಳೆಯಲಾರಂಭಿಸಿದೆ. ಇನ್ನೊಂದೆಡೆ ಆಶ್ರಯ ಮನೆಯನ್ನು ಹೇಗಾದರೂ ಮಾಡಿ ಪಡೆಯಬೇಕೆಂಬ ಹಠಕ್ಕೆ ಬಿದ್ದಿರುವ ಸಾರ್ವಜನಿಕರಿಂದ ಕೆಲವರು ಹಣ ಪಡೆಯುತ್ತಿದ್ದಾರೆ ಎಂಬ ದೂರುಗಳು ಕೇಳಿಬಂದಿವೆ.

ಓರ್ವೆಲ್‌ ಫರ್ನಾಂಡೀಸ್

ಹಳಿಯಾಳ: ಪಟ್ಟಣದಲ್ಲಿ ವಸತಿರಹಿತರಿಗೆ ನಿವೇಶನ ಹಾಗೂ ಆಶ್ರಯ ಮನೆಗಳ ನಿರ್ಮಾಣ ಮಾಡಲು 6 ಎಕರೆ ಜಮೀನು ಮಂಜೂರಾಗಿದ್ದು, ಕೆಲವರು ಅರ್ಜಿದಾರರಿಂದ ಹಣಕ್ಕೆ ಬೇಡಿಕೆ ಇಡುತ್ತಿದ್ದಾರೆ ಎಂಬ ದೂರುಗಳು ಕೇಳಿಬಂದಿವೆ.

ಶಾಸಕ ಆರ್.ವಿ. ದೇಶಪಾಂಡೆ ಅವರು ಪಟ್ಟಣದ ವಸತಿರಹಿತರಿಗೆ ನಿವೇಶನ ನೀಡಿ ಆಶ್ರಯ ಮನೆ ಕಟ್ಟಿಕೊಡಲು ಸರ್ಕಾರದಿಂದ ಆರು ಎಕರೆ ಜಮೀನು ಮಂಜೂರು ಮಾಡಿಸಿದ್ದಾರೆ. ಈ ಆರು ಎಕರೆ ಜಮೀನಿನಲ್ಲಿ ಅಂದಾಜು 208 ನಿವೇಶನಗಳು ನಿರ್ಮಾಣವಾಗುತ್ತಿದ್ದು, ಅದರಲ್ಲಿ 25 ನಿವೇಶನಗಳನ್ನು ಪುರಸಭೆಯು ಕಾಯ್ದಿರಿಸಲು ಮುಂದಾಗಿದೆ.

ಆಶ್ರಯ ಮನೆ ಯೋಜನೆಯಡಿ ಅರ್ಜಿ ಸಲ್ಲಿಸುವವರ ಸಂಖ್ಯೆಯು ಬೆಳೆಯಲಾರಂಭಿಸಿದೆ. ಇನ್ನೊಂದೆಡೆ ಆಶ್ರಯ ಮನೆಯನ್ನು ಹೇಗಾದರೂ ಮಾಡಿ ಪಡೆಯಬೇಕೆಂಬ ಹಠಕ್ಕೆ ಬಿದ್ದಿರುವ ಸಾರ್ವಜನಿಕರಿಂದ ಕೆಲವರು ಹಣ ಪಡೆಯುತ್ತಿದ್ದಾರೆ ಎಂಬ ದೂರುಗಳು ಕೇಳಿಬಂದಿವೆ.

ಈವರೆಗೆ ಪುರಸಭೆಗೆ 1800ಕ್ಕೂ ಹೆಚ್ಚು ಅರ್ಜಿಗಳು ಬಂದಿವೆ. ಇತ್ತೀಚೆಗೆ ಶಾಸಕ ಆರ್.ವಿ ದೇಶಪಾಂಡೆಯವರು ಆಶ್ರಯ ಸಮಿತಿಯ ಸಭೆ ನಡೆಸಿದರು. ಆಶ್ರಯ ಫಲಾನುಭವಿಗಳ ಆಯ್ಕೆ ಪ್ರಕ್ರಿಯೆ ಪಾರದರ್ಶಕವಾಗಿ ಹಾಗೂ ಭ್ರಷ್ಟಾಚಾರಕ್ಕೆ ಅವಕಾಶ ನೀಡದಂತೆ ನಡೆಸಲು ಸೂಚಿಸಿದರು. ಫಲಾನುಭವಿಗಳ ಆಯ್ಕೆಯಲ್ಲಿ ಭ್ರಷ್ಟಾಚಾರ ನಡೆದರೆ ಪುರಸಭೆ ಅಧಿಕಾರಿ, ಸಿಬ್ಬಂದಿ ಮೇಲೆ ಕಾನೂನು ಕ್ರಮ ಕೈಗೊಳ್ಳುವ ಎಚ್ಚರಿಕೆ ನೀಡಿದ್ದಾರೆ.

ಮರುಳಾಗಬೇಡಿ: ಅರ್ಜಿದಾರರು ಯಾರ ಮಾತಿಗೂ ಮರುಳಾಗಬೇಡಿ. ವಸತಿ ಯೋಜನೆಯಲ್ಲಿ ಯಾರಿಗಾದರೂ ಹಣ ನೀಡಿರುವುದು ಕಂಡುಬಂದರೆ ಅವರ ಆಯ್ಕೆಯನ್ನು ರದ್ದುಪಡಿಸಲಾಗುವುದು. ನಾನೇ ಖುದ್ದು ಆಶ್ರಯ ಫಲಾನುಭವಿಗಳ ಆಯ್ಕೆಯನ್ನು ನಡೆಸಲಿದ್ದೇನೆ. ಅರ್ಹರು, ಬಡವರು ಮತ್ತು ವಸತಿರಹಿತರನ್ನು ಆಯ್ಕೆ ಮಾಡುತ್ತೇನೆ ಎಂದು ಶಾಸಕ ಆರ್.ವಿ. ದೇಶಪಾಂಡೆ ತಿಳಿಸಿದರು.ಗಾಳಿಸುದ್ದಿ: ಶಾಸಕರ ಅಧ್ಯಕ್ಷತೆಯಲ್ಲಿ ನಿಗದಿಪಡಿಸಿದ ಮೀಸಲಾತಿಯಂತೆ ಅರ್ಹ ಫಲಾನುಭವಿಗಳ ಆಯ್ಕೆ ಪಾರದರ್ಶಕವಾಗಿ ನಡೆಯಲಿದೆ. ಆಶ್ರಯ ಯೋಜನೆಗಾಗಿ ಅರ್ಜಿ ಸಲ್ಲಿಸಿದವರು ಗಾಳಿಸುದ್ದಿ ನಂಬಿ ಮೋಸ ಹೋಗಬೇಡಿ ಎಂದು ಪುರಸಭೆ ಮುಖ್ಯಾಧಿಕಾರಿ ಅಶೋಕ ಸಾಳೆನ್ನವರ ತಿಳಿಸಿದರು.